ಸಾರಾಂಶ
ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ನುಡಿ ನಿತ್ಯೋತ್ಸವ ಕಾರ್ಯಕ್ರಮ
ಕನ್ನಡಪ್ರಭವಾರ್ತೆ, ನರಸಿಂಹರಾಜಪುರಬೇರೆ ರಾಜ್ಯಗಳಿಂದ ಬಂದು ರಾಜ್ಯದಲ್ಲಿ ನೆಲೆಸಿದ ಸಾವಿರಾರು ಬೇರೆ ಭಾಷಿಗರಿಗೆ ಕನ್ನಡಗರು ಉದಾರ ಮನಸ್ಸಿನಿಂದ ನೆಲೆಸಲು ಅವಕಾಶ ನೀಡಿದ್ದಾರೆ ಎಂದು 2026 ರಲ್ಲಿ ನೆದರ್ ಲ್ಯಾಂಡ್ ನಲ್ಲಿ ನಡೆಯುವ ಸೌಂದರ್ಯ ಸ್ಪರ್ಧೆಯಲ್ಲಿ ಭಾರತ ಪ್ರತಿನಿಧಿಸಲಿರುವ ದ್ವಾರಮಕ್ಕಿ ಗ್ರಾಮದ ಸನ್ಮತಿ ರಕ್ಷಿತ್ ಹೇಳಿದರು.ತಾಲೂಕಿನ ಮೆಣಸೂರು ಗ್ರಾಮದ ಮೌಂಟ್ ಕಾರ್ಮಲ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ತಾಲೂಕು ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ನಡೆದ ನುಡಿ ನಿತ್ಯೋತ್ಸವದಲ್ಲಿ ಕನ್ನಡ ಭಾಷೆ ಎಂಬ ವಿಷಯದ ಬಗ್ಗೆ ಮಾತನಾಡಿದರು. ಕರುನಾಡು ದಯೆಯ ನಾಡಾಗಿದೆ. ಕನ್ನಡಿಗರು ಸಂಕುಚಿತ ಮನಸ್ಸು ಮಾಡದೆ ಬೇರೆ ಭಾಷಿಗರಿಗೆ ಗೌರವ ನೀಡುತ್ತಾರೆ. ಆದ್ದರಿಂದ ಬೇರೆ ಭಾಷಿಗರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಕನ್ನಡ ಭಾಷೆಗೆ ಗೌರವ ಕೊಡಬೇಕು. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ, ಪರಂಪರೆಯಿದ್ದು 8 ಜ್ಞಾನ ಪೀಠ ಪ್ರಶಸ್ತಿ ಬಂದಿದೆ. ಕನ್ನಡಿಗರು ಮೊದಲು ಕನ್ನಡದಲ್ಲೇ ಮಾತನಾಡಬೇಕು . ಆಗ ಕನ್ನಡ ಭಾಷೆ ತಾನಾಗೇ ಬೆಳೆಯುತ್ತದೆ ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸ್ವತಂತ್ರ ಬದುಕು ರೂಪಿಸಿಕೊಳ್ಳಬೇಕು. ಯುವ ಜನರು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಓದುವ ಹವ್ಯಾಸ ಹಾಗೂ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು.ವಿದ್ಯಾರ್ಥಿ ಜೀವನದಲ್ಲಿ ಸಿಕ್ಕ ಅವಕಾಶ ಸದ್ಪಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು. ಬಾಳೆಹೊನ್ನೂರಿನ ಸಮಾಜ ಸೇವಕಿ ಕೋಕಿಲ ಆಶಯನುಡಿಗಳನ್ನಾಡಿ, ಕನ್ನಡದ ಬಗ್ಗೆ ಕನ್ನಡಿಗರಿಗೆ ತಾತ್ಸಾರ ಮನೋಭಾವವಿದೆ. ಮನೆಯಲ್ಲಿ ಮಕ್ಕಳೊಂದಿಗೆ ತಾಯಂದಿರು ಕನ್ನಡದಲ್ಲಿ ಮಾತನಾಡಬೇಕು. ಕನಿಷ್ಠ 5ನೇ ತರಗತಿ ವರೆಗಾದರೂ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಓದಿಸಬೇಕು. ವೃತ್ತಿ ಬದುಕಿಗೆ ಇಂಗ್ಲಿಷ್ ಅನಿವಾರ್ಯ ಕನ್ನಡದ ಬಗ್ಗೆ ಕೀಳಿರಿಮೆ ಬೇಡ. ನಾಡಿನ ನೆಲ, ಜಲ ಬಳಸಿಕೊಂಡು ಬದುಕುತ್ತಿರುವ ಪ್ರತಿಯೊಬ್ಬರು ಕನ್ನಡ ಭಾಷೆಯ ಬಗ್ಗೆ ಗೌರವಕೊಟ್ಟು ಅದನ್ನು ಬಳಸಬೇಕು ಎಂದರು.ಇನ್ನರ್ ವ್ಹೀಲ್ ಸಂಸ್ಥೆ ಅಧ್ಯಕ್ಷೆ ಭವ್ಯ ಸಂತೋಷ್ ಮಾತನಾಡಿ, ಭಾಷೆ ಸದೃಢವಾಗಿ ಬೆಳೆಯಬೇಕಾದರೆ ಸಾಹಿತ್ಯ, ಸಂಸ್ಕೃತಿ ಯುವ ಪೀಳಿಗೆಗೆ ತಲುಪಬೇಕು. ಮಕ್ಕಳು ಸಾಹಿತ್ಯಾಸಕ್ತಿ ಬೆಳೆಸಿಕೊಂಡು ಪುಸ್ತಕಗಳನ್ನು ಓದುವ ಹವ್ಯಾಸ ಮಾಡಿ ಎಂದರು.
ಮೆಣಸೂರಿನ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶುಭಾ ಉದ್ಘಾಟಿಸಿದರು. ಅತಿಥಿಗಳಾಗಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಾಸತೀಶ್, ದಂತ ವೈದ್ಯೆ ಡಾ.ಸ್ವಪ್ನಾಲಿ ಮಹೇಶ್ ಇದ್ದರು.ರೇಖಾ ಮೋಹನ್ ಸ್ವಾಗತಿಸಿದರು. ಉಪನ್ಯಾಸಕರಾದ ಐ.ಎಂ.ರಾಜೀವ ಕಾರ್ಯಕ್ರಮ ನಿರೂಪಿಸಿದರು. ಸ್ವಪ್ನ ಹೆಗ್ಡೆ ವಂದಿಸಿದರು.