ಕನ್ನಂಬಾಡಿಯಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ

| Published : May 02 2025, 12:07 AM IST

ಸಾರಾಂಶ

ಪೂರ್ವಿಕರನ್ನು ಹೆಚ್ಚಾಗಿ ಕಾಡುತ್ತಿದ್ದ ಪ್ಲೇಗು, ಕಾಲರಾ, ಮಲೇರಿಯಾ, ದಡಾರ ಸೇರಿದಂತೆ ಯಾವುದೇ ಕಾಯಿಲೆಗಳು ಬಾರದಿರಲಿ, ಮಳೆ ಬೆಳೆ ಚೆನ್ನಾಗಿ ಆಗಲಿ, ಎಲ್ಲಾ ಜನಾಂಗಗಳ ಜನತೆಯ ನಡುವೆ ಬಾಂಧವ್ಯ ಇರಲಿ ಎನ್ನುವ ದೃಷ್ಟಿಯಿಂದ ಶ್ರೀ ಕನ್ನಂಬಾಡಿಯಮ್ಮ ದೇವಿಯ ಹಬ್ಬ ಆಚರಿಸುತ್ತಿದ್ದರು. ಕೆಲವು ಕಾರಣಗಳಿಂದ ಈ ಹಬ್ಬ ನಿಂತು ಹೋಗಿತ್ತು. ಶ್ರೀ ಕನ್ನಂಬಾಡಿಯಮ್ಮದೇವಿಯೇ ಪ್ರೇರಣೆ ನೀಡಿ, ಮತ್ತೆ ಹಬ್ಬ ಆಚರಿಸಲು ಜನರು ಮುಂದಾದ ಕಾರಣದಿಂದ ೨೦೨೨ರ ನವೆಂಬರ್ ೧೯ರಂದು ಪುನಃ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ನಾಲ್ಕನೇ ವಾರ್ಡಿನ ಮಡಿವಾಳರು, ಉಪ್ಪಾರರು, ದಾಸಗೌಡರು, ನಾಯಕರು, ಕುಂಬಾರರು, ರಾಯರಾವತ್ ಹಾಗೂ ಇತರ ಜನಾಂಗದ ಜನರು ೩ ವರ್ಷಕ್ಕೆ ಒಮ್ಮೆ ಆಚರಿಸುವ ವೈಭವದ ಶ್ರೀ ಕನ್ನಂಬಾಡಿಯಮ್ಮದೇವಿ ಕಳಸ ಹಾಗೂ ಜಾತ್ರಾ ಮಹೋತ್ಸವದ ೩ ದಿನದ ಪೂಜಾ ಮಹೋತ್ಸವಕ್ಕೆ ಗುರುವಾರ ವೈಭವದಿಂದ ಚಾಲನೆ ನೀಡಲಾಯಿತು.

ಪುರಸಭಾ ಸದಸ್ಯ ಮಧು ಮಾತನಾಡಿ, ಪೂರ್ವಿಕರನ್ನು ಹೆಚ್ಚಾಗಿ ಕಾಡುತ್ತಿದ್ದ ಪ್ಲೇಗು, ಕಾಲರಾ, ಮಲೇರಿಯಾ, ದಡಾರ ಸೇರಿದಂತೆ ಯಾವುದೇ ಕಾಯಿಲೆಗಳು ಬಾರದಿರಲಿ, ಮಳೆ ಬೆಳೆ ಚೆನ್ನಾಗಿ ಆಗಲಿ, ಎಲ್ಲಾ ಜನಾಂಗಗಳ ಜನತೆಯ ನಡುವೆ ಬಾಂಧವ್ಯ ಇರಲಿ ಎನ್ನುವ ದೃಷ್ಟಿಯಿಂದ ಶ್ರೀ ಕನ್ನಂಬಾಡಿಯಮ್ಮ ದೇವಿಯ ಹಬ್ಬ ಆಚರಿಸುತ್ತಿದ್ದರು. ಕೆಲವು ಕಾರಣಗಳಿಂದ ಈ ಹಬ್ಬ ನಿಂತು ಹೋಗಿತ್ತು. ಶ್ರೀ ಕನ್ನಂಬಾಡಿಯಮ್ಮದೇವಿಯೇ ಪ್ರೇರಣೆ ನೀಡಿ, ಮತ್ತೆ ಹಬ್ಬ ಆಚರಿಸಲು ಜನರು ಮುಂದಾದ ಕಾರಣದಿಂದ ೨೦೨೨ರ ನವೆಂಬರ್ ೧೯ರಂದು ಪುನಃ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪೂರ್ವಿಕರ ಆಚರಣೆಯಲ್ಲಿ ಇಂದಿಗೂ ಜನರಲ್ಲಿ ಗೌರವ, ಭಯ, ಭಕ್ತಿ ಇದೆ ಎಂಬುದನ್ನು ತೋರುತ್ತದೆ. ಜತೆಗೆ ಸಂತಸ ತಂದಿದೆ ಎಂದು ತಿಳಿಸಿ, ಭಾನುವಾರ ಕನ್ನಂಬಾಡಿಕಟ್ಟೆಗೆ ತೆರಳಿ ಕನ್ನಂಬಾಡಿಯಮ್ಮದೇವಿಗೆ ಮಡಿಲು ತುಂಬಿದ ನಂತರ ಹಬ್ಬ ಮುಕ್ತಾಯವಾಗಲಿದೆ ಎಂದರು.

ವಾರ್ಡಿನ ಎಲ್ಲಾ ಜನಾಂಗದವರು ಆಚರಣೆಯಂತೆ ಮೂರು ದಿನಗಳ ಕಾಲ ಮನೆಯಲ್ಲಿ ಅಡುಗೆಗೆ ಖಾರದಪುಡಿ ಬಳಸಿ, ಅಡುಗೆ ಮಾಡುವುದಿಲ್ಲ, ಒಗ್ಗರಣೆ ಹಾಕುವುದಿಲ್ಲ. ಖಾರ, ಚೆಕ್ಕೆ, ಲವಂಗ ಮಸಾಲೆ ಪದಾರ್ಥಗಳನ್ನು ಬಳಸುವುದಿಲ್ಲ. ಮೊಸರನ್ನ, ಸಿಹಿ ಪೊಂಗಲ್ ಮಾತ್ರ ಸೇವಿಸುತ್ತಾರೆ. ಈ ಹಬ್ಬದ ದಿನಗಳಲ್ಲಿ ಎಲ್ಲರೂ ಒಟ್ಟಾಗಿ, ಇದು ನಮ್ಮ ಮನೆಯ ಹಬ್ಬ ಎನ್ನುವ ರೀತಿಯಲ್ಲಿ ಆಚರಿಸಿ ಸಹೋದರತ್ವ ಮೆರೆಯುತ್ತಾರೆ ಎಂದು ತಿಳಿಸಿದರು.

ಮಡಿವಾಳ ರಾಮಮಂದಿರದಲ್ಲಿ ಕಳಸ ಪೂಜಾ ಕೈಂಕರ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು, ದಾಸಗೌಡರ ಶ್ರೀ ರಾಮಮಂದಿರ ಸಮೀಪ ಹಬ್ಬದ ೩ ದಿನಗಳ ಕಾಲ ೪ನೇ ವಾರ್ಡಿನ ಎಲ್ಲ ಜನರಿಗೆ ಬೆಳಿಗ್ಗೆಯಿಂದ ರಾತ್ರಿವರೆಗೂ ಸಮೀಪ ಊಟೋಪಚಾರದ ವ್ಯವ್ಯಸ್ಥೆ ಮಾಡಿದ್ದು, ಇದಕ್ಕಾಗಿ ವಾರ್ಡಿನ ಎಲ್ಲ ಜನರು ಸಹಕಾರ ನೀಡಿದ್ದಾರೆ ಎಂದು ವಾರ್ಡಿನ ಪುರಸಭಾ ಸದಸ್ಯ ಮಧು ಕೃತಜ್ಞತೆ ಸಲ್ಲಿಸಿದರು.