ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ ಸಮಾರಂಭ ಸೆ.3 ರಂದು ಬೆಳಗ್ಗೆ 11 ಗಂಟೆಗೆ ವೈದಿಕ ವಿಧಿ ವಿಧಾನಗಳೊಂದಿಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದಲ್ಲಿ ಜರುಗಲಿದೆ.ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿ ಪಡೆದ ಶ್ರೀ ರಾಮ ಕ್ಷೇತ್ರದ ನಿರ್ಮಾತೃ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ ಸಂಕಲ್ಪದಂತೆ ಸದ್ಗುರು ಶ್ರೀ ಬ್ರಹ್ಮಾನಂದ ಸ್ವಾಮೀಜಿ ಒಂಬತ್ತು ಶಾಖಾ ಮಠಗಳನ್ನು ಸ್ಥಾಪಿಸಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ತಮ್ಮ ಪಟ್ಟಾಭಿಷೇಕದ ದಶಮಾನೋತ್ಸವ ಸಂದರ್ಭ ರಾಷ್ಟ್ರೀಯ ಧರ್ಮ ಸಂಸದ್ ಮೂಲಕ ಯಶಸ್ವಿ ಕಾರ್ಯಕ್ರಮ ಆಯೋಜಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದರು. ಕಳೆದ 4 ವರ್ಷಗಳಿಂದ ಶ್ರೀ ಗುರುದೇವ ಮಠದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿದ್ದು, ಈ ವರ್ಷ ಭಟ್ಕಳ ತಾಲೂಕಿನ ಕರಿಕಲ್ ಶಾಖಾ ಮಠದಲ್ಲಿ ಜು. 21 ರಿಂದ ಆ.30 ರವರೆಗೆ 41 ದಿನಗಳ ಚಾತುರ್ಮಾಸ್ಯ ವ್ರತಾಚಾರಣೆ ಕೈಗೊಂಡಿರುತ್ತಾರೆ. ಚಾತುರ್ಮಾಸ್ಯ ವ್ರತಾಚಾರಣೆ ಸಂದರ್ಭದಲ್ಲಿ ಯಕ್ಷಗಾನ, ತಾಳಮದ್ದಲೆ, ನಾಟಕ, ಭಾಗವತ ಸಪ್ತಾಹ ಸೇರಿದಂತೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಜನಪ್ರತಿನಿಧಿಗಳು, ಸ್ವಾಮೀಜಿ ಶಿಷ್ಯವೃಂದದವರು, ದ.ಕ., ಉಡುಪಿ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಯಿಂದ ಭಕ್ತರು ಭೇಟಿ ನೀಡಿ ಗುರುಗಳಿಂದ ಆಶೀರ್ವಾದ ಪಡೆದುಕೊಂಡರು.
ಪಟ್ಟಾಭಿಷೇಕದ 16ನೇ ವರ್ಧಂತ್ಯುತ್ಸವ ಸಮಾರಂಭ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಸಚಿವರು, ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಠದ ಟ್ರಸ್ಟಿ ತುಕಾರಾಮ್ ಸಾಲಿಯಾನ್ ತಿಳಿಸಿದ್ದಾರೆ.