ಸಾರಾಂಶ
ಕಲಬುರಗಿ : ತಾಲೂಕಿನ ಕರದಾಳದಲ್ಲಿರುವ ಈಡಿಗ ಸಮುದಾಯದವರ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಅಭಿವೃದ್ಧಿಗೆ ಸೂಕ್ತ ನೆರವು ಧರಿಸಲು ಪ್ರಯತ್ನಿಸುವುದಾಗಿ ಮಾಜಿ ಸಚಿವರು ಹಾಗೂ ಹಿರಿಯ ಮುಖಂಡರಾದ ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ಕಲ್ಯಾಣ ಕರ್ನಾಟಕದಲ್ಲಿ ಈಡಿಗ ಸಮುದಾಯದವರಿಗಾಗಿ ಡಾ. ಪ್ರಣವಾನಂದ ಸ್ವಾಮೀಜಿ ಅವರು ಕರದಾಳು ಗ್ರಾಮದಲ್ಲಿ ನಿರ್ಮಾಣ ಮಾಡಲು ಸಂಕಲ್ಪ ಮಾಡಿದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠಕ್ಕೆ ಭೇಟಿ ನೀಡಿ ಚಿತ್ತಾಪುರ ತಾಲೂಕು ಈಡಿಗ ಮುಖಂಡರ ಜೊತೆ ಸಮಾಲೋಚನೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. ಶಕ್ತಿ ಪೀಠದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ಅವರನ್ನು ಕೂಡಲೇ ಭೇಟಿ ಮಾಡಿ ಅಭಿವೃದ್ಧಿ ಕೆಲಸ ಕೈಗೊಳ್ಳಲು ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಲಾಗುವುದು
ಸಮುದಾಯದ ಜನರ ಸರ್ವಾಂಗೀಣ ಅಭಿವೃದ್ಧಿಗಾಗಿ ನಾರಾಯಣ ಗುರುಗಳ ತತ್ವ ಸಂದೇಶ ಪಾಲನೆ ಮಾಡುವಂತಾಗಲು ಶಕ್ತಿ ಪೀಠದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲು ಅನುಕೂಲವಾಗುವಂತೆ ಅಭಿವೃದ್ಧಿ ಕೆಲಸವನ್ನು ಪ್ರಾರಂಭಿಸಲಾಗುವುದು . ಶ್ರೀಗಳ ಹಾಗೂ ಮುಖಂಡರ ಜೊತೆ ಚರ್ಚಿಸಿ ಕೈಗೊಳ್ಳುವ ರೂಪರೇಷೆಗಳಿಗೆ ಪೂರ್ಣ ಸಹಕಾರ ನೀಡುವುದಾಗಿ ಮಾಲಿಕಯ್ಯ ಗುತ್ತೇದಾರ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಶಕ್ತಿಪೀಠದಲ್ಲಿ ಮಾಲಿಕಯ್ಯ ಗುತ್ತೇದಾರ್ ಅವರಿಗೆ ಮೈಸೂರು ಪೇಟ ಹಾಗೂ ಶಾಲು ತೊಡಿಸಿ ವಿಶೇಷ ಸನ್ಮಾನ ನೆರೆವೇರಿಸಿದರು. ಸಮಾಲೋಚನಾ ಸಭೆಯಲ್ಲಿ ತಾಲೂಕು ಈಡಿಗ ಸಮಾಜದ ಮುಖಂಡರಾದ ನಾಗಯ್ಯ ಗುತ್ತೇದಾರ್, ಕರದಾಳು ಶ್ರೀಮಂತ ಗುತ್ತೇದಾರ್, ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕ ಅಧ್ಯಕ್ಷರಾದ ರಾಜು ಗುತ್ತೇದಾರ್ ಬೊಮ್ಮನಹಳ್ಳಿ, ಶಕ್ತಿಪೀಠ ಸಾನಿಧ್ಯದ ಅಧ್ಯಕ್ಷರಾದ ಬಸವರಾಜ್ ಗುತ್ತೇದಾರ್, ಕರದಾಳು ನರಸಯ್ಯ ಗುತ್ತೇದಾರ್ ಅಳ್ಳೊಳ್ಳಿ, ಹನುಮಯ್ಯ ಲಾಡಲಾಪುರ, ಲಕ್ಷ್ಮಿಕಾಂತ್ ಗುತ್ತೇದಾರ್, ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು