ಸಾರಾಂಶ
ನಗರದ ಕಾಟಪ್ಪನ ಹಟ್ಟಿಯಲ್ಲಿರುವ ಹಿರಿಯ ರಾಜಕೀಯ ಮುತ್ಸದ್ದಿ ದಿ.ತಿಪ್ಪೇಸ್ವಾಮಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ಕಾಟಪ್ಪನ ಹಟ್ಟಿಯಲ್ಲಿರುವ ಹಿರಿಯ ರಾಜಕೀಯ ಮುತ್ಸದ್ದಿ ದಿ.ತಿಪ್ಪೇಸ್ವಾಮಿಯವರ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ತಿಪ್ಪೇಸ್ವಾಮಿಯವರ ಪುತ್ರ ಕೆ.ಟಿ.ಕುಮಾರಸ್ವಾಮಿಯವರಿಗೆ ರಾಜಕೀಯ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳಿದ್ದು, ತಾವು ಮತ್ತೊಮ್ಮೆ ಬಿಜೆಪಿ ಸೇರ್ಪಡೆಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ತಿಳಿಸಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರವೂ ಸೇರಿದಂತೆ ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ವಾಲ್ಮೀಕಿ ಸಮುದಾಯಕ್ಕೆ ದಿ.ತಿಪ್ಪೇಸ್ವಾಮಿಯವರು ಮಾಡಿರುವ ಸೇವೆ ಸ್ಮರಣೀಯ. ಅವರು ಇಡೀ ಬದುಕನ್ನು ಸಾರ್ವಜನಿಕರ ಸೇವೆಗಾಗಿ ಮೀಸಲಿಟ್ಟವರು. ಅವರ ಪುತ್ರರಾಗಿ ನೀವು ಸಹ ರಾಜಕೀಯ ಕ್ಷೇತ್ರದಲ್ಲಿ ಅವರಂತೆಯೇ ಮೇಲ್ಪಂಕ್ತಿಯ ಯುವನಾಯಕರಾಗಿ ಹೊರಹೊಮ್ಮಬೇಕು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ಕಾರ್ಯನಿರ್ವಹಿಸಿ ಬಿಜೆಪಿ ಗೆಲುವಿನಲ್ಲಿ ತಮ್ಮ ಪಾತ್ರ ಹೆಚ್ಚಾಗಿರಬೇಕು ಎಂದರು.ರಾಜ್ಯದ ಸಚಿವರಾಗಿ ಸೇವೆ ನಿರ್ವಹಿಸಿದ ಸಂದರ್ಭದಲ್ಲಿ ನಾನು ಸಹ ತಿಪ್ಪೇಸ್ವಾಮಿಯವರ ಜೊತೆಯಲ್ಲಿ ಸಚಿವರಾಗಿ ಸೇವೆ ಮಾಡಿದ್ದೇನೆ. ಸದಾಕಾಲ ಜನರ ಸೇವೆಯ ಬಗ್ಗೆ ಅವರು ಮಾತನಾಡುತ್ತಿದ್ದರು. ನಮ್ಮ ಅವರ ಒಡನಾಟ ಅತ್ಯಂತ ಸ್ನೇಹಮಯಿಯಾಗಿತ್ತು ಎಂದು ಸ್ಮರಿಸಿದರು.
ಯುವ ಮುಖಂಡ ಕೆ.ಟಿ.ಕುಮಾರಸ್ವಾಮಿ ಮಾತನಾಡಿ, ತಮ್ಮನ್ನು ನೋಡಿದರೆ ನನಗೆ ನಮ್ಮ ತಂದೆಯ ನೆನಪಾಗುತ್ತದೆ. ನನ್ನ ರಾಜಕೀಯ ಜೀವನದ ಬಗ್ಗೆ ತಾವು ಅತ್ಯಂತ ವಿಶ್ವಾಸಹೊಂದಿದ್ದೀರಿ. ನನ್ನ ಬೆಳವಣಿಗೆ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದೀರಿ. ನನ್ನ ರಾಜಕೀಯ ಜೀವನದಲ್ಲಿ ಯಾರೂ ಸಹ ನನಗೆ ಮಾರ್ಗದರ್ಶನ ಮಾಡಿರಲಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೊದಲಿಗೆ ನಿಮ್ಮ ಪರವಾಗಿ ಮತಯಾಚನೆ ಮಾಡಿ ಬೆಂಬಲಿಗರ ಸಭೆ ಕರೆದು ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಬಿಜೆಪಿ ಹಿರಿಯ ಮುಖಂಡ ಪಿ.ರಾಮಕೃಷ್ಣರೆಡ್ಡಿ, ಬಿಜೆಪಿ ಮುಖಂಡ, ನಗರಸಭಾ ಸದಸ್ಯ ಎಸ್.ಜಯಣ್ಣ, ವೆಂಕಟೇಶ್, ರಂಗಸ್ವಾಮಿ, ಬಂಡೆರಂಗಪ್ಪ, ವೆಂಕಟಪ್ಪ, ಬಿ.ಎಸ್.ಶಿವಪುತ್ರಪ್ಪ, ಚಿದಾನಂದ, ವೀರೇಶ್, ಕೆಂಪಮಂಜ ಉಪಸ್ಥಿತರಿದ್ದರು.