ಸಾರಾಂಶ
ಬೆಳಗಾವಿ : ಗೋವಾ ರಾಜ್ಯದ ಸಾಂಗೋಲ್ಡಾದಲ್ಲಿ ಸರ್ಕಾರ ಮನೆ ತೆರವುಗೊಳಿಸಿರುವ ನಿರಾಶ್ರಿತರನ್ನು ಗೋವಾ ಕನ್ನಡಿಗರ ಬುಧವಾರ ಕರವೇ ಗೋಕಾಕ ತಾಲೂಕು ಘಟಕದ ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ವೇಳೆ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ಯಾವುದೇ ಮುನ್ಸೂಚನೆ ನೀಡದೆ ಗೋವಾದ ಸಾಂಗೋಲ್ಡಾದಲ್ಲಿ ಕಳೆದ 40 ವರ್ಷಗಳಿಂದ ವಾಸವಿರುವ ಕನ್ನಡಿಗರ 23 ಮನೆಗಳನ್ನು ತೆರವುಗೊಳಿಸಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ತಕ್ಷಣ ಗೋವಾ ಸರ್ಕಾರ ನಿರಾಶ್ರಿತ ಕನ್ನಡಿಗರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಕೋಡಬೇಕು. ಈಗಾಗಲೇ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರಿಗೆ ಪತ್ರ ಬರೆದು ಪುನರ್ವಸತಿ ಕಲ್ಪಿಸುವಂತೆ ವಿನಂತಿಸಿದ್ದಾರೆ. ಶೀಘ್ರದಲ್ಲೇ ನಿರಾಶ್ರಿತ ಕನ್ನಡಿಗರಿಗೆ ನ್ಯಾಯ ಸಿಗುವ ಭರವಸೆ ಇದ್ದು, ಗೋವಾ ರಾಜ್ಯದ ಕನ್ನಡಿಗರು ಸಹ ಇದಕ್ಕೆ ಪೂರಕವಾಗಿ ಸ್ವಂದಿಸಿ ನಿರಾಶ್ರಿತರ ಬೆನ್ನಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಾಂಗೋಲ್ಡಾದ ಗ್ರಾಮದ ನಿರಾಶ್ರಿತರಾದ ಮಹೇಶ ಬಡಿಗೇರ, ಚಂದ್ರಕಾಂತ ಕಾಂಬ್ಳೆ, ಅಶೋಕ ರಾಠೋಡ, ರಫೀಕ್ ತಳವಾರ, ಯುವರಾಜ ನಾಯಕ, ಮುಖಂಡ ಮಹಾದೇವ ವಗ್ಗನವರ, ಸಾದಿಕ್ ಹಲ್ಯಾಳ, ಮುಗುಟ ಪೈಲವಾನ, ನಿಜಾಮ್ ನದಾಫ್ ಉಪಸ್ಥಿತರಿದ್ದರು.