ಸಾರಾಂಶ
ಕುಮಟಾ: ಭಾರತದ ಭಾಗವಾಗಿದ್ದ ಪಿಒಕೆ ಹಾಗೂ ಅಕ್ಸಾಯ್ ಚೀನಾ ಪ್ರದೇಶವನ್ನು ಮರಳಿ ಭಾರತಕ್ಕೆ ಜೋಡಿಸುವ ದೃಢಸಂಕಲ್ಪವನ್ನು ನಾವೆಲ್ಲಾ ಭಾರತೀಯರು ಮಾಡಬೇಕು ಎಂದು ನಿವೃತ್ತ ವಿಂಗ್ ಕಮಾಂಡರ್ ಗಣೇಶ ಶಾಸ್ತ್ರಿ ಮನವಿ ಮಾಡಿದರು.
ಕಾರ್ಗಿಲ್ ಯುದ್ಧ ಗೆಲುವಿನ ರಜತ ವರ್ಷಾಚರಣೆ ನಿಮಿತ್ತ ಇಲ್ಲಿನ ಯುವ ಬ್ರಿಗೇಡ್ ಘಟಕದಿಂದ ಶುಕ್ರವಾರ ಪಟ್ಟಣದ ಮಹಾಸತಿ ಮಂದಿರದಿಂದ ಗಿಬ್ ವೃತ್ತದವರೆಗೆ ಟಾರ್ಗೆಟ್ ಪಿಒಕೆ ರನ್ ಶೀರ್ಷಿಕೆಯಡಿ ಲಘು ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.ಕಾರ್ಗಿಲ್ ವಿಜಯದ ದಿನವೆಂದರೆ ನಮ್ಮೆಲ್ಲರ ಹೃದಯದಲ್ಲಿ ಒಂದು ಬಗೆಯ ಶಕ್ತಿ, ಚೈತನ್ಯ ಉತ್ಪನ್ನವಾಗುತ್ತದೆ. ೧೯೯೮ರ ಚಳಿಗಾಲದಲ್ಲಿ ಪಾಕಿಸ್ತಾನ ನಮ್ಮ ಭಾರತದ ಸೈನಿಕರನ್ನು ಹಿಮ್ಮೆಟಿಸಲು ಹಾಗೂ ಶ್ರೀನಗರದಿಂದ ಲಡಾಖ್‌ಗೆ ಹೋಗುವ ಮಾರ್ಗವನ್ನು ವಶಕ್ಕೆ ಪಡೆದು ಲಡಾಖನ್ನು ಭಾರತದಿಂದ ಪೂರ್ತಿಯಾಗಿ ಬೇರ್ಪಡಿಸಲು ಹವಣಿಸಿತ್ತು. ಕಾರ್ಗಿಲ್‌ನ ಎತ್ತರದ ಪ್ರದೇಶಗಳನ್ನು ಅತಿಕ್ರಮಿಸಿ ಲಡಾಖ್ ಹೆದ್ದಾರಿಯಲ್ಲಿ ಸೈನ್ಯದ ಸಂಚಾರದ ಮೇಲೆ ಗುಂಡು ಹಾರಿಸುತ್ತಿದ್ದರು. ಒಂದೊಮ್ಮೆ ಅಂದು ಪಾಕಿಸ್ತಾನ ಯಶಸ್ವಿಯಾಗಿದ್ದರೆ ಲಡಾಖ್ ಇಂದು ಭಾರತದ ಜತೆ ಇರುತ್ತಿರಲಿಲ್ಲ ಎಂದರು. ೧೯೯೯ರ ಮೇ ೩ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನದ ಅತಿಕ್ರಮಣ ಹಿಮ್ಮೆಟ್ಟಿಸಲು ಸೈನ್ಯಕ್ಕೆ ಆದೇಶ ಮಾಡಿದರು. ಅಪರೇಷನ್ ವಿಜಯ ಎಂಬ ಹೆಸರಿನಲ್ಲಿ ಭಾರತೀಯ ಸೇನೆ ಕಾರ್ಯಚರಣೆ ಆರಂಭಿಸಿತು. ಯುದ್ಧದ ಕಠಿಣ ಪರಿಸ್ಥಿತಿಯನ್ನು ಮನಗಂಡು ಮೇ ೨೬ ರಂದು ಆಪರೇಷನ್ ಸಫೇದ್ ಸಾಗರ್ ಎಂಬ ಹೆಸರಿನಲ್ಲಿ ವಾಯುಸೇನೆಯೂ ಕಾರ್ಯಾಚರಣೆ ಆರಂಭಿಸಿತು. ಸೇನೆಯ ಹಲವು ವೀರರು ಹುತಾತ್ಮರಾದರು. ಆದರೆ ನಿಧಾನವಾಗಿ ಪಾಕಿಸ್ತಾನಿಗಳ, ಉಗ್ರರ ಅಡಗುತಾಣಗಳನ್ನು ವಶಪಡಿಸಿಕೊಂಡು ಜು. ೨೬ರಂದು ಯುದ್ಧ ಕೊನೆಗೊಂಡಿದೆ. ಪಾಕಿಸ್ತಾನವನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸಲಾಯಿತು ಎಂದರು.ನಿವೃತ್ತ ಸೈನಿಕರಾದ ಹವಾಲ್ದಾರ್ ನಾರಾಯಣ ಗಾವಡಿ, ಹವಾಲ್ದಾರ್ ವಿನಾಯಕ ಬಿ. ನಾಯ್ಕ, ಹವಾಲ್ದಾರ್ ಜೈವಂತ, ಹವಾಲ್ದಾರ್ ಮಹೇಶ ಹರಿಕಾಂತ, ಸುಬೇದಾರ್ ಮಂಜುನಾಥ ಜಿ. ಪಟಗಾರ, ಹವಾಲ್ದಾರ್ ನಾಗರಾಜ ಜಿ. ನಾಯ್ಕ, ಸುಬೇದಾರ್ ವಿನಾಯಕ ನಾಯ್ಕ, ಹವಾಲ್ದಾರ್ ಗಣೇಶ ಎಲ್. ನಾಯ್ಕ ಮಿರ್ಜಾನ ಉಪಸ್ಥಿತರಿದ್ದರು. ಯುವ ಬ್ರಿಗೇಡ್ ವಿಭಾಗೀಯ ಸಂಚಾಲಕ ಅಣ್ಣಪ್ಪ ನಾಯ್ಕ ನೇತೃತ್ವದಲ್ಲಿ ನಡೆದ ಮ್ಯಾರಥಾನ್‌ನ್ನು ಮಹಾಸತಿ ಸರ್ಕಲ್‌ನಿಂದ ಆರಂಭಿಸಿ ನೆಲ್ಲಿಕೇರಿ, ಬಸ್ತಿಪೇಟೆ, ಮೂರುಕಟ್ಟಾ, ಗುಡಿಗಾರಗಲ್ಲಿ, ಗಿಬ್ ಸರ್ಕಲ್ ಮೂಲಕ ಪುನಃ ಮಹಾಸತಿ ಸರ್ಕಲ್ ವರೆಗೆ ನಡೆಸಲಾಯಿತು. ಎಲ್ಲರಿಗೂ ಸಿಹಿ ಮತ್ತು ಯೋಧರ ಸಹಿ ಇರುವ ಪ್ರಮಾಣಪತ್ರ ವಿತರಿಸಲಾಯಿತು.