ಸಾರಾಂಶ
ಒಟ್ಟು 23 ಸದಸ್ಯರನ್ನು ಒಳಗೊಂಡಿರುವ ಕಾರ್ಕಳ ಪುರಸಭೆಯಲ್ಲಿ ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರಿಸಲಾಗಿತ್ತು. ಪುರಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯೋಗೀಶ್ ದೇವಾಡಿಗ, ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ತಹಸೀಲ್ದಾರ್ ಪ್ರತಿಭಾ ಆರ್. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಒಟ್ಟು 23 ಸದಸ್ಯರನ್ನು ಒಳಗೊಂಡಿರುವ ಕಾರ್ಕಳ ಪುರಸಭೆಯಲ್ಲಿ ಈ ಬಾರಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರಿಸಲಾಗಿತ್ತು. ಪುರಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.
ಕಾಂಗ್ರೆಸ್‌ನಿಂದ ಅಧ್ಯಕ್ಷ ಸ್ಥಾನಕ್ಕೆ ಶುಭದ ರಾವ್, ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿ ಬೋಲ್ಡ್ ಮೆಂಡೋನ್ಸಾ ಹಾಗೂ ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಕೋಟ್ಯಾನ್ ನಾಮಪತ್ರ ಸಲ್ಲಿಸಿದ್ದರು.ಬಿಜೆಪಿ, ಕಾಂಗ್ರೆಸ್ ಸಮ ಬಲದ ಸ್ಥಾನ ಹೊಂದಿರುವುದರಿಂದ ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಅವರ ಮತ ನಿರ್ಣಾಯಕವಾಗಿತ್ತು. ಆದರೆ ಅವರು ಮತ ಚಲಾವಣೆ ಮಾಡದೆ ದೂರ ಉಳಿದಿದ್ದರು. ಆದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಶಾಸಕ, ಸಂಸದರ ಮತ ನಿರ್ಣಾಯಕವಾಗಿತ್ತು. ಹೀಗಾಗಿ 13 ಮತಗಳೊಂದಿಗೆ ಬಿಜೆಪಿ ಸದಸ್ಯರೇ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ.
ಕಳೆದ ಬಾರಿಯೂ ಸಂಸದರು ಹಾಗೂ ಶಾಸಕರ ಮತದ ಬಲದಿಂದ ಪುರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.