ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಇತ್ತೀಚೆಗೆ ‘ಸಿಂದೂರ ಸಂಭ್ರಮ’ ಪರಿಕಲ್ಪನೆಯೊಂದಿಗೆ ವಾರ್ಷಿಕೋತ್ಸವ ಆಚರಿಸಲಾಯಿತು.
ಕಾರ್ಕಳ: ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ಇತ್ತೀಚೆಗೆ ‘ಸಿಂದೂರ ಸಂಭ್ರಮ’ ಪರಿಕಲ್ಪನೆಯೊಂದಿಗೆ ವಾರ್ಷಿಕೋತ್ಸವ ಆಚರಿಸಲಾಯಿತು. ಡಿ.4ರಂದು ಹವ್ಯಾಸಿ ಕಲಾವಿದರಿಂದ ‘ಶ್ರೀರಾಮಾನುಗ್ರಹ ಸಿಂದೂರ ವಿಜಯ’ ಯಕ್ಷಗಾನ ಪ್ರದರ್ಶನ ಜರುಗಿತು. 5ರಂದು ದಿ. ಹಚ್.ಎಸ್. ವೆಂಕಟೇಶಮೂರ್ತಿ ಸವಿ ನೆನಪಿನ ‘ಭಾವ ನಮನ’ ಭಾವಗೀತೆಗಳ ಕಾರ್ಯಕ್ರಮ ನಡೆಯಿತು.ಡಾ. ಜಿ. ರಾಮಕೃಷ್ಣ ಆಚಾರ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳ ಪ್ರತಿಭೆ ಬೆಳೆಸುವಲ್ಲಿ ಕ್ರಿಯೇಟಿವ್ ಕಾಲೇಜಿನ ಪಾತ್ರವನ್ನು ಶ್ಲಾಘಿಸಿದರು. ಶಾಸಕ ವಿ. ಸುನಿಲ್‌ಕುಮಾರ್, ಪ್ರಾಚಾರ್ಯ ಕೆ. ಗುಣಪಾಲ್ ಕಡಂಬ ಹಾಗೂ ನಟ ಶನಿಲ್ ಗೌತಮ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ರಾತ್ರಿ ಜಾದೂಗಾರ ಕುದ್ರೋಳಿ ಗಣೇಶ್ ಅವರ ಮ್ಯಾಜಿಕ್ ಶೋ ಎಲ್ಲರ ಗಮನ ಸೆಳೆಯಿತು.ಡಿ.6ರಂದು 180 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪ್ರೋತ್ಸಾಹ ಧನ ವಿತರಿಸಲಾಯಿತು. ಮುಖ್ಯ ಅತಿಥಿ ವಿರೂಪಾಕ್ಷ ದೇವರಮನೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸದ ಮಹತ್ವವನ್ನು ಹೈಲೈಟ್ ಮಾಡಿದರು. ವೇದಿಕೆಯಲ್ಲಿ 150 ವಿದ್ಯಾರ್ಥಿಗಳಿಂದ ವಂದೇಮಾತರಂ 150ನೇ ವರ್ಷದ ಹಾಡುಗಾರಿಕೆ ನೆರವೇರಿತು.ಅಪರಾಹ್ನ ಎಚ್. ದುಂಡಿರಾಜ್ ಅವರ ಸಾನ್ನಿಧ್ಯದಲ್ಲಿ ‘ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ’ ನಡೆಯಿತು. ಸಂಜೆ ಸಮಾರೋಪದಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಶಿಕ್ಷಣದ ಮಾನವೀಯ ತತ್ವಗಳನ್ನು ನೆನಪಿಸಿ ಕಾಲೇಜಿನ ಚಟುವಟಿಕೆಗಳನ್ನು ಪ್ರಶಂಸಿಸಿದರು.
ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೋಧಕೇತರ ಸಿಬ್ಬಂದಿಗೆ ಸನ್ಮಾನ ಮಾಡಲಾಯಿತು. ರಾತ್ರಿ ವಿದ್ಯಾರ್ಥಿಗಳ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಂಡಿತು.ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, 2500 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರು ಮತ್ತು ಸಾರ್ವಜನಿಕರು ಹಾಜರಿದ್ದರು.