ಕಾರ್ಕಳ: ಆರ್.ಎಸ್.ಎಸ್.ಬಿ. ಹಾಗೂ ಬಿ.ಜಿ.ಎಸ್.ಬಿ. ಸಮಾಜ ಬಾಂಧವರ ಜಂಟಿ ಆಯೋಜನೆಯಲ್ಲಿ, ಆರ್.ಎಸ್.ಎಸ್.ಬಿ. ಹಾಗೂ ಬಿ.ಜಿ.ಎಸ್.ಬಿ. ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಋಣಾನುಬಂಧ ವಧುವರರ ಸಮಾವೇಶ ಬಂಟಕಲ್ ರೋಟರಿ ಭವನದಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಪ್ತಪದಿ ವಿವಾಹ ಮಾಹಿತಿ ಕೇಂದ್ರದ ಅಧ್ಯಕ್ಷ ನಾಗೇಂದ್ರ ಕಾಮತ್ , ಸಮಾಜದ ಯುವ ಪೀಳಿಗೆಗೆ ಸೂಕ್ತ ಜೀವನದೊರೆಯನ್ನು ಕಂಡುಕೊಳ್ಳಲು ಇಂತಹ ಸಮಾವೇಶಗಳು ಭದ್ರ ಬುನಾದಿ ಹಾಕಿಕೊಡುತ್ತವೆ ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಮಾಜಿ ಮೊಕ್ತೇಸರ ಅಶೋಕ್ ನಾಯಕ್ ಮಾತನಾಡಿ, ನಮ್ಮ ಧಾರ್ಮಿಕ ಭಾವನೆಗಳು ಮತ್ತು ಶ್ರೀಮಂತ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಾಂಪ್ರದಾಯಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಕರೆ ನೀಡಿದರು.ಬಳಿಕ ಮಾತನಾಡಿದ ಪ್ರಮುಖ ಉದ್ಯಮಿ ವಾಸುದೇವ ಕೃಷ್ಣ ಅವರು, ಸ್ವ-ಸಮಾಜದ ಒಳಗಡೆಯೇ ವಧುವರನ್ವೇಷಣೆ ಮಾಡುವುದರಿಂದ ಕೌಟುಂಬಿಕ ಬಾಂಧವ್ಯಗಳು ಗಟ್ಟಿಯಾಗುತ್ತವೆ. ಸಮಾಜದ ಒಗ್ಗಟ್ಟು ವೃದ್ಧಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಸಮಾವೇಶದಲ್ಲಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಿದ್ಧ ಜ್ಯೋತಿಷಿ ಉಪೇಂದ್ರ ಅವರು, ಹಿರಿಯರ ಮಾರ್ಗದರ್ಶನದಲ್ಲಿ ಜಾತಕ ಫಲಗಳನ್ನು ಸರಿಯಾಗಿ ಪರಿಶೀಲಿಸಿ ವಿವಾಹವಾಗುವುದು ದಾಂಪತ್ಯ ಜೀವನದ ಯಶಸ್ಸಿಗೆ ಒಳಿತು. ಮದುವೆಯೆಂಬುದು ಕೇವಲ ಎರಡು ಜೀವಗಳ ಬಂಧವಲ್ಲ, ಅದರಲ್ಲಿ ಒಳ್ಳೆಯ ಸಂಸ್ಕಾರವನ್ನು ಅಳವಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದರು. ಅಲ್ಲದೆ ಕಾರ್ಯಕ್ರಮ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಚಂದ್ರಹಾಸ ಪ್ರಭು ಅವರು ಸನ್ಮಾನ ಪತ್ರವನ್ನು ವಾಚಿಸಿದರು. ಉದ್ಯಮಿ ಎಂ. ಎನ್. ನಾಯಕ್ ಅವರು ಸನ್ಮಾನ ಸ್ವೀಕರಿಸಿ ಸಮಾಜದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದರು. ಸಮಾಜದ ಆದರ್ಶ ದಂಪತಿಗಳಾದ ಪ್ರೇಮಾ ಮತ್ತು ರಾಮಚಂದ್ರ ಹಾಗೂ ಅಂತಾರಾಷ್ಟ್ರೀಯ ತರಬೇತುದಾರರಾದ ಸುಬ್ರಹ್ಮಣ್ಯ ಕುಳೇದು ಅವರನ್ನು ಸನ್ಮಾನಿಸಲಾಯಿತು. ನಂತರ ಸುಬ್ರಹ್ಮಣ್ಯ ಕುಳೇದು ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.

ಈ ಬಾರಿಯ ವಧುವರನ್ವೇಷಣೆ ಕಾರ್ಯಕ್ರಮದಲ್ಲಿ ಸುಮಾರು 192 ವಧುವರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡರು. ಕಾರ್ಯಕ್ರಮವನ್ನು ಸುನೀಲ್ ಬೋರ್ಕರ್ ಪುತ್ತೂರು ನಿರೂಪಿಸಿದರು. ಸರೋಜಿನಿ ಕೊಡಿಬೆಟ್ಟು ವಂದಿಸಿದರು.