ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಮುಂಗಾರು ಮಳೆ ಆರ್ಭಟ ಶುಕ್ರವಾರವೂ ಮುಂದುವರಿದಿದೆ. ಕಾರ್ಕಳದಲ್ಲಿ ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ಮಳೆಯಾಗಿದೆ. ಭಾರಿ ಮಳೆಗೆ ನದಿ ದಾಟುತ್ತಿದ್ದ ವೇಳೆ ಕಾರ್ಮಿಕನೋರ್ವ ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಇನ್ನಾ ಗ್ರಾಮದಲ್ಲಿ ಪ್ರವಾಹ ಉಂಟಾಗಿ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಐದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸುಮಾರು1000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತ ಕೃಷಿ ನಾಶವಾಗಿದೆ. ನದಿ ಪಾತ್ರದ ಗದ್ದೆಗಳು ಸಂಪೂರ್ಣ ಜಲಾವೃತವಾಗಿದೆ. ಗುರುವಾರ ಸಂಜೆ ಎಣ್ಣೆಹೊಳೆ, ಕಾರ್ಕಳ, ಹೆಬ್ರಿ ಮುಖ್ಯರಸ್ತೆಯಲ್ಲಿ ಸ್ವರ್ಣ ನದಿಯ ನೀರು ಹರಿದಿತ್ತು. ನಾಡ್ಪಾಲಿನಲ್ಲೂ ಸೀತಾನದಿಯ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿದಿದೆ.ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕುಳ್ತೆಮಠ ಎಂಬಲ್ಲಿ ನೆರೆ ಬಂದಿದ್ದು, ಕಾರ್ಕಳ ತಹಸೀಲ್ದಾರ್ ನರಸಪ್ಪ ನೇತೃತ್ವದಲ್ಲಿ ನೆರೆ ಪ್ರದೇಶದ ಮನೆಗಳಲ್ಲಿನ ಜನರನ್ನು ಇನ್ನಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಯಿತು. ಮೂವರನ್ನು ಅವರ ಸಂಬಂಧಿಕರ ಮನೆಗೆ ಕಳುಹಿಸಲಾಯಿತು.ಅವಳಿ ತಾಲೂಕುಗಳಲ್ಲಿ ಭಾರಿ ಗಾಳಿ ಮಳೆಗೆ ಕಬ್ಬಿನಾಲೆ, ಶಿರ್ಲಾಲು, ಕೆರುವಾಶೆ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ರಾಷ್ಟ್ರೀಯ ಹೆದ್ದಾರಿ ಬಳಿ ಕುಸಿತ: ಕಾರ್ಕಳ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಾಣೂರು ಶಾಂಭವಿ ನದಿ ಸೇತುವೆ ಬಳಿ ಭಾರಿಮಳೆಯಿಂದ ರಸ್ತೆ ಬದಿಯ ಮಣ್ಣು ಕುಸಿತವಾಗಿದೆ. ಇದರಿಂದಾಗಿ ಪಾದಚಾರಿಗಳಿಗೆ ಸಂಚಾರಕ್ಕೆ ದುಸ್ತರವಾಗಿದೆ. ರಸ್ತೆಯಲ್ಲಿ ವಾಹನ ಸಂಚಾರವು ಹೆಚ್ಚಿದ್ದು, ಮಳೆ ಮುಂದುವರಿದರೆ ರಸ್ತೆಯೇ ಕುಸಿಯುವ ಸಾಧ್ಯತೆ ಇದೆ.ಮಳೆ ವಿವರ: ಕಾರ್ಕಳ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ 201.7 ಮಿ.ಮೀ. ಮಳೆಯಾಗಿದೆ. ಹೆಬ್ರಿಯಲ್ಲಿ 168 ಮಿ.ಮೀ. ಮಳೆ ದಾಖಲಾಗಿದೆ.* ಹೊಳೆಯಲ್ಲಿ ಕೊಚ್ಚಿ ಹೋದ ಕಾರ್ಮಿಕ
ಭಾರಿ ಮಳೆಗೆ ಉಕ್ಕಿ ಹರಿಯುವ ಹೊಳೆಯಲ್ಲಿ ಕೂಲಿ ಕಾರ್ಮಿಕನೋರ್ವ ಕೊಚ್ಚಿಕೊಂಡು ಹೋದ ಘಟನೆ ನಾಡ್ತಾಲು ಗ್ರಾಮದ ನೆಲ್ಲಿಕಟ್ಟೆ ಚೀರೊಳ್ಳಿ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.ಕೂಲಿ ಕಾರ್ಮಿಕನ್ನು ತುಮಕೂರು ಮೂಲದ ಆನಂದ್ (45) ಎಂದು ಗುರುತಿಸಲಾಗಿದೆ. ತಾನು ಕೆಲಸ ಮಾಡುವ ಮನೆಗೆ ತೆರಳಲು ಸೀತಾನದಿಯ ಉಪನದಿಯನ್ನು ದಾಟಿ ಹೋಗಬೇಕಿತ್ತು. ಉಪನದಿಗೆ ದಾಟಲು ಕಾಲು ಸೇತುವೆ ಸಹಿತ ಯಾವುದೇ ವ್ಯವಸ್ಥೆ ಇರಲಿಲ್ಲ. ಹಗ್ಗದ ಸಹಾಯದಿಂದ ಹೊಳೆ ದಾಟುವಾಗ ಹಗ್ಗ ತುಂಡಾಗಿ ಘಟನೆ ಸಂಭವಿಸಿದೆ ಎನ್ನಲಾಗಿದೆ.ರಾಮಣ್ಣ (64) ಮತ್ತು ಆನಂದ (50) ಎಂಬವರು ತಿಂಗಳೆ ಮನೋರಾಮಯ್ಯ ಎಂಬವರ ತೋಟದಲ್ಲಿ ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದು, 5 ದಿನಗಳ ಹಿಂದೆ ಕೆಲಸದ ನಿಮಿತ್ತ ಬ್ರಹ್ಮಾವರಕ್ಕೆ ಹೋದವರು ಜು.18ರಂದು ಬೆಳಗ್ಗೆ ವಾಪಾಸ್ಸಾಗುತ್ತಿದ್ದರು. ತಾವು ಕೆಲಸ ಮಾಡುವ ತೋಟಕ್ಕೆ ಹೋಗುವ ದಾರಿಯಲ್ಲಿರುವ ಸುಮಾರು 30 ಅಡಿ ಅಗಲದ ನೀರಿನ ತೋಡಿನಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ತೋಡು ದಾಟಲು ಒಂದು ಬದಿಯ ಮರದಿಂದ ಇನ್ನೊಂದು ಬದಿಯ ಮರಕ್ಕೆ ಕಟ್ಟಲಾಗಿತ್ತು. ಈ ಹಗ್ಗವನ್ನು ಹಿಡಿದುಕೊಂಡು ತೋಡನ್ನು ದಾಟುತ್ತಿರುವಾಗ ನೀರಿನ ರಭಸಕ್ಕೆ ಆನಂದ ಅವರು ಕಾಲು ಜಾರಿ ಬಿದ್ದಿದ್ದು, ಕೂಡಲೇ ದಡದಲ್ಲಿದ್ದ ರಾಮಣ್ಣ ಕೋಲನ್ನು ಕೊಟ್ಟು ಅವರನ್ನು ಮೇಲಕ್ಕೆಳೆಯಲು ಪ್ರಯತ್ನಿಸಿದರೂ ನೀರಿನ ರಭಸಕ್ಕೆ ನಿಯಂತ್ರಣ ತಪ್ಪಿ ಹಗ್ಗವನ್ನು ಕೈ ಬಿಟ್ಟು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.