ಸಾರಾಂಶ
ಕೃಷ್ಣ ಎನ್. ಲಮಾಣಿ
ಕನ್ನಡಪ್ರಭ ವಾರ್ತೆ ಹೊಸಪೇಟೆಕರ್ನಾಟಕ ನಾಮಕರಣಕ್ಕೆ ಸಾಕ್ಷಿಯಾಗಿರುವ ಕನ್ನಡದ ನೆಲ ಹಂಪಿಯಲ್ಲಿ ಕನ್ನಡಾಂಬೆ ಭುವನೇಶ್ವರಿ ದೇವಿಗೆ ನಿತ್ಯವೂ ಪೂಜೆ ನಡೆಯುತ್ತದೆ. ಮೈಸೂರು ರಾಜ್ಯದಿಂದ ಕರ್ನಾಟಕ ಎಂಬ ಮರುನಾಮಕರಣ ಪಡೆದ ಕರುನಾಡಿನ ಜ್ಯೋತಿರಥಯಾತ್ರೆ ಹಂಪಿ ನೆಲದಿಂದಲೇ ನಾಡಿನಾದ್ಯಂತ ಸಂಚರಿಸಿತ್ತು. ಹಾಗಾಗಿ ಕರ್ನಾಟಕ ಸಂಭ್ರಮ- 50ಕ್ಕೆ ಹಂಪಿ ನೆಲ ಕಳೆಗಟ್ಟಿದೆ.
ನ. 2ರಂದು ಹಂಪಿಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸಂಭ್ರಮ- 50ರ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸೇರಿದಂತೆ ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಅಂದು ದೇವರಾಜ ಅರಸು; ಇಂದು ಸಿದ್ದರಾಮಯ್ಯ ಚಾಲನೆ:
ಕರ್ನಾಟಕ ಜ್ಯೋತಿ ರಥಯಾತ್ರೆಗೆ 1973ರ ನವೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಚಾಲನೆ ನೀಡಿದ್ದರು. ಈಗ ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದಾರೆ. ಈ ಜ್ಯೋತಿ ರಥಯಾತ್ರೆ ಕೊಪ್ಪಳದ ಮಾರ್ಗವಾಗಿ ನ. 3ರಂದು ಗದಗ ತಲುಪಲಿದೆ. ಗದುಗಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿದೆ.ದೇವರಾಜು ಅರಸು ಅವರು ಅಂದು ನಡೆಸಿದ ಕಾರ್ಯಕ್ರಮದ ಮಾದರಿಯಲ್ಲೇ ನ. 2ರಂದು ಹಂಪಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕನ್ನಡದ ಜ್ಯೋತಿಯನ್ನು ನಾಡಿನೆಲ್ಲೆಡೆ ಬೆಳಗಲು ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ.
ಭುವನೇಶ್ವರಿ ದೇವಿಗೆ ನಿತ್ಯ ಪೂಜೆ:ಹಂಪಿಯ ವಿರುಪಾಕ್ಷೇಶ್ವರ ದೇಗುಲ ಆವರಣದಲ್ಲಿರುವ ತಾಯಿ ಭುವನೇಶ್ವರಿ ದೇವಿಗೆ ನಿತ್ಯವೂ ಪೂಜೆ ನಡೆಯುತ್ತದೆ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವ ಪೂರ್ವದಲ್ಲೇ ಹಂಪಿಯಲ್ಲಿ ತಾಯಿ ಭುವನೇಶ್ವರಿಯ ದೇಗುಲವಿತ್ತು ಎಂಬುದನ್ನು ಪೌರಾಣಿಕ ಹಾಗೂ ಚಾರಿತ್ರಿಕ ದಾಖಲೆಗಳು ಸಾರುತ್ತವೆ. ಕನ್ನಡಾಭಿಮಾನ ಮೂಡಿಸಲು ಹಂಪಿಯ ಭುವನೇಶ್ವರಿ ದೇವಿಯನ್ನು ನಾಡದೇವತೆಯೆಂದೇ ಸ್ವೀಕರಿಸಿ, ವಿಶೇಷವಾಗಿ ಪೂಜಿಸಿ ಆರಾಧಿಸಲಾಗುತ್ತಿದೆ.
ಕನ್ನಡದ ತಾಯಿ ಭುವನೇಶ್ವರಿ ಎಂಬುದು ಒಂದು ಜನಪ್ರಿಯ ಪರಿಕಲ್ಪನೆ. ಇದು ನಾವೇ ಕನ್ನಡಿಗರು ಸೇರಿ ರೂಪಿಸಿಕೊಂಡದ್ದು. ಈ ಪರಿಕಲ್ಪನೆಯ ಮೂಲವನ್ನು ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ಕಾಣಬಹುದು. ಅದಕ್ಕೂ ಮುನ್ನವೇ ಅಲ್ಲಲ್ಲಿ ಭುವನೇಶ್ವರಿ ಎಂಬ ದೇವಿಯ, ಶಕ್ತಿದೇವತೆಯ ಆರಾಧನೆ ನಡೆಯುತ್ತಿತ್ತು ಎಂಬುದು ತಿಳಿದುಬರುತ್ತದೆ. ಆದರೆ ಭುವನೇಶ್ವರಿ ನಾಡದೇವಿ ಎಂಬ ಪರಿಕಲ್ಪನೆ ಬರಬೇಕಾದರೆ ಮಹತ್ವದ ರಾಜಕೀಯ ಬದಲಾವಣೆ ಸಂಭವಿಸಬೇಕಾಯಿತು. ೧೩ನೇ ಶತಮಾನದಲ್ಲಿ ಗುರು ವಿದ್ಯಾರಣ್ಯರು, ನಾಡನ್ನು ಅನ್ಯರ ಆಕ್ರಮಣದ ವಿರುದ್ಧ ಒಂದುಗೂಡಿಸುವ ಸಂಕಲ್ಪ ಮಾಡಿದರು. ಶಿಷ್ಯರಾದ ಹಕ್ಕ- ಬುಕ್ಕರಿಗೆ ಅದಕ್ಕಾಗಿ ದೀಕ್ಷೆ ನೀಡಿದರು. ನಾಡಿನ ಏಕತೆ ಪ್ರತೀಕವಾಗಿ ಭುವನೇಶ್ವರಿ ದೇವಿಯನ್ನು ನಾಡಿನ ಒಳಿತಿಗಾಗಿ ಒಗ್ಗೂಡಿ ಪ್ರಾರ್ಥಿಸುವ ರೂಢಿ ಆರಂಭಿಸಲಾಯಿತು. ಇದನ್ನು ವಿಜಯನಗರದ ಅರಸರೂ ಮುಂದುವರಿಸಿದರು.ನಾಡಪ್ರೇಮ ಪ್ರತೀಕ:
ಪಶ್ಚಿಮ ಬಂಗಾಳ ಹಾಗೂ ಮಹಾರಾಷ್ಟ್ರದಲ್ಲಿ ಅವರ ನಾಡು, ನುಡಿಗಳ ಬಗ್ಗೆ ತೀವ್ರವಾದ ಅಭಿಮಾನ ಸ್ವಾಭಿಮಾನಗಳು ಹೊಮ್ಮಿದಾಗ, ಅವುಗಳನ್ನು ಮೂರ್ತೀಕರಿಸುವುದಕ್ಕೆ ತಮ್ಮ ನಾಡನ್ನು ತಾಯಿಯ ಸ್ವರೂಪದಲ್ಲಿ ಚಿತ್ರಿಸಿಕೊಳ್ಳತೊಡಗಿದರು. ''''''''ವಂದೇ ಮಾತರಂ'''''''' ಮುಂತಾದ ಹಾಡುಗಳಲ್ಲಿ ಇದನ್ನು ನೋಡಬಹುದು. ಈ ರೂಢಿ ಮುಂದೆ ನಮ್ಮಲ್ಲಿಗೂ ಬಂತು. ನಮ್ಮ ಕವಿ, ಸಾಹಿತಿಗಳೂ ಇದಕ್ಕೆ ತಮ್ಮ ಕೊಡುಗೆ ನೀಡಿದರು. ಆಲೂರು ವೆಂಕಟರಾಯರು, ಬಿಎಂಶ್ರೀ, ಕುವೆಂಪು ಮೊದಲಾದವರು ತಮ್ಮ ಗದ್ಯ, ಕವನಗಳನ್ನು ಕನ್ನಡ ತಾಯಿ ಭುವನೇಶ್ವರಿಯನ್ನು ಸ್ತುತಿಸಿರುವುದನ್ನು ಕಾಣುತ್ತೇವೆ. ಮುಂದೆ ಕನ್ನಡ ಹೋರಾಟಗಾರರು ತಾಯಿ ಭುವನೇಶ್ವರಿಯನ್ನು ಸ್ಥಾಪಿತ ರೂಪಕವಾಗಿ ಸ್ವೀಕರಿಸಿದರು. ಇದರ ಪ್ರತೀಕವಾಗಿಯೇ ಹಂಪಿಯಿಂದಲೇ ಕನ್ನಡದ ಜ್ಯೋತಿ ರಥಯಾತ್ರೆ 1973ರಲ್ಲಿ ನೆರವೇರಿತು.ನಾಡಿನ ಜನರಲ್ಲಿ ಅಭಿಮಾನ ಮೂಡಿಸಲು ಶಾಂತಕವಿಗಳು ಹಾಗೂ ಆಲೂರು ವೆಂಕಟರಾಯರು ಮೊದಲ ಬಾರಿ ನಾಡದೇವತೆಯ ಪರಿಕಲ್ಪನೆಗೆ ಜೀವ ತುಂಬಿದರು. ಉಭಯ ಕವಿಗಳ ಜತೆಗೆ ಕರ್ನಾಟಕದ ಏಕೀಕರಣಕ್ಕೆ ಇತರ ಕವಿಗಳು ತಾಯಿ ಭುವನೇಶ್ವರಿಯನ್ನು ತಮ್ಮ ರಚನೆಗಳಲ್ಲಿ ಸ್ತುತಿಸಿದರು.
ಏಕೀಕರಣದ ಪೂರ್ವದಲ್ಲೇ ಕನ್ನಡಾಭಿಮಾನ ಎಲ್ಲೆಡೆ ಮೊಳಗಿಸಲು ಶಾಂತಕವಿಗಳು ಶ್ರೀ ವಿದ್ಯಾರಣ್ಯ ವಿಜಯ ಎಂಬ ಕೃತಿ ರಚಿಸಿದರು. ಈ ಕೃತಿ ಹಂಪಿ, ತಾಯಿ ಭುವನೇಶ್ವರಿ ಹಾಗೂ ನಾಡು- ನುಡಿ ಬಗ್ಗೆ ಅಭಿಮಾನ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗೇ ಚಳವಳಿಗಾರ ದೊಡ್ಡಮೇಟಿ ಅಂದಾನಪ್ಪನವರು ಭುವನೇಶ್ವರಿ ಸ್ತುತಿ ರಚಿಸಿದರು.ಐತಿಹಾಸಿಕ ನೆಲ:ಹಂಪಿ ನೆಲ ಐತಿಹಾಸಿಕ ನೆಲವಾಗಿದೆ. ಕನ್ನಡದ ಏಕೀಕರಣದ ಬಳಿಕ ಮೈಸೂರು ರಾಜ್ಯ ಎಂದು ಹೆಸರು ಪಡೆದಿದ್ದ ರಾಜ್ಯವನ್ನು ಕರ್ನಾಟಕ ಎಂದು 1973ರಲ್ಲಿ ನವೆಂಬರ್ ಒಂದರಂದು ನಾಮಕರಣ ಮಾಡಲಾಯಿತು. ಉತ್ತರ ಕರ್ನಾಟಕದಲ್ಲಿ ಕರ್ನಾಟಕ ಸೂಚಿಸುವ ಶಿಕ್ಷಣ ಸಂಸ್ಥೆಗಳಿದ್ದವು. ಹಾಗಾಗಿ ಕರುನಾಡು ಒಂದುಗೂಡಿಸುವ ಕರ್ನಾಟಕ ಎಂಬ ಹೆಸರನ್ನು ದೇವರಾಜ ಅರಸು ಅವರು ಮಾಡಿದರು. ಮೈಸೂರು ರಾಜ್ಯದಿಂದ ಕರ್ನಾಟಕ ಎಂದು ಹೆಸರು ಮಾಡಿ ದೇವರಾಜ ಅರಸು ಅವರು ಕರ್ನಾಟಕದ ಮನಸ್ಸುಗಳನ್ನು ಬೆಸೆಯುವ ಕೆಲಸ ಮಾಡಿದರು. ಹಂಪಿಯಿಂದಲೇ ಜ್ಯೋತಿರಥಯಾತ್ರೆ ಆರಂಭಿಸಿದರು. ಹಾಗಾಗಿ ಕನ್ನಡದ ಚರಿತ್ರೆಯಲ್ಲಿ ಹಂಪಿ ನೆಲ ದಾಖಲಾರ್ಹವಾಗಿದೆ ಎನ್ನುತ್ತಾರೆ ಕನ್ನಡ ವಿವಿ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ.