ಮೊದಲ ಬಾರಿಗೆ ಡೊಳ್ಳು ಕುಣಿತಕ್ಕೆ ಸಿದ್ಧರಾದ ಸಿದ್ದಿಗರು!

| Published : Nov 01 2023, 01:00 AM IST

ಸಾರಾಂಶ

ಅಂಕೋಲಾ ತಾಲೂಕಿನ ಹಳವಳ್ಳಿ ಹಾಗೂ ಯಲ್ಲಾಪುರ ತಾಲೂಕಿನ ಉಮ್ಮಚ್ಚಗಿಯ ಸಿದ್ದಿ ಸಮುದಾಯದ ಯುವಕ-ಯುವತಿಯರು ಡೊಳ್ಳು ಕುಣಿತದ ತಂಡ ಕಟ್ಟಿಕೊಂಡಿದೆ.

ವಸಂತಕುಮಾರ ಕತಗಾಲಕಾರವಾರ:

ಸಿದ್ದಿ ಸಮುದಾಯ ಎಂದರೆ ಡಮಾಮಿ, ಪುಗುಡಿ ನೃತ್ಯಕ್ಕೆ ಹೆಸರು ವಾಸಿ. ಜಿಲ್ಲೆಯ ಸಿದ್ದಿ ಸಮುದಾಯದವರು ದೇಶ- ವಿದೇಶಗಳಿಗೆ ತೆರಳಿ ತಮ್ಮ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಮಾಡುತ್ತಾರೆ. ಆದರೆ ಇದೇ ಸಿದ್ದಿ ಸಮುದಾಯದ ಒಂದು ತಂಡ ಈ ಎರಡು ನೃತ್ಯಕ್ಕೆ ಸೀಮಿತವಾಗದೇ ಡೊಳ್ಳು ಕುಣಿತವನ್ನು ಕರಗತ ಮಾಡಿಕೊಂಡಿದೆ.

ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಡೊಳ್ಳು ಕುಣಿತ ಕಾಣಸಿಗುತ್ತದೆ. ಭಾರಿ ಗಾತ್ರದ ಡೊಳ್ಳನ್ನು ಸೊಂಟಕ್ಕೆ ಕಟ್ಟಿಕೊಂಡು ಬಾರಿಸಬೇಕು. ಹಾಗಾಗಿ ಪುರುಷರು ಮಾತ್ರ ಈ ಡೊಳ್ಳು ಕುಣಿತದಲ್ಲಿ ಭಾಗವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಮಹಿಳೆಯರು ಡೊಳ್ಳು ಕುಣಿತದಲ್ಲಿ ಭಾಗಿಯಾಗುತ್ತಿದ್ದಾರೆ. ಉತ್ತರ ಕನ್ನಡದ ಹಳಿಯಾಳ, ಸಿದ್ದಾಪುರ ಡೊಳ್ಳು ತಂಡಗಳು ಇದ್ದರೂ ಸಿದ್ದಿ ಸಮುದಾಯದಿಂದ ಡೊಳ್ಳು ಕುಣಿತ ನಡೆಯುತ್ತಿರಲಿಲ್ಲ. ಡೊಳ್ಳು ಕುಣಿತದ ಪ್ರದರ್ಶನಕ್ಕೂ ಸಿದ್ದಿಯ ತಂಡವೊಂದು ಮೊದಲ ಬಾರಿಗೆ ಸಿದ್ಧವಾಗಿದೆ.

ಅಂಕೋಲಾ ತಾಲೂಕಿನ ಹಳವಳ್ಳಿ ಹಾಗೂ ಯಲ್ಲಾಪುರ ತಾಲೂಕಿನ ಉಮ್ಮಚ್ಚಗಿಯ ಸಿದ್ದಿ ಸಮುದಾಯದ ಯುವಕ-ಯುವತಿಯರು ಡೊಳ್ಳು ಕುಣಿತದ ತಂಡ ಕಟ್ಟಿಕೊಂಡಿದ್ದು, ಭಾರಿ ಗಾತ್ರದ ಡೊಳ್ಳನ್ನು ಹೊತ್ತು ಅಭ್ಯಾಸ ಮಾಡುತ್ತಿದ್ದು, ಬುಧವಾರದಂದು ನಗರದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ಪ್ರಪ್ರಥಮ ಕಲಾ ಪ್ರದರ್ಶನ ಈ ತಂಡ ನೀಡುತ್ತಿದೆ. ಇವರಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು, ೫ ಜನ ಗಂಡು ಮಕ್ಕಳಿದ್ದು, ಅದರಲ್ಲೂ ಕಾಲೇಜು ವ್ಯಾಸಂಗ ಮಾಡುತ್ತಿರುವ ಯುವಕ- ಯುವತಿಯರು ಡೊಳ್ಳನ್ನು ಸೊಂಟಕ್ಕೆ ಕಟ್ಟಿ ಬಡಿಯಲು ಅಣಿಯಾಗಿದ್ದಾರೆ.

ಶಶಿಕಲಾ ಸಿದ್ದಿ ವಿಜಯಪುರದ ಸರ್ಕಾರಿ ಎಂಜನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿತ್ತಿದ್ದು, ರಾಧಿಕಾ ಸಿದ್ದಿ ಬಿಕಾಂ ಹಾಗೂ ಮಿಥುನ್ ಸಿದ್ದಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ತಮ್ಮ ಸಾಂಪ್ರದಾಯಿಕ ಕಲೆಯಾದ ಡಮಾಮಿ, ಪುಗುಡಿ ಜತೆ ಡೊಳ್ಳು ಕುಣಿತದಲ್ಲೂ ಆಸಕ್ತಿ ಹೊಂದಿರುವ ಕಾರಣ ವ್ಯಾಸಂಗದ ಜತೆಗೆ ಬಿಡುವಿನ ವೇಳೆಯಲ್ಲಿ ಡೊಳ್ಳು ಕುಣಿತಕ್ಕೆ ಹೆಜ್ಜೆ ಇಡಲು ಉತ್ಸುಕರಾಗಿದ್ದಾರೆ.ಬುಡಕಟ್ಟು ಸಮುದಾಯದಲ್ಲಿ ಬರುವ ಸಿದ್ದಿಗರಲ್ಲಿ ಡಮಾಮಿ, ಪುಗುಡಿ ನೃತ್ಯ ಸಾಂಪ್ರದಾಯಿಕವಾಗಿದೆ. ಕೇವಲ ಇದಕ್ಕಷ್ಟೇ ಸೀಮಿತವಾಗದೇ ಡೊಳ್ಳು ಕುಣಿತ ಕೂಡಾ ಪ್ರಯತ್ನಸಬೇಕು ಎಂದು ಯೋಚಿಸಿ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದೇವೆ. ಕಳೆದ ನಾಲ್ಕೈದು ದಿನಗಳಿಂದ ಕಾರವಾರದ ಕಡಲ ತೀರದಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ಕನ್ನಡ ರಾಜ್ಯೋತ್ಸವದಂದು ಮೊದಲ ಪ್ರದರ್ಶನ ನೀಡುತ್ತಿರುವುದು ಹೆಮ್ಮೆಯಾಗಿದೆ ಎನ್ನುತ್ತಾರೆ ಡೊಳ್ಳು ಕುಣಿತ ತಂಡದ ನಾಯಕಿ ರಾಧಿಕಾರ ಸಿದ್ದಿ.