ರಮೇಶ್‌ ಜಾರಕಿಹೊಳಿಗೆ ಭ್ರಮನಿರಸನ ಗ್ಯಾರಂಟಿ ಎಂದ ಶಾಸಕ ಶಿವಲಿಂಗೇಗೌಡ

| Published : Nov 01 2023, 01:00 AM IST

ಸಾರಾಂಶ

ರಾಜ್ಯ ಸರ್ಕಾರ ಮಹಾರಾಷ್ಟ್ರ ರೀತಿಯಲ್ಲಿ ತಾನೇ ಪತನವಾಗಲಿದೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಿಡಿಕಾರಿದ್ದಾರೆ.
ಕನ್ನಡಪ್ರಭ ವಾರ್ತೆ ಅರಸೀಕೆರೆ ರಾಜ್ಯ ಸರ್ಕಾರ ಮಹಾರಾಷ್ಟ್ರ ರೀತಿಯಲ್ಲಿ ತಾನೇ ಪತನವಾಗಲಿದೆ ಎಂಬ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಿಡಿಕಾರಿದರು. ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅಂತಹದ್ದೇ ಪಾತ್ರವನ್ನು ಅವರ ರಾಜಕೀಯ ಜೀವನದಲ್ಲಿ ಮಾಡಿಕೊಂಡು ಬಂದಿದ್ದಾರೆ. ಅವತ್ತಿನ ಸಮ್ಮಿಶ್ರ ಸರ್ಕಾರದಲ್ಲಿ ಸಕ್ಸಸ್ ಆದೆ ಅಂಥ ಈ ಸರ್ಕಾರಕ್ಕೆ ಕೈ ಹಾಕಿದ್ರೆ ಭ್ರಮನಿರಸನ ಗ್ಯಾರಂಟಿ ಎಂದು ಎಚ್ಚರಿಸಿದರು. ಅವರ ಪ್ರಯತ್ನ ಯಾವುದೇ ಕಾರಣದಿಂದ ಯಶಸ್ವಿಯಾಗಿಲ್ಲ. ನಾನು ಎಲ್ಲಾ ಶಾಸಕರ ಒಡನಾಟದಲ್ಲಿದ್ದೀನಿ. ಒಬ್ಬ ಶಾಸಕನನ್ನು ನಾನು ಕರೆದುಕೊಂಡು ಹೋಗಿದ್ದೀವಿ ಅಂತ ಅವರು ಸ್ಟೇಟ್‌ಮೆಂಟ್‌ ಕೊಡಲಿ ನೋಡೋಣ, ಆಗ ರಮೇಶ್ ಜಾರಕಿಹೊಳಿಗೆ ಶಹಬ್ಬಾಸ್ ಹೇಳ್ತೀನಿ ಎಂದರು. ಸುಮ್ಮನೆ ಊಹಾಪೋಹಕ್ಕೆ ಮಾಧ್ಯಮದಲ್ಲಿ ಹೆಸರು ಬರುತ್ತೆ, ನಾನೂ ಲೀಡರ್ ಆಗಬಹುದು ಅಂತ ಈ ಥರ ಖಳನಾಯಕನ ಪಾತ್ರ ಮಾಡೋದು ಒಳ್ಳೆಯದಲ್ಲ ಎಂದ ಅವರು, ಆಡಳಿತ ವ್ಯವಸ್ಥೆಯಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸಲು ಹಾಗೂ ಸರ್ಕಾರದ ಮೇಲೆ ಕೆಟ್ಟ ಅಭಿಪ್ರಾಯ ತರಲು ಸಂಚು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ರಮೇಶ್ ಜಾರಕಿಹೊಳಿ, ಬಿಜೆಪಿಯವರು ಸೇರಿ ಯಾರ‍್ಯಾರು ಈ ರೀತಿ ಹೇಳ್ತಾರೋ ಅವರೆಲ್ಲ ಹುಚ್ಚರು. ಇವರೆಲ್ಲರಿಗೂ ಭ್ರಮ ನಿರಸನ ಕಾದಿದೆ, ಯಶಸ್ಸು ಸಿಗುವುದಿಲ್ಲ ಎಂದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ ಎಂಬ ಕೆಲ ಕಾಂಗ್ರೆಸ್ ಶಾಸಕರ ಹೇಳಿಕೆಗೆ ಆ ಪ್ರಶ್ನೆ ಪ್ರಸ್ತುತ ಇಲ್ಲ, ಈಗ ಸಿಎಂ ಇದ್ದಾರೆ. ನಮ್ಮದು ನೂರಾರು ವರ್ಷಗಳ ಇತಿಹಾಸವಿರುವ ಪಕ್ಷ, ಹೈಕಮಾಂಡ್ ಭದ್ರವಾಗಿದೆ. ಯಾರು ಮುಖ್ಯಮಂತ್ರಿ ಆಗಬೇಕು, ಬಿಡಬೇಕು ಅಂತ ತೀರ್ಮಾನ ಮಾಡೋದು ಹೈಕಮಾಂಡ್. ಸಿದ್ದರಾಮಯ್ಯ ಮುಖ್ಯಮಂತ್ರಿ ಅಂತ ಹೈಕಮಾಂಡ್ ಹೇಳಿ ಕಳುಹಿಸಿದೆ, ಮುಖ್ಯಮಂತ್ರಿ ಆಗಿದ್ದಾರೆ. ಬಂಡೆ ರೂಪದಲ್ಲಿ ಕೆಲಸ ಮಾಡುತ್ತಿದ್ದಾರೆ. ೬೮ ಸಾವಿರ ಕೋಟಿ ಬಡ ಜನರಿಗೆ ಕೊಡುಗೆ ಕೊಟ್ಟಿರುವ ಇತಿಹಾಸ ದೇಶದಲ್ಲಿ ಇದ್ದರೆ ಅದು ಕರ್ನಾಟಕ ರಾಜ್ಯ ಮಾತ್ರ ಎಂದರು. ಯಾರಿಂದಲೂ ಸಿದ್ದರಾಮಯ್ಯ ಅವರನ್ನು ಅಲುಗಾಡಿಸಲು ಸಾಧ್ಯವಿಲ್ಲ. ಗೃಹ ಸಚಿವರ ಮನೆಯಲ್ಲಿ ನಡೆದ ಡಿನ್ನರ್ ಆಯೋಜನೆಗೆ ತಪ್ಪು ಅರ್ಥ ಕಲ್ಪಿಸಬೇಕಿಲ್ಲ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು. ಇದೇ ವೇಳೆ ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಹೈಕಮಾಂಡ್‌ಗೆ ಬಿಟ್ಟದ್ದು, ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ. ಇವರು ಹೇಳುತ್ತಿರುವುದಕ್ಕೆಲ್ಲಾ ಎರಡೂವರೆ ವರ್ಷ ಆದ್ಮೇಲೆ ಉತ್ತರ ಸಿಗಲಿದೆ. ಬದಲಾವಣೆ ಮಾತು ಹೇಳುತ್ತಿರುವವರಿಗೆ ಹೈಕಮಾಂಡ್‌ನವರು ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು. ಯಾರೋ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳು ಹೇಳಿರಬಹುದು ಎರಡುವರೆ ವರ್ಷ ಆದಮೇಲೆ ಸಿಎಂ ಆಗ್ತಾರೆ ಅಂತ, ಅದು ಅವರ ವೈಯುಕ್ತಿಕ ಅಭಿಪ್ರಾಯ ಇರಬಹುದು ಎಂದರು. ಬಿಜೆಪಿ ವಿರುದ್ಧ ಗರಂ: ಹಾಲಿ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕೆಎಂಶಿ, ಸುಭದ್ರ ಸರ್ಕಾರವನ್ನು ತೆಗೆಯಬೇಕು ಅಂತ ಹೊರಟ್ಟಿದ್ದಾರೆಲ್ಲಾ ಈ ಮೂರ್ಖರು, ಇವರು ನಾಚಿಕೆಯಾಗಬೇಕು. ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡ್ತೀನಿ, ಐದು ವರ್ಷಗಳ ಅವಧಿಗೆ ಒಬ್ಬ ಶಾಸಕ ಯಾವ ಪಕ್ಷದಿಂದ ಆಯ್ಕೆಯಾಗ್ತಾನೆಯೋ ಅದೇ ಪಕ್ಷದಲ್ಲಿ ಇರಬೇಕು. ಮಧ್ಯೆ ಪಕ್ಷ ಬದಲಿಸಿದರೆ ಅವನಿಗೆ ಅವಕಾಶ ಕೊಡಬಾರದು. ಅಂತಹ ಕಾನೂನನ್ನು ಚುನಾವಣಾ ಆಯೋಗ ತರಬೇಕು ಎಂದರು.