ಸಾರಾಂಶ
ಧಾರವಾಡ: ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವಸಂತಗಳು ತುಂಬಿದ ನಿಮಿತ್ತ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50ರ ಜ್ಯೋತಿರಥ ಯಾತ್ರೆಗೆ ಭಾನುವಾರ ಬೆಳಗ್ಗೆ ಜಿಲ್ಲಾಡಳಿತ ಹಾಗೂ ಕನ್ನಡ ಸಂಘ-ಸಂಸ್ಥೆ, ಸಾಹಿತ್ಯ ಪರಿಷತ್ತು ವತಿಯಿಂದ ಭವ್ಯವಾದ ಸ್ವಾಗತ ಕೋರಲಾಯಿತು.
ಜಿಲ್ಲಾಡಳಿತದ ಪರವಾಗಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಹಾಗೂ ಧಾರವಾಡ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ಕನ್ನಡ ಜ್ಯೋತಿ ರಥಕ್ಕೆ ಪುಷ್ಪಾರ್ಪಣೆ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಮುಖ್ಯ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಹಿರಿಯ ಸಾಹಿತಿ ಪ್ರೊ. ವೀರಣ್ಣ ರಾಜೂರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಹಿರಿಯ ವಕೀಲ ಉದಯ ದೇಸಾಯಿ, ಸಾಹಿತ್ಯ ಪರಿಷತ್ತು ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ, ತಾಲೂಕು ಅಧ್ಯಕ್ಷ ಮಹಾಂತೇಶ ನರೇಗಲ್ಲ, ಎಸ್.ಎಸ್. ದೊಡಮನಿ, ಶರಣಪ್ಪ ಕೊಟಗಿ, ಗಂಗಾಧರ ಗಡಾದ, ಕಲಾವಿದರಾದ ವಿಶ್ವೇಶ್ವರಿ ಹಿರೇಮಠ, ಸುರೇಶ ಹಾಲಭಾವಿ, ದೀಪಕ ಆಲೂರ, ಎಫ್.ಬಿ. ಕಣವಿ ಸೇರಿದಂತೆ ಅನೇಕ ಕನ್ನಡ ಅಭಿಮಾನಿಗಳು, ಕನ್ನಡ ಸಂಘಟನೆಗಳ ಸದಸ್ಯರು ಸಾಕ್ಷಿಯಾದರು.
ರಥಜ್ಯೋತಿ ಯಾತ್ರೆಗೆ ಸಾಂಸ್ಕೃತಿಕ ಮೆರುಗು: ಈ ಜ್ಯೋತಿ ರಥಯಾತ್ರೆಗೆ ಡೊಳ್ಳು ಕುಣಿತ, ಕರಡಿ ಮಜಲು, ಕನ್ನಡ ಹಾಡುಗಳಿಗೆ ನೃತ್ಯ, ಕುಣಿತಗಳು ಸಾಂಸ್ಕೃತಿಕ ಮೆರುಗು ತಂದವು.ನೃತ್ಯ ಕಲಾವಿದರ ಒಕ್ಕೂಟದಿಂದ ಪ್ರಸಿದ್ಧ ಕನ್ನಡದ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ಭಾಗ್ಯಮ್ಮ ಕಾಳೆನ್ನವರ, ಪ್ರಕಾಶ ಮಲ್ಲಿಗವಾಡ ನೇತೃತ್ವದ ತಂಡಗಳು ರಥಯಾತ್ರೆಯ ಮುಂಭಾಗದಲ್ಲಿ ಸಂಗೀತದೊಂದಿಗೆ ನೃತ್ಯ ಮಾಡಿ, ಸಾರ್ವಜನಿಕರ ಗಮನ ಸೆಳೆದರು. ಜ್ಯೋತಿ ರಥ ಯಾತ್ರೆಯು ಧಾರವಾಡ ನಗರದ ಪ್ರಮುಖ ವೃತ್ತಗಳು, ನಗರ, ಬೀದಿಗಳಲ್ಲಿ ಸಂಚರಿಸಿ ಜರ್ಮನ್ ವೃತ್ತ, ಸಾಧನಕೇರಿ, ಕೆಲಗೇರಿ ಮಾರ್ಗವಾಗಿ ಆನಂತರ ಅಳ್ನಾವರ ತಾಲೂಕು ಪ್ರವೇಶ ಮಾಡಿತು.