ಸಂಸ್ಕೃತ ಕಾವೇರಿ ಪ್ರಾಂತ ಸಮ್ಮೇಳನ ಸಮಾರೋಪ

| Published : Feb 03 2025, 12:33 AM IST

ಸಾರಾಂಶ

ಮೈಸೂರಿನಲ್ಲಿ ಸಂಸ್ಕೃತ ಕಾವೇರಿ ಸಮ್ಮೇಳನವು ಸಂಸ್ಕೃತ ಕಾರ್ಯಕರ್ತರಿಗೆ ನವ ಚೈತನ್ಯ ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆದ 2 ದಿನಗಳ ಕರ್ನಾಟಕ ದಕ್ಷಿಣ ಸಂಸ್ಕೃತ ಕಾವೇರಿ ಪ್ರಾಂತ ಸಮ್ಮೇಳನವು ಭಾನುವಾರ ಸಮಾರೋಪಗೊಂಡಿತು.

ಶನಿವಾರ ಆರಂಭವಾದ ಈ ಎರಡು ದಿನಗಳ ಸಮ್ಮೇಳನವು ಹಲವು ಗೋಷ್ಠಿಗಳೊಂದಿಗೆ ಸಮಾರೋಪಗೊಂಡಿತು.

ಈ ವೇಳೆ ಮಾತನಾಡಿದ ಸಂಸ್ಕೃತ ಭಾರತೀ ಕರ್ನಾಟಕ ದಕ್ಷಿಣಮ್ ಅಧ್ಯಕ್ಷ ಪ.ನಾ. ಶಾಸ್ತ್ರೀ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಸ್ಕೃತ ಕಾವೇರಿ ಸಮ್ಮೇಳನವು ಸಂಸ್ಕೃತ ಕಾರ್ಯಕರ್ತರಿಗೆ ನವ ಚೈತನ್ಯ ನೀಡಿದೆ. ಮೈಸೂರಿನ ರಾಜಮನೆತನ ಮತ್ತು ಮಹಾಜನತೆಯು ವಿಶೇಷ ಪ್ರೀತಿಯಿಂದ ಸಂಸ್ಕೃತವನ್ನು ಶತಮಾನಗಳಿಂದ ಪೋಷಿಸುತ್ತಿದೆ ಎಂದರು.

ಕರ್ನಾಟಕ ದಕ್ಷಿಣ ಪ್ರಾಂತದ ಸುಮಾರು ಹನ್ನೆರಡು ಜಿಲ್ಲೆಗಳಿಂದ ಸುಮಾರು ಸಾವಿರ ಪ್ರತಿನಿಧಿಗಳು ತಮ್ಮದೇ ಖರ್ಚಿನಲ್ಲಿ ಸಂಸ್ಕೃತದ ಪ್ರೀತಿಯೊಂದಿಗೆ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಸಮ್ಮೇಳನದ ಪೂರ್ವಭಾವಿಯಾಗಿ ಮೈಸೂರಿನ ಹದಿನೈದು ಕೇಂದ್ರಗಳಲ್ಲಿ ಹತ್ತು ದಿನಗಳ ಉಚಿತ ಸಂಸ್ಕೃತ ಸಂಭಾಷಣ ಶಿಬಿರವನ್ನು ಸಂಸ್ಕೃತ ಭಾರತಿ ವತಿಯಿಂದ ನಡೆಸಲಾಯಿತು ಎಂದು ಅವರು ತಿಳಿಸಿದರು.

ಮಕರ ಸಂಕ್ರಾಂತಿಯಿಂದ ಮೈಸೂರಿನಲ್ಲಿ ಸಂಸ್ಕೃತದ ನವೋತ್ಥಾನ ಕಾಲವು ಆರಂಭವಾಗಿದೆ. ಜ್ಞಾನಕುಂಭ ಹೆಸರಿನ ಪ್ರದರ್ಶಿನಿಯು ಮಹಾಕುಂಭದ ಪರ್ವಕಾಲದಲ್ಲಿ ಅತ್ಯಂತ ಅರ್ಥಪೂರ್ಣವಾಗಿತ್ತು. ಶೋಭಾಯಾತ್ರೆ, ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೂರಾರು ಸಾರ್ವಜನಿಕರು ಭಾಗವಿಹಿಸಿ ಸಮ್ಮೇಳನದ ಮೆರಗು ಹೆಚ್ಚಿಸಿದ್ದಾಗಿ ಅವರು ಹೇಳಿದರು.

ಸಂಸ್ಕೃತ ಭಾರತಿಯ ಅಖಿಲ ಭಾರತೀಯ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಭಟ್ ಮಾತನಾಡಿ, ಪ್ರಾಥಮಿಕ ಶಾಲೆಯಿಂದ ಪದವಿ ಹಂತದವರೆಗೆ ಸಂಸ್ಕೃತದ ಪಠ್ಯವು ಸಿದ್ಧವಾಗುತ್ತಿದೆ. ಸಂಸ್ಕೃತವನ್ನು ಕಲಿಯಬೇಕು ಎಂದು ಶ್ರೀಸಾಮಾನ್ಯರಲ್ಲಿ ಆಸಕ್ತಿ ಹೆಚ್ಚುತ್ತಿದೆ. ದೇಶ-ವಿದೇಶಗಳಲ್ಲಿ ಸಂಸ್ಕೃತದ ಅಧ್ಯಯನಕ್ಕೆ ಮತ್ತು ಅನುಸಂಧಾನಕ್ಕೆ ಹೆಚ್ಚಿನ ಬೇಡಿಕೆ ಉಂಟಾಗುತ್ತಿದೆ. ಸಂಸ್ಕೃತದ ನಿಮಿತ್ತವಾಗಿ ನನ್ನ ದೈನಂದಿನ ಜೀವನದಲ್ಲಿ ಕೆಲವು ಘಂಟೆಗಳನ್ನಾದರೂ ಮೀಸಲಿಡಬೇಕು ಎಂದರು.

ಸಂಸ್ಕೃತಕ್ಕೆ ಸಮಯದಾನ ಮಾಡೋಣ. ಕಾರ್ಯದಿಂದ ನಿವೃತ್ತರಾದವರು ವಾನಪ್ರಸ್ಥಿ ಪೂರ್ಣಕಾಲಿಕರಾಗಿ ಸಂಸ್ಕೃತ ಸೇವೆಗೆ ಸಿದ್ಧರಾಗಬೇಕಿದೆ. ಸಂಸ್ಕೃತ ಆಂದೋಲನದ ಸಂಸ್ಥಾಪಕರು ದೀರ್ಘಕಾಲಿಕ ಚಿಂತನೆ ಹೊಂದಿ ಸಮರ್ಪಣೆಯ ಆಧಾರದಲ್ಲಿ ಸಂಸ್ಕೃತಭಾರತಿ ಸಂಘಟನೆಯನ್ನು ಕಟ್ಟಿದ್ದಾರೆ. ಇಚ್ಛಾಶಕ್ತಿ, ಜ್ಞಾನಶಕ್ತಿ, ಕ್ರಿಯಾಶಕ್ತಿಗಳೆಂಬ ಮೂರುಶಕ್ತಿಗಳನ್ನು ಸಂಸ್ಕೃತದ ಕಾರ್ಯಕರ್ತರು ಸಂಪಾದಿಸಬೇಕು. ಪ್ರತಿಯೊಂದು ಮನೆಯೂ ಸಂಸ್ಕೃತ ಗೃಹವಾಗಬೇಕು. ಈ ಸಂದರ್ಭದಲ್ಲಿ ಸಂಸ್ಕೃತದ ಕಾರ್ಯಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಅವರು ಹೇಳಿದರು.

ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ, ಸಂಗೀತಕ್ಕೆ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ ಎಂದು ಶ್ರೀಗಳು ಸಿದ್ಧಪಡಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪ್ರತಿನಿತ್ಯ 10 ಸಾವಿರ ಆಹಾರದ ಪೊಟ್ಟಣ ನೀಡಿದ್ದರು. ಸಂಸ್ಕೃತ ಕಾವೇರಿ ಸಮ್ಮೇಳನಕ್ಕೆ ಸ್ಥಾನ, ಆಹಾರ ಮುಂತಾದ ಎಲ್ಲಾ ವ್ಯವಸ್ಥೆಯನ್ನು ಉದ್ಧಾರವಾಗಿ ಮತ್ತು ಉಚಿತವಾಗಿ ನೀಡಿರುವ ಗಣಪತಿ ಸಚ್ಚಿದಾನಂದಾಶ್ರಮದ ಉಭಯ ಶ್ರೀಗಳಿಗೆ ನಾವು ಚಿರಋಣಿ ಎಂದರು.ಇದೇ ವೇಳೆ ಸನ್ಮಾನ ಸ್ವೀಕರಿಸಿದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ಶಿಲ್ಪಕಲೆಗೆ ಗಣಪತಿ ಸಚ್ಚಿದಾನಂದಾಶ್ರಮವು ಸದಾ ಪ್ರೇರಣೆ ಮತ್ತು ಪೋಷಣೆ ನೀಡಿದೆ. ನನ್ನ ಗುರುಹಿರಿಯರು ಶಿಲ್ಪಶಾಸ್ತ್ರದೊಂದಿಗೆ ಸಂಸ್ಕೃತವನ್ನೂ ಕಲಿತಿದ್ದರು. ಶ್ರೀರಾಮನ ಮೂರ್ತಿ ಮತ್ತು ಶಂಕರಾಚಾರ್ಯರ ಪ್ರತಿಮೆಯನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಮಾಡಿದ್ದಾಗಿ ಅವರು ಹೇಳಿದರು.

ಸಮ್ಮೇಳನದ ಸಂಚಾಲಕ ಡಾ. ರುಕ್ಮಾಂಗದ ಆರ್ಯ ಇದ್ದರು.