ಕರ್ನಾಟಕ ಜಾನಪದ ಪರಂಪರೆ ತವರೂರು: ಸಂಪತ್ ಕುಮಾರ್‌

| Published : Sep 21 2024, 02:06 AM IST

ಸಾರಾಂಶ

ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಜಾನಪದ ದಿನಾಚರಣೆ ಪ್ರಯುಕ್ತ ಅಂತರ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಜಾನಪದ ಗಾಯನ ಸ್ಪರ್ಧಾ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಕರ್ನಾಟಕ ಜಾನಪದ ಪರಂಪರೆಯ ತವರೂರಾಗಿದ್ದು ಮುಂದಿನ ಪೀಳಿಗೆಗಾಗಿ ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕದ ಖಜಾಂಚಿ ಸಂಪತ್‍ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಜಾನಪದ ಪರಿಷತ್ ಶನಿವಾರಸಂತೆ ಹೋಬಳಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಜಾನಪದ ದಿನಾಚರಣೆ ಪ್ರಯುಕ್ತ ಅಂತರ್ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಜಾನಪದ ಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದಿನವರು ಜೀವನದ ಅನುಭವಗಳನ್ನು ಹಾಡಿನ ಮೂಲಕವಾಗಿ ಬಾಯಿಂದ ಬಾಯಿಗೆ ಹರಡಿಸಿದ ಜಾನಪದ ಹಾಡು ವಿವಿಧ ರೀತಿಯ ಜಾನಪದ ಪ್ರಕಾರಗಳಾಗಿ ಜಾನಪದ ಸೊಗಡು ತನ್ನದೇ ಛಾಪು ಮೂಡಿಸಿದೆ. ಇಂದು ಆಧುನಿಕತೆಯಿಂದಾಗಿ ಜಾನಪದ ಸಂಸ್ಕೃತಿ ಕ್ಷೀಣಿಸುತ್ತಿರುವ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿ ಸೊಗಡಿನ ಕಾರ್ಯಕ್ರಮ ನಡೆಸುವ ಮೂಲಕ ಉಳಿಸಿ ಬೆಳೆಸುವಂತೆ ಮನವಿ ಮಾಡಿದರು.

ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ಮುನೀರ್ ಆಹಮ್ಮದ್ ಮಾತನಾಡಿ, ಜಾನಪದ ಜ್ಞಾನದ ಪ್ರತೀಕವಾಗಿದೆ. ಜಾನಪದ ಹಾಡು ಮತ್ತು ಸಂಸ್ಕೃತಿ ಹುಟ್ಟು ಹಾಕಿದ ಹಿಂದಿನವರು ವಿದ್ಯಾವಂತರಾಗಿರಲಿಲ್ಲ. ಆದರೂ ತನ್ನ ಜೀವನದ ಅನುಭವಗಳನ್ನು ಹಾಡಿನ ಮೂಲಕ ಸಮಾಜಕ್ಕೆ ಹರಡಿದರು. ಜಾನಪದ ಹಾಡಿನ ಮೂಲಕ ಸಮಾಜದಲ್ಲಿ ಸಹ ಬಾಳ್ವೆಯಿಂದ ಬದಕಲು ಕಲಿಸಿದರು ಎಂದರು.

ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಮಾತನಾಡಿ, ಜಾನಪದ ಸಂಸ್ಕೃತಿ ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಕೂಡ ಹಸನವಾಗುತ್ತದೆ ಈ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿ ಬಿಂಬಿಸಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.

ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷೆ ಡಿ.ಸುಜಲಾದೇವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಸಂಸ್ಕೃತಿ ಶಿಕ್ಷಣದ ಭಾಗವಾಗಿದೆ. ಹಿಂದಿನವರು ಹೊಲ-ಗದ್ದೆಗಳಲ್ಲಿ ದಿನನಿತ್ಯ ಕೆಲಸ ಮಾಡಿ ದಣಿಯುತ್ತಿದ್ದರು. ಜಾನಪದ ಹಾಡಿನ ಮೂಲಕ ಶ್ರಮ ಕಡಿಮೆ ಮಾಡಿಕೊಳ್ಳುತ್ತಿದ್ದರು. ಮುಂದೆ ಇದು ಜಾನಪದದ ನಾನಾ ಪ್ರಕಾರಗಳಾಗಿ ಬದಲಾಗಿದೆ ಎಂದರು.

ಶನಿವಾರಸಂತೆ ಹೋಬಳಿ ಘಟಕದ ಉಪಾಧ್ಯಕ್ಷ ಎಂ.ಎನ್.ಹರೀಶ್, ಘಟಕದ ಸದಸ್ಯರಾದ ಪೂರ್ಣಿಮಾ ಕಿರಣ್, ದಿನೇಶ್ ಮಾಲಂಬಿ, ಎಚ್.ಕೆ.ಭಾಸ್ಕರ್, ನಳಿನಿ ನಾಗರಾಜ್, ಎಸ್.ಆರ್.ಶೋಭಾವತಿ ಮತ್ತಿತರರಿದ್ದರು.

ಜಾನಪದ ಗಾಯನ ಸ್ಪರ್ಧೆಯಲ್ಲಿ ಶನಿವಾರಸಂತೆ ಭಾರತಿ ಪ.ಪೂ.ಕಾಲೇಜಿನ ತಂಡ ಪ್ರಥಮ, ವಿಘ್ನೇಶ್ವರ ಬಾಲಕಿಯರ ಪ್ರೌಢ ಶಾಲಾ ತಂಡ ದ್ವಿತೀಯ ಹಾಗೂ ಶನಿವಾರಸಂತೆ ಭಾರತಿ ಪ್ರೌಢ ಶಾಲಾ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.