ಪ್ರತಿ ಯುನಿಟ್‌ ವಿದ್ಯುತ್‌ ದರ 1.10 ರು.ಇಳಿಕೆ

| Published : Feb 29 2024, 02:06 AM IST / Updated: Feb 29 2024, 11:16 AM IST

ಸಾರಾಂಶ

ಕೆಇಆರ್‌ಸಿ ರಾಜ್ಯದಲ್ಲಿ ವಿದ್ಯುತ್‌ ದರ ಪರಿಷ್ಕರಣೆ ಮಾಡಿ ಆದೇಶಿಸಿದೆ. ಅದರನ್ವಯ,  ಮಾಸಿಕ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುವವರಿಗೆ 1.10 ರು. ಇಳಿಕೆಯಾಗಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ರಾಜ್ಯದಲ್ಲಿ ವಿದ್ಯುತ್‌ ದರ ಪರಿಷ್ಕರಣೆ ಮಾಡಿ ಆದೇಶಿಸಿದೆ. ಅದರನ್ವಯ, ಮಾಸಿಕ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಗೃಹ ಬಳಕೆದಾರರಿಗೆ ಪ್ರತಿ ಯುನಿಟ್‌ಗೆ 1.15 ರು. ಶುಲ್ಕ ಹೆಚ್ಚಳ ಆಗಿದ್ದರೆ, ಮಾಸಿಕ 100 ಯುನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆ ಮಾಡುವವರಿಗೆ 1.10 ರು. ಇಳಿಕೆಯಾಗಲಿದೆ.

ಏ.1ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಿದ್ದು, ಈವರೆಗೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ 0-100 ವರೆಗಿನ ಯುನಿಟ್‌ ಹಾಗೂ 100ಕ್ಕಿಂತ ಹೆಚ್ಚು ಯುನಿಟ್ ಬಳಕೆಗೆ ಪ್ರತ್ಯೇಕವಾಗಿದ್ದ ಎಲ್.ಟಿ. ಗೃಹಬಳಕೆ ಶುಲ್ಕದ ಸ್ಲ್ಯಾಬ್‌ ರದ್ದುಪಡಿಸಲಾಗಿದೆ. 

ಎಷ್ಟೇ ಯುನಿಟ್ ಬಳಕೆ ಮಾಡಿದರೂ ಪ್ರತಿ ಯುನಿಟ್‌ಗೆ 5.90 ರು.ಗಳಂತೆ ದರ ನಿಗದಿ ಮಾಡಿದೆ. ಜತೆಗೆ ಎಲ್ಲಾ ಎಸ್ಕಾಂಗಳಿಗೂ ಏಕರೂಪದ ಗೃಹಬಳಕೆ ವಿದ್ಯುತ್‌ ದರ ನಿಗದಿ ಮಾಡಿದೆ. ಇದರಿಂದ ಮಾಸಿಕ 100ಕ್ಕಿಂತ ಹೆಚ್ಚು ಯುನಿಟ್‌ ಬಳಕೆ ಮಾಡುವವರಿಗೆ ಬಂಪರ್ ಕೊಡುಗೆ ನೀಡಿದಂತಾಗಿದೆ.

ಕಡಿಮೆ ಬಳಕೆದಾರರಿಗೆ ಭಾರೀ ಶಾಕ್‌: ಇನ್ನು 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈವರೆಗೆ ಪ್ರತಿ ಯುನಿಟ್‌ಗೆ 4.75 ರು. ನಿಗದಿ ಮಾಡಲಾಗಿತ್ತು. ಅದು ಸಹ 5.90 ರು.ಗೆ ಹೆಚ್ಚಳವಾಗುವುದರಿಂದ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.15 ರು. ಶುಲ್ಕ ಹೆಚ್ಚಳ ಹೊರೆ ಬೀಳಲಿದೆ.ಆದರೆ, 100 ಯುನಿಟ್‌ಗಿಂತ ಕಡಿಮೆ ವಿದ್ಯುತ್‌ ಬಳಕೆ ಮಾಡುವ ಶೇ.97 ರಷ್ಟು ವಿದ್ಯುತ್‌ ಬಳಕೆದಾರರು ಈಗಾಗಲೇ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ಬಡವರಿಗೆ ದರ ಏರಿಕೆ ಬಿಸಿ ತಾಗುವುದಿಲ್ಲ ಎಂಬ ವಾದ ಇಂಧನ ಇಲಾಖೆಯಿಂದ ಕೇಳಿ ಬಂದಿದೆ. 

ವಾಣಿಜ್ಯ ಬಳಕೆದಾರರೂ ನಿರಾಳ: ಇನ್ನು ಎಲ್‌ಟಿ ಸಂಪರ್ಕ ಹೊಂದಿರುವ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯುನಿಟ್‌ಗೆ 7.75 ರು. ನಿಗದಿ ಮಾಡಿದ್ದ ಶುಲ್ಕವನ್ನು 7.25 ರು.ಗೆ (50 ಪೈಸೆ ಇಳಿಕೆ) ಇಳಿಕೆ ಮಾಡಲಾಗಿದೆ. ಎಲ್‌.ಟಿ. ವಾಣಿಜ್ಯ ಬಳಕೆಯ ಸಂಪರ್ಕಗಳಿಗೆ ಡಿಮ್ಯಾಂಡ್‌ ಆಧಾರದ ಶುಲ್ಕ ನಿಗದಿ ಮಾಡಿದ್ದು ಹಿಂದಿನ ಸ್ಲ್ಯಾಬ್‌ ಪದ್ಧತಿ ರದ್ದುಪಡಿಸಲಾಗಿದೆ. 

ಜತೆಗೆ ವಿದ್ಯುತ್‌ ಪೈಕಿ ಪ್ರತಿ ಯುನಿಟ್‌ಗೆ 8.50 ರು. ಇದ್ದ ಬೆಲೆಯನ್ನು 8 ರು.ಗೆ ಇಳಿಕೆ ಮಾಡಿದೆ. ಹೋರ್ಡಿಂಗ್ಸ್‌ ಸೇರಿದಂತೆ ಜಾಹಿರಾತು ಪ್ರದರ್ಶನ ಫಲಕಗಳಿಗೆ 10.50 ರು. ಇದ್ದ ಬೆಲೆಯನ್ನು ಅದೇ ರೀತಿ ಮುಂದುವರೆಸಲಾಗಿದೆ.

10 ಎಚ್‌ಪಿಗಿಂತ ಕಡಿಮೆ ಸಾಮರ್ಥ್ಯದ ಪಂಪ್‌ಸೆಟ್‌ಗಳ (ಐಪಿ ಸೆಟ್‌) ವಿದ್ಯುತ್‌ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ 0.95 ಪೈಸೆ, ಮೆಸ್ಕಾಂ 0.23 ಪೈಸೆ, ಸೆಸ್ಕ್‌ 0.48 ಪೈಸೆ, ಹೆಸ್ಕಾಂ 0.06 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 0.23 ಪೈಸೆಯಂತೆ ಪ್ರತಿ ಯುನಿಟ್‌ಗೆ ಹೆಚ್ಚಳ ಮಾಡಲಾಗಿದೆ.

ಎಚ್‌.ಟಿ. ವಾಣಿಜ್ಯ ಸಂಪರ್ಕಗಳಿಗೆ 1.25 ರು., ಎಚ್.ಟಿ. ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಇಂಧನ ಬಳಕೆ ಶುಲ್ಕ ಪ್ರತಿ ಯುನಿಟ್‌ಗೆ 0.40 ಪೈಸೆ, ಎಚ್‌.ಟಿ. ಖಾಸಗಿ ಏತ ನೀರಾವರಿ ಯೋಜನೆಗಳ ಮೇಲಿನ ಶುಲ್ಕ ಪ್ರತಿ ಯುನಿಟ್‌ಗೆ 2 ರು., ಎಲ್‌ಟಿ ಕೈಗಾರಿಕಾ ಸ್ಥಾವರಗಳ ಇಂಧನ ಬಳಕೆ ಶುಲ್ಕ ಪ್ರತಿ ಯುನಿಟ್‌ಗೆ 1 ರು. ಪ್ರತಿ ಯುನಿಟ್‌ಗೆ ಇಳಿಕೆ ಮಾಡಲಾಗಿದೆ.

ಎಲ್‌.ಟಿ. ಕೈಗಾರಿಕೆಗಳಿಗೆ ದರ ಇಳಿಕೆ ಮಾಡಿರುವ ಬೆನ್ನಲ್ಲೇ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯುನಿಟ್‌ಗೆ ನೀಡುತ್ತಿದ್ದ 50 ಪೈಸೆ ರಿಯಾಯಿತಿಯನ್ನು ಹಿಂಪಡೆಯಲಾಗಿದೆ.ಇನ್ನು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್‌ಟಿ ವಾಣಿಜ್ಯ, ಎಲ್‌ಟಿ ಕೈಗಾರಿಕೆ, ಎಲ್‌ಟಿ ಖಾಸಗಿ ಆಸ್ಪತ್ರೆ, ಶಿಕ್ಷಣ ಸ್ಂಥೆಗಳಿಗೆ ಮಾತ್ರ ಪ್ರತಿ ಯುನಿಟ್‌ಗೆ 30 ಪೈಸೆ ರಿಯಾಯಿತಿ ಮುಂದುವರೆಸಲಾಗಿದೆ.

ಸರಾಸರಿ 66 ಪೈಸೆ ಶುಲ್ಕ ಹೆಚ್ಚಳಕ್ಕೆ ಬೇಡಿಕೆ: ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿದ್ದ ಪ್ರತ್ಯೇಕ ದರ ಹೆಚ್ಚಳ ಬೇಡಿಕೆಯಲ್ಲಿ ಒಟ್ಟು 2024-25ಕ್ಕೆ 69,474.75 ಕೋಟಿ ರು. ವಾರ್ಷಿಕ ಹಣಕಾಸು ಅಗತ್ಯತೆ (ಎಆರ್‌ಆರ್‌) ಉಂಟಾಗಲಿದ್ದು, ಪ್ರಸ್ತುತ ಇರುವ ದರಗಳ ಆಧಾರದ ಮೇಲೆ 4,863.85 ಕೋಟಿ ರು. ಕಂದಾಯ ಕೊರತೆ ಉಂಟಾಗುತ್ತದೆ. 

ಹೀಗಾಗಿ ಪ್ರತಿ ಯುನಿಟ್‌ಗೆ ಸರಾಸರಿ 66 ಪೈಸೆಗಳಂತೆ (49 ಪೈಸೆಯಿಂದ 1.63 ರು.ವರೆಗೆ) ಹೆಚ್ಚಳ ಮಾಡಬೇಕು ಎಂದು ಬರೋಬ್ಬರಿ ಶೇ.7.53 ರಷ್ಟು ದರ ಹೆಚ್ಚಳಕ್ಕೆ ಪಸ್ತಾಪಿಸಲಾಗಿತ್ತು.ಇದಕ್ಕೆ ಪ್ರತಿಯಾಗಿ ಆಯೋಗವು 64,944.54 ಕೋಟಿ ರು.ವಾರ್ಷಿಕ ಹಣಕಾಸು ಅಗತ್ಯತತೆಗೆ (ಎಆರ್‌ಆರ್‌) ಅನುಮೋದನೆ ನೀಡಿದೆ. 

ಹೆಚ್ಚು ವಿದ್ಯುತ್‌ ಬಳಕೆದಾರರು ಹಾಗೂ ವಾಣಿಜ್ಯ ಬಳಕೆದಾರರ ಮೇಲಿನ ಹೊರೆ ತಗ್ಗಿಸಲು ಎಲ್ಲಾ ಸ್ಲ್ಯಾಬ್‌ಗಳನ್ನೂ ರದ್ದುಪಡಿಸಿದ್ದು, ಎಲ್ಲಾ ಎಸ್ಕಾಂಗಳಿಗೂ ಏಕರೂಪದ ದರ ನಿಗದಿ ಮಾಡಿದೆ.

ಗೃಹ ಬಳಕೆ ವಿದ್ಯುತ್‌ ದರ 
ಹಿಂದಿನ ದರ
0-100 ಯುನಿಟ್₹4.75
100ಕ್ಕಿಂತ ಹೆಚ್ಚು₹7.00
ಪರಿಷ್ಕೃತ ದರ
ಎಲ್ಲಾ ಯುನಿಟ್‌ ₹5.90

ನಿಗದಿತ ಶುಲ್ಕ ತುಸು ಹೆಚ್ಚಳ ಹೆಚ್ಚಳ: 1 ರಿಂದ 50 ಕೆ.ವಿ. ಸಾಮರ್ಥ್ಯದ ಗೃಹಬಳಕೆ ವಿದ್ಯುತ್‌ ಸಂಪರ್ಕಕ್ಕೆ ಪ್ರತಿ ಕೆ.ವಿ.ಗೆ 110 ರಷ್ಟಿದ್ದ ನಿಗದಿತ ಶುಲ್ಕವನ್ನು 120 ರು.ಗೆ ಹೆಚ್ಚಳ ಮಾಡಲಾಗಿದೆ.

ಕಡಿಮೆ ವಿದ್ಯುತ್‌ ಬಳಸುವವರಿಗೆ ಹೊರೆ!
100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಈವರೆಗೆ ಪ್ರತಿ ಯುನಿಟ್‌ಗೆ 4.75 ರು. ನಿಗದಿ ಮಾಡಲಾಗಿತ್ತು. ಅದು ಸಹ 5.90 ರು.ಗೆ ಹೆಚ್ಚಳವಾಗುವುದರಿಂದ 100 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್‌ಗೆ 1.15 ರು. ಶುಲ್ಕ ಹೆಚ್ಚಳ ಹೊರೆ ಬೀಳಲಿದೆ.

ಗೃಹಜ್ಯೋತಿಯಿಂದ ಬಡವರಿಗೆ ಈ ಹೊರೆ ಬೀಳುವುದಿಲ್ಲ. ಸರ್ಕಾರವೇ ಪಾವತಿಸಲಿದೆ ಎಂಬ ವಾದ ಇದೆಯಾದರೂ ರಾಜ್ಯದಲ್ಲಿ ಗೃಹ ಬಳಕೆಯ ಸರಾಸರಿ ಬಳಕೆ 55 ಯುನಿಟ್‌ ಮಾತ್ರ ಇದೆ. 

ಜತೆಗೆ ಹಲವು ಗೃಹಜ್ಯೋತಿ ಫಲಾನುಭವಿಗಳಿಗೆ ಕಳೆದ ವರ್ಷದ ಬಳಕೆಯ ಸರಾಸರಿ ಆಧಾರದ ಮೇಲೆ 50 ರಿಂದ 60 ಯುನಿಟ್‌ ಮಾತ್ರ ಉಚಿತವಾಗಿ ಲಭಿಸುತ್ತಿದ್ದು, ಉಳಿದ ಹೆಚ್ಚುವರಿ ಯುನಿಟ್‌ಗಳಿಗೆ ಹಣ ಪಾವತಿಸಲಾಗುತ್ತಿದೆ.

 ಈ ರೀತಿ ಪಾವತಿಸುವ 30-40 ಯುನಿಟ್‌ಗಳ ದರ ಪ್ರತಿ ಯುನಿಟ್‌ಗೆ 1.15 ರು. ಹೆಚ್ಚಳವಾಗಲಿದೆ. ಹೀಗಾಗಿ ಲಕ್ಷಾಂತರ ಮಂದಿ ಕಡಿಮೆ ವಿದ್ಯುತ್‌ ಬಳಕೆದಾರರಿಗೆ ಈ ಹೊರೆ ತಗುಲಲಿದೆ.