ಸಾರಾಂಶ
ಕನ್ನಡಪ್ರಭ ವಾರ್ತೆ
ಬೆಂಗಳೂರು: ರಾಜ್ಯದಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಹಾಗೂ ಬರದಿಂದ ಉಂಟಾದ ಬೆಳೆಹಾನಿಗೆ ಘೋಷಿಸಲಾಗಿದ್ದ ಗರಿಷ್ಠ 2000 ರು.ವರೆಗಿನ ತಾತ್ಕಾಲಿಕ ಬೆಳೆ ಪರಿಹಾರವನ್ನು ಅರ್ಹ ರೈತರಿಗೆ ನೀಡಲು ರಾಜ್ಯ ಸರ್ಕಾರ ಶುಕ್ರವಾರ 105 ಕೋಟಿ ರು. ಅನುದಾನ ಬಿಡುಗಡೆ ಮಾಡಿದೆ.
ಕೇಂದ್ರ ಸರ್ಕಾರದಿಂದ ಈವರೆಗೂ ರಾಜ್ಯಕ್ಕೆ ಬೆಳೆ ಹಾನಿ ಪರಿಹಾರದ ಅನುದಾನ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ಬೆಳೆ ಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಸದ್ಯಕ್ಕೆ ಅರ್ಹ ರೈತರಿಗೆ ಗರಿಷ್ಠ 2,000 ರು.ವರೆಗೆ ಪಾವತಿಸಲು ಎಸ್‌ಡಿಆರ್‌ಎಫ್ ಅಡಿ 105 ಕೋಟಿ ರು. ಬಿಡುಗಡೆ ಮಾಡಿದ್ದು, ಅರ್ಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ತಲುಪಿಸಲು ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕೆಂದು ಸೂಚಿಸಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಪ್ರಕಾರ ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರ್‌ಗೆ 8,500 ರು, ನೀರಾವರಿ ಬೆಳೆಗೆ 17,000 ರು. ಬಹುವಾರ್ಷಿಕ ಬೆಳೆಗೆ 22,500 ರು. ನಿಗದಿ ಮಾಡಲಾಗಿದೆ. ಆ ಪ್ರಕಾರ ಕೇಂದ್ರದಿಂದ ಬೆಳೆ ಹಾನಿ ಪರಿಹಾರ ಅನುದಾನ ಬಂದ ಬಳಿಕ ಹೆಚ್ಚುವರಿ ಮೊತ್ತಕ್ಕೆ ಅರ್ಹರಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲಾಗುವುದು ಎಂದು ಕೂಡ ಸರ್ಕಾರ ಭರವಸೆ ನೀಡಿದೆ.
2000 ರು. ನೀಡಲು ಷರತ್ತು: ಬೆಳೆಹಾನಿ ಪರಿಹಾರ ನೀಡಲು ಯಾವುದೇ ರೈತರಿಂದ ಅರ್ಜಿ ಆಹ್ವಾನಿಸುವಂತಿಲ್ಲ. ಬದಲಿಗೆ ಇ-ಆಡಳಿತ ಇಲಾಖೆಯ ಫ್ರೂಟ್ಸ್ (ಎಫ್‌ಆರ್‌ಐಟಿಎಸ್) ದತ್ತಾಂಶದ ಮತ್ತು ಕಂದಾಯ ಇಲಾಖೆಯ 2023ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆ ದತ್ತಾಂಶದ ಅನುಸಾರ ಭೂಮಿ ಸೆಲ್‌ನವರು ಪರಿಹಾರ ವಿತರಿಸಬೇಕು.
ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಿರುವ ರೈತರ ಐಡಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಅರ್ಹ ರೈತರಿಗೆ ನೇರ ನಗದು ವರ್ಗಾವಣೆ ಮೂಲಕ ಪರಿಹಾರ ಪಾವತಿಸಬೇಕು.ಪರಿಹಾರವನ್ನು ಆರೋಹಣ ಮಾದರಿಯಲ್ಲಿ ಅಂದರೆ ಅತೀ ಕಡಿಮೆ ಭೂಮಿ ಹೊಂದಿರುವ ರೈತನಿಂದ ಪ್ರಾರಂಭಿಸಿ ಅತೀ ಹೆಚ್ಚು ಭೂಮಿಯನ್ನು ಹೊಂದಿರುವ ಅರ್ಹ ರೈತನವರೆಗೆ ಪಾವತಿಸಬೇಕು.
ಇದರಲ್ಲಿಯೂ ಮೊದಲು ಮಳೆಯಾಶ್ರಿತ ಬೆಳೆ, ನಂತರ ನೀರಾವರಿ ಬೆಳೆ, ತದನಂತರ ಬಹು ವಾರ್ಷಿಕ ಬೆಳೆಗೆ ಪರಿಹಾರ ನೀಡಬೇಕು. ಕೃಷಿಯೇತರ ಉದ್ದೇಶಕ್ಕಾಗಿ ಕೃಷಿ ಜಮೀನು ಭೂ-ಪರಿವರ್ತನೆಯಾಗಿ ಬೆಳೆ ಸಮೀಕ್ಷೆಯಲ್ಲಿ ಸೇರ್ಪಡೆಯಾದರೂ ಕೂಡ ಇಂತಹ ಪ್ರಕರಣಗಳನ್ನು ಭೂಮಿ ಸೆಲ್ ರವರು ಬೆಳೆಹಾನಿ ಪರಿಹಾರಕ್ಕೆ ಪರಿಗಣಿಸಕೂಡದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.