ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ

| Published : Oct 29 2023, 01:01 AM IST

ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ದೇಶಕ್ಕೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೇಶಕ್ಕೆ ಕರ್ನಾಟಕ ನಾಯಕನಾಗಿ ಆಗಿ ಹೊರಹೊಮ್ಮಿದೆ. ನಾವು ಇರುವ ದಾರಿಯನ್ನು ಅನುಸರಿಸಿ ಹೋಗಿಲ್ಲ. ನಾವು ದೇಶಕ್ಕೆ ದಾರಿಯನ್ನು ತೋರಿಸಿ ಹೆಗ್ಗುರುತು ಬಿಟ್ಟಿದ್ದೇವೆ ಅದನ್ನು ದೇಶ ಅನುಸರಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ನುಡಿದರು.
ಮೆಡಿಕಾನ್‌-2023 ಸಮ್ಮೇಳನಕ್ಕೆ ಚಾಲನೆ ನೀಡಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಅಭಿಮತ ಕನ್ನಡಪ್ರಭ ವಾರ್ತೆ ಬೀದರ್‌ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ದೇಶಕ್ಕೆ ಕರ್ನಾಟಕ ನಾಯಕನಾಗಿ ಆಗಿ ಹೊರಹೊಮ್ಮಿದೆ. ನಾವು ಇರುವ ದಾರಿಯನ್ನು ಅನುಸರಿಸಿ ಹೋಗಿಲ್ಲ. ನಾವು ದೇಶಕ್ಕೆ ದಾರಿಯನ್ನು ತೋರಿಸಿ ಹೆಗ್ಗುರುತು ಬಿಟ್ಟಿದ್ದೇವೆ ಅದನ್ನು ದೇಶ ಅನುಸರಿಸುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ನುಡಿದರು. ಅವರು ನಗರದ ಬ್ರಿಮ್ಸ್‌ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದಿಂದ ಆಯೋಜಿಸಿದ್ದ ಮೆಡಿಕಾನ್‌-2023 ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ದೇಶಕ್ಕೆ ಮಾದರಿಯಾಗಿದ್ದು 2013ರ ನಮ್ಮ ಸರ್ಕಾರದ ಅವಧಿಯಲ್ಲಿ ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿ ಸೇವೆ ಸಲ್ಲಿಸುತ್ತಿದ್ದಾಗ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು ಯೋಜನೆ ಜಾರಿಗೆ ತರುತ್ತಿದ್ದಂತೆ ಕೇಂದ್ರ ಸರ್ಕಾರವೂ ಇದನ್ನು ಅನುಸರಿಸಿತು ಎಂದರು. ಕಳೆದ 2004ರಲ್ಲಿ ದಿ. ಧರಂಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಬೀದರ್‌ ಸೇರಿದಂತೆ 6 ಹೊಸ ಕಾಲೇಜುಗಳನ್ನು ಮಂಜೂರಿ ನೀಡಿದ್ದು ಸದಾ ಸ್ಮರಣೀಯ. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ವೈದ್ಯರಾಗೋ ಕನಸನ್ನು ನನಸು ಮಾಡುವ ಹಾಗೂ ಸರ್ಕಾರದ ಆಸ್ಪತ್ರೆಗಳನ್ನು ಉನ್ನತೀಕರಿಸುವ ಮೂಲಕ ಬಡ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ಕಲ್ಪಿಸುವ ಯೋಚನೆ ಹಾಗೂ ಯತ್ನ ಇದಾಗಿದೆ ಎಂದರು. ರಾಜ್ಯದಲ್ಲಿ 23 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಹಾಗೂ ಕೇಂದ್ರದ ಸಚಿವರಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಹಾಗೂ ಬೆಂಗಳೂರಿನಲ್ಲಿ ಇಎಸ್‌ಐ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು ಸೇರಿದಂತೆ ಒಟ್ಟು 25 ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಮೂಲಕ ದೇಶದ ತಮಿಳುನಾಡು ಹಾಗೂ ಕರ್ನಾಟಕ ಹೊರತುಪಡಿಸಿದರೆ ಬೇರೆ ಯಾವ ರಾಜ್ಯದಲ್ಲಿಯೂ ಇಷ್ಟೊಂದು ಪ್ರಮಾಣದಲ್ಲಿ ಸರ್ಕಾರಿ ವೈದ್ಯ ಕಾಲೇಜುಗಳಿಲ್ಲ ಎಂಬ ಅಭಿಪ್ರಾಯ ನನ್ನದು ಎಂದರು. ರಾಜ್ಯದಲ್ಲಿ ಸಾಕಷ್ಟು ಖಾಸಗಿ ವೈದ್ಯಕೀಯ ಕಾಲೇಜುಗಳೂ ಇವೆ. ಇದರ ಶ್ರೇಯಸ್ಸು ದೇವರಾಜ ಅರಸರು, ನಿಜಲಿಂಗಪ್ಪ ಅವರು ಮುಂದಾಲೋಚನೆ, ದೂರದೃಷ್ಟಿಯಿಂದ ಅವಕಾಶ ಕಲ್ಪಿಸಿದ್ದರಲ್ಲದೆ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಆರಂಭಿಸಲು ಪರವಾನಿಗೆ ನೀಡಿದ್ದರಿಂದ ಸಿಲಿಕಾನ್‌ ವ್ಯಾಲಿ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೋವಿಡ್‌ ಸಂದರ್ಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳು ಇರದಿದ್ದರೆ ಪರಿಣಾಮವನ್ನು ಯೋಚಿಸುವದೂ ಕಷ್ಟಕರ. ಸಂಘದ ಹಿತಾಸಕ್ತಿ ಜೊತೆಗೆ ಸಾಮಾನ್ಯರ ಆರೋಗ್ಯ ಕಾಪಾಡುವತ್ತ ಐಎಂಎ ಪಾತ್ರ ಹಿರಿದು. ಕಾಲ ಕಾಲಕ್ಕೆ ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ನೀಡುತ್ತ, ಸರ್ಕಾರ ಎಡವಿದ್ದಾಗ ಸೂಕ್ತ ಮಾರ್ಗದರ್ಶನ ನೀಡುತ್ತಿರುವ ಐಎಂಎ ದೇಶದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಮೇಲಾಗುತ್ತಿರುವ ಹಲ್ಲೆಗಳು, ಬೆದರಿಕೆಗಳನ್ನು ನಿಯಂತ್ರಿಸುವ ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪೂರೈಸುವದು ಹಾಗೂ ಕೌಶಲ್ಯ ತರಬೇತಿಗಳನ್ನು ಕಲ್ಪಿಸುವ ಕುರಿತು ರಾಜ್ಯ ಸರ್ಕಾರ ಗಂಭೀರವಾಗಿ ಗಮನಹರಿಸುತ್ತಿದೆ. ಸಾಮಾನ್ಯ ಜನರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಕಲ್ಪಿಸಿಕೊಡುವತ್ತ ವೈದ್ಯರುಗಳು ಶ್ರಮಿಸುತ್ತಿರುವದು ಶ್ಲಾಘನೀಯ ಎಂದು ಡಾ. ಶರಣಪ್ರಕಾಶ ಪಾಟೀಲ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಮ್‌ ಖಾನ್‌ ಮಾತನಾಡಿ, ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೇ ಅಲ್ಲ ವೈದ್ಯರುಗಳ ಸೇವೆಯಲ್ಲಿಯೂ ಕರ್ನಾಟಕ ರಾಜ್ಯ ನಂ.1 ಸ್ಥಾನದಲ್ಲಿದೆ ಎಂದೆನ್ನಬಹುದು. ಇಂಥದ್ದೊಂದು ಅದ್ಭುತ ಸಮ್ಮೇಳನ ಆಯೋಜಿಸಿದ ಸರ್ವರಿಗೂ ಅಭಿನಂದಿಸುವದಾಗಿ ತಿಳಿಸಿದರು. ಕೇಂದ್ರ ಸಚಿವ ಭಗವಂತ ಖೂಬಾ ಮಾತನಾಡಿದರು. ಶಾಸಕ ಡಾ.ಚಂದ್ರಶೇಖರ ಪಾಟೀಲ್‌, ಐಎಂಎ ರಾಜ್ಯಾಧ್ಯಕ್ಷ ಡಾ. ಶಿವಕುಮಾರ, ಡಾ. ಶ್ರೀನಿವಾಸ್‌, ಡಾ. ಚಿನ್ನಿವಾಲಾ, ಬ್ರಿಮ್ಸ್‌ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ, ಮೆಡಿಕಾನ್‌ ಆಯೋಜನಾ ಸಮಿತಿಯ ಡಾ. ಚಂದ್ರಕಾಂತ ಗುದಗೆ, ಮಲ್ಲಿಕಾರ್ಜುನ ಪನಶೆಟ್ಟಿ ಹಾಗೂ ವಿಜಯಶ್ರಿ ಬಶೆಟ್ಟಿ ಸೇರಿದಂತೆ ಐಎಂಎ ಪದಾಧಿಕಾರಿಗಳು, ಸದಸ್ಯರು, ಬ್ರಿಮ್ಸ್‌ ವೈದ್ಯರು ಮತ್ತಿತರರು ಇದ್ದರು.