ಸಾರಾಂಶ
ಕನ್ನಡಪ್ರಭ ವಾರ್ತೆ ಮಸ್ಕಿ
ಬುರ್ರಕಥೆಯಲ್ಲಿ ಹೆಸರು ಮಾಡಿದ ತಾಲ್ಲೂಕಿನ ಹಸಮಕಲ್ ಗ್ರಾಮದ ಅಲೆಮಾರು ಬುಡಕಟ್ಟು ಕಲಾವಿದೆ ಶಾಂತಮ್ಮ ಜಂಬಣ್ಣ ಅವರಿಗೆ ಕರ್ನಾಟಕ ಜಾನಪದ ಆಕಾಡೆಮಿ-2023ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ ಮಾಡಿದೆ.ತನ್ನ 12 ವಯಸ್ಸಿನಿಂದ ಜಾನಪದ ಕಲೆಯಾದ ಬುರ್ರಕಥೆಯ ಹಾಡುಗಳನ್ನು ಗ್ರಾಮಾಂತರ ಹಾಗೂ ಪಟ್ಟಣದ ಮನೆ ಮನೆಗೆ ಹೋಗಿ ಹಾಡುತ್ತ ಜಿಲ್ಲೆಯ ಗಮನ ಸೆಳೆದ ಶಾಂತಮ್ಮ ಅವರು ತುಂಬುರಿ, ಗುಮುಟೆ, ಕೈ ದಮ್ಮಡಿ ಸೇರಿದಂತೆ ಜಾನಪದ ವಾದ್ಯಗಳನ್ನು ಬಾರಿಸುವ ಮೂಲಕ ಹೆಸರು ಮಾಡಿದ್ದಾರೆ.
ಸುಮಾರು 49 ವರ್ಷಗಳಿಂದ ಜಾನಪದ ಕಲೆಯಲ್ಲಿ ತೊಡಗಿಸಿಕೊಂಡಿದ್ದು, ಬುರ್ರಕಥಾ ಹೇಳುವುದರಲ್ಲಿ ಪ್ರಸಿದ್ಧಿ ಹೊಂದಿದ್ದಾರೆ. ಇವರ ಅತ್ತೆಯಿಂದ ಬಳುವಳಿಯಾಗಿ ಬಂದ ಈ ಕಲೆಯನ್ನು ಮುಂದಿನ ಪೀಳಿಗೆಗೂ ರವಾನಿಸುವ ಕೆಲಸ ಶಾಂತಮ್ಮ ಮಾಡುತ್ತಿದ್ದಾರೆ. ಗಂಡ ಜಂಬಣ್ಣ ಕೂಡ ಹಾರ್ಮೋನಿಯಂ ವಾದಕರು. ಹಿಂದಿನ ಕಾಲದಲ್ಲಿ ಹಳ್ಳಿಹಳ್ಳಿಗೆ ಹೋಗಿ ಬುರ್ರಕಥೆಗಳನ್ನು ಹೇಳುತ್ತಿದ್ದರು.ವಿದ್ಯುತ್ ಸೌಲಭ್ಯ ಇಲ್ಲದ ಕಾಲದಲ್ಲಿ ಕಂದಿಲು ಬೆಳಕಿನಲ್ಲಿ ಕೇವಲ ಹತ್ತಿಪ್ಪತ್ತು ರು.ಗೆ ಕಾರ್ಯಕ್ರಮ ನೀಡಿದ ಖ್ಯಾತಿ ಇವರದ್ದಾಗಿದೆ. ಅಲೆಮಾರಿ ಬುಡಕಟ್ಟು ಸಮುದಾಯದ ಇವರು ಸಂಚಾರ ಮಾಡುತ್ತಲೇ ಕಾಯಕ ಜೀವನ ನಡೆಸಿದವರು. ಕೈಯಲ್ಲಿ ತಂಬೂರಿ, ಗುಮುಟೆ, ಕೈ ದಮ್ಮಡಿ ಹಿಡಿದು ಹಗಲಲ್ಲಿ ಹಾಡುತ್ತ ಸಾಗುವುದು, ರಾತ್ರಿ ಹೊತ್ತು ಬುರ್ರಕಥೆಗಳನ್ನು ಹೇಳುವುದು ಇವರ ವಿಶೇಷತೆಯಾಗಿದ್ದು, ಶಾಂತಮ್ಮ ಅವರು ಸಲ್ಲಿಸಿದ ಸೇವೆಗೆ ಈ ಬಾರಿಯ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿರುವುದು ವಿಶೇಷವಾಗಿದೆ. ಜಾನಪದ ಅಕಾಡೆಮಿ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ಈ ಪ್ರಶಸ್ತಿ ಜಾನಪದ ಕಲಾವಿದರಿಗೆ ಸಲ್ಲಿಸುತ್ತೇನೆ ಎಂದು ಪ್ರಸಸ್ತಿ ಪುರಸ್ಕೃತೆ ಶಾಂತಮ್ಮ ತಿಳಿಸಿದ್ದಾರೆ.