ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.

ನರಸಿಂಹರಾಜಪುರ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧುಬಂಗಾರಪ್ಪ ಹೇಳಿದರು.

ಶುಕ್ರವಾರ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ನೂತನವಾಗಿ ಜಾರಿಗೆ ತಂದಿರುವ ನಮ್ಮ ಶಾಲೆ ನಮ್ಮ ಜವಾಬ್ಧಾರಿ ಕಾರ್ಯಕ್ರಮಕ್ಕೆ ರಾಜ್ಯದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹಿರಿಯ ವಿದ್ಯಾರ್ಥಿ ಸಂಘದವರು ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ದೇಣಿಗೆಯನ್ನು ನೀಡುತ್ತಿದ್ದಾರೆ. ಮುತ್ತಿನಕೊಪ್ಪಕ್ಕೆ ಕೆಪಿಎಸ್‌ಸಿ ಶಾಲೆ ಮಂಜೂರು ಮಾಡಿದ್ದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ನಮ್ಮನ್ನು ಅಧಿಕಾರಕ್ಕೆ ತಂದಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕೆಪಿಎಸ್‌ ಶಾಲೆಗಳ ಪ್ರಾರಂಭದಿಂದ ಗ್ರಾಮಾಂತರ ಪ್ರದೇಶಗಳ ಶಾಲೆಗಳು ಮುಚ್ಚುತ್ತವೆ ಎಂಬ ಅಭಿಪ್ರಾಯ ಬರುತ್ತಿದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದ ಲೇಖನ ಓದಿದೆ. ಕೆಪಿಎಸ್‌ ಶಾಲೆ ಆರಂಭದಿಂದ ಗ್ರಾಮೀಣ ಶಾಲೆಗಳು ಮುಚ್ಚುತ್ತವೆ ಎಂಬುದು ಅವರ ತಪ್ಪುಕಲ್ಪನೆಯಾಗಿದೆ. ಕೆಪಿಎಸ್ ಶಾಲೆ ಆರಂಭಿಸುವುದರಿಂದ ಯಾವುದೇ ಹಳ್ಳಿಯ ಸರ್ಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ. ಒಳ್ಳೆಯ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡುವುದೇ ತಪ್ಪೇ ಎಂದು ಪ್ರಶ್ನಿಸಿದರು.

ಎಸ್‌ಎಸ್‌ಎಸ್‌ಎಲ್‌ಸಿ ಉತ್ತೀರ್ಣದ ಅಂಕವನ್ನು 33ಕ್ಕೆ ಇಳಿಸಿರುವುದರಿಂದ ಶಿಕ್ಷಣದ ಗುಣಮಟ್ಟ ಕಡಿಮೆಯಾಗುವುದಿಲ್ಲ. ಉತ್ತೀರ್ಣದ ಅಂಕ ಇಳಿಕೆಗೂ ಶಿಕ್ಷಣದ ಗುಣಮಟ್ಟಕ್ಕೂ ಸಂಬಂಧವಿಲ್ಲ. 625ಕ್ಕೆ 625 ಅಂಕಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳು ಇರುತ್ತಾರೆ. ಕೇರಳ, ಮೀಜೋರಾಂ ರಾಜ್ಯದಲ್ಲಿ ಎಸ್‌ಎಸ್ಎಲ್‌ಸಿ ಉತ್ತೀರ್ಣದ ಅಂಕ 30 ಇದೆ. ಹಾಗಾಗಿ ಕೇರಳ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ಸಾಕಷ್ಟು ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಶುಶ್ರೂಷಕಿಯರ ಹುದ್ದೆಗೆ ಆಯ್ಕೆಯಾಗುತ್ತಿದ್ದಾರೆ. ಚಾಲಕ ವೃತ್ತಿಗೆ ಕನಿಷ್ಠ ಎಸ್ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಅವಕಾಶ ಬೇಕಾಗುತ್ತದೆ. ಉದ್ಯೋಗ ಕೊಡುವುದರಿಂದ ಕುಟುಂಬದ ನಿರ್ವಹಣೆ ಸುಲಭವಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಮುತ್ತಿನಕೊಪ್ಪ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮನೋಹರ್ ಹಾಗೂ ಸರ್ಕಾರಿ ಪ್ರೌಢ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಜೆ.ಪಿ.ಪ್ರಸನ್ನ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮಾಲಾರ್ಪಣೆ ಮಾಡಿ ಮುತ್ತಿನಕೊಪ್ಪಕ್ಕೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿರುವುದಕ್ಕೆ ಕೃತಜ್ಞತೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಶಿವಮೊಗ್ಗ ಭದ್ರಾಕಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎನ್.ಎಸ್.ನರೇಂದ್ರ, ಸದಸ್ಯರಾದ ದೇವಂತ್, ಫಯಾಜ್, ಮುಖಂಡರಾದ ಶ್ರೀಶಾ,ಪ್ರಶಾಂತ್, ಉಮೇಶ್ ಇದ್ದರು.