ನಾಲ್ಕೇ ವರ್ಷದಲ್ಲಿ 21,000 ಸಲ ಕಾಡ್ಗಿಚ್ಚು

| Published : May 17 2024, 01:37 AM IST / Updated: May 17 2024, 09:03 AM IST

canada fire 1 .jpg

ಸಾರಾಂಶ

ಬೇಸಿಗೆ ಹೆಚ್ಚಾದಂತೆ ಅರಣ್ಯದಲ್ಲಿ ಉಂಟಾಗುತ್ತಿರುವ ಕಾಡ್ಗಿಚ್ಚಿನ ಪ್ರಮಾಣವೂ ಹೆಚ್ಚುತ್ತಿದ್ದು, 2020ರಿಂದ 2024ರವರೆಗೆ ರಾಜ್ಯದ ಅರಣ್ಯಗಳಲ್ಲಿ ಒಟ್ಟು 20,933 ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

 ಬೆಂಗಳೂರು : ಬೇಸಿಗೆ ಹೆಚ್ಚಾದಂತೆ ಅರಣ್ಯದಲ್ಲಿ ಉಂಟಾಗುತ್ತಿರುವ ಕಾಡ್ಗಿಚ್ಚಿನ ಪ್ರಮಾಣವೂ ಹೆಚ್ಚುತ್ತಿದ್ದು, 2020ರಿಂದ 2024ರವರೆಗೆ ರಾಜ್ಯದ ಅರಣ್ಯಗಳಲ್ಲಿ ಒಟ್ಟು 20,933 ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ರಾಜ್ಯ ಅರಣ್ಯ ಇಲಾಖೆ ಎಷ್ಟೇ ಪ್ರಯತ್ನಿಸಿದರೂ ಕಾಡ್ಗಿಚ್ಚಿನ ಪ್ರಮಾಣ ಹೆಚ್ಚುತ್ತಲೇ ಇದೆ. ಕಾಡ್ಗಿಚ್ಚನ್ನು ಕಡಿಮೆ ಮಾಡಲು ಹಾಗೂ ಕಾಡ್ಗಿಚ್ಚು ಕಾಣಿಸಿಕೊಂಡ ಕೂಡಲೇ ಅದನ್ನು ನಂದಿಸುವ ಸಲುವಾಗಿ ಇಲಾಖೆ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಗಸ್ತು ತಿರುಗುತ್ತಿದ್ದಾರೆ. ಆದರೂ, ಕಾಡ್ಗಿಚ್ಚಿನ ಪ್ರಮಾಣ ಹೆಚ್ಚುತ್ತಿದೆ. ಅದರಂತೆ 2020ರಿಂದ 2024ರವರೆಗೆ ಒಟ್ಟು 20,933 ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅದರಲ್ಲೂ ಡಿಸೆಂಬರ್‌ನಿಂದ ಏಪ್ರಿಲ್‌ವರೆಗೆ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. 2023ರಲ್ಲಿ ಅತಿಹೆಚ್ಚು ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, 6,888 ಕಡೆಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಅದೇ ರೀತಿ ಪ್ರಸಕ್ತ ವರ್ಷದ ಜನವರಿಯಿಂದ ಏಪ್ರಿಲ್‌ವರೆಗೆ 4,245 ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಅದೇ ಏಪ್ರಿಲ್‌ 16ರಿಂದ ಕಾಡ್ಗಿಚ್ಚಿನ ಪ್ರಮಾಣ ಕಡಿಮೆಯಾಗಿದೆ. ಅರಣ್ಯ ಇಲಾಖೆ ಮಾಹಿತಿಯಂತೆ ಏಪ್ರಿಲ್‌ 16ರಿಂದ ಮೇ ಮೊದಲ ವಾರದಲ್ಲಿ ಬೆಳಗಾವಿ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 33 ಕಾಡ್ಗಿಚ್ಚು ಪ್ರಕರಣದ ವರದಿಯಾಗಿವೆ. ಇದನ್ನು ಗಮನಿಸಿದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಅವಧಿಯಲ್ಲಿ ಕಾಡ್ಗಿಚ್ಚಿನ ಪ್ರಮಾಣ ಕಡಿಯಾದಂತಾಗಿದೆ. ಆದರೆ, ಪ್ರಸಕ್ತ ವರ್ಷದಲ್ಲಿ ಫೆಬ್ರವರಿ, ಮಾರ್ಚ್‌ ವೇಳೆಗೆ ಹೆಚ್ಚಿನ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಕಳೆದ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡ ಕಾರಣ ಒಣ ಹುಲ್ಲು ಸೇರಿ ಕಾಡ್ಗಿಚ್ಚು ಸೃಷ್ಟಿಸುವಂತಹ ಸಸಿ, ಮರಗಳ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಈ ವರ್ಷ ಕಾಡ್ಗಿಚ್ಚಿನ ಪ್ರಮಾಣ ಕಡಿಮೆಯಾಗುವಂತಾಗಿದೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ 2018-19ರಲ್ಲಿ ಭಾರೀ ಪ್ರಮಾಣದ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಅದಾದ ನಂತರ ಕಳೆದ ವರ್ಷ ದೊಡ್ಡ ಪ್ರಮಾಣದಲ್ಲಿ ಕಾಡ್ಗಿಚ್ಚು ಹರಡಿತ್ತು. ಹೀಗಾಗಿ ಈ ವರ್ಷ ಅಲ್ಲಿ ಕಡಿಮೆ ಪ್ರಮಾಣದಲ್ಲಿ ಕಾಡ್ಗಿಚ್ಚು ಸೃಷ್ಟಿಯಾಗಿದೆ. ಬೇರೆ ಅರಣ್ಯ ಪ್ರದೇಶದಲ್ಲೂ ಅದೇ ಪರಿಸ್ಥಿತಿಯಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.