ಬೆಂಗಳೂರು : ಕಾರಾಗೃಹ ಸುತ್ತ 2 ಕಿ.ಮೀ.ಮೊಬೈಲ್‌ ಜಾಮರ್‌

| Published : May 17 2024, 01:34 AM IST / Updated: May 17 2024, 11:01 AM IST

ಸಾರಾಂಶ

ತುರ್ತು ವೇಳೆ ಕರೆ ಮಾಡಲು ತೊಂದರೆ ಎಂದು ಸ್ಥಳೀಯರು ದೂರಿದ್ದು, ಜಾಮರ್‌ ಅಳವಡಿಕೆ ಹಿಂದೆ ಒಕ್ಕಲೆಬ್ಬಿಸುವ ಹುನ್ನಾರ ಇದೆ ಎಂದು ಆರೋಪಿಸಿದ್ದಾರೆ.

 ಬೆಂಗಳೂರು ದಕ್ಷಿಣ :  ಕೈದಿಗಳಿಗೆ ಹೊರಗಿನ ಸಂಪರ್ಕ ಸಿಗದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಳವಡಿಸಿರುವ ಜಾಮರ್‌ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆ ಸೃಷ್ಟಿಸಿದೆ.

ಜಾಮರ್‌ ಅಳವಡಿಕೆಯಿಂದ 2 ಕಿ.ಮೀ. ವ್ಯಾಪ್ತಿ ಮೊಬೈಲ್‌, ಇಂಟರ್‌ನೆಟ್‌ ಸಂಪರ್ಕ ಸಿಗುತ್ತಿಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ಸಂಕಷ್ಟ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ಕಾರಾಗೃಹದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಗರ್ಭಿಣಿ ಸ್ತ್ರೀಯರಿಗೆ ನೋವು ಕಾಣಿಸಿಕೊಂಡರೆ, ಅಪಘಾತಕ್ಕೀಡಾದಾಗ ಹಾಗೂ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಾಗಲಿ ಅಥವಾ ಆಪ್ತರಿಗಾಗಲಿ ಕರೆ ಮಾಡಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ ಭುವನೇಶ್ವರಿ ಬಡಾವಣೆ ನಾಗರಿಕರ ವೇದಿಕೆ ಹಾಗೂ ಸ್ಥಳೀಯರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬಳಿ ಮಹಿಳೆಯರು ಸೇರಿದಂತೆ ಜಮಾಯಿಸಿದ ನೂರಾರು ನಾಗರಿಕರು ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ ಮೊಬೈಲ್ ಕರೆಗಳು ಮಾಡದಂತೆ ಜಾಮರ್ ಅಳವಡಿಸಿರುವ ಕಾರಾಗೃಹದ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು, ಧಿಕ್ಕಾರ ಕೂಗಿ ಪ್ರತಿಭಟಿಸಿದರು.

ಸುಮಾರು ಏಳು ಕೋಟಿ ವೆಚ್ಚದಲ್ಲಿ ಜಾಮರ್ ಅಳವಡಿಕೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಅಗತ್ಯವೇನಿದೆ, ಜೈಲಿನಲ್ಲಿ ಕೈದಿಗಳು ಆರಾಮಾಗಿ ಅವರು ಸಹಚರರಿಗೆ ಕರೆ ಮಾಡುತ್ತಾರೆ, ಸಾಮಾನ್ಯ ಜನರು ಹೊರಗಡೆ ಯಾವುದೇ ಮೊಬೈಲ್ ಕರೆ ಹಾಗೂ ಇಂಟರ್ನೆಟ್ ಕೆಲಸ ಮಾಡಲು ಆಗುತ್ತಿಲ್ಲ, ಇದರಿಂದ ಸಾಕಷ್ಟು ಜನ ವಿದ್ಯಾರ್ಥಿಗಳು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳು ಮನೆ ಖಾಲಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈ ರೆಸ್ಯೂಲೇಷನ್ ಜಾಮರ್ ಅಳವಡಿಕೆ ಹಿಂದೆ ಷಡ್ಯಂತ್ರವಿದೆ. ಸುತ್ತಮುತ್ತಲಿನ ನಿವಾಸಿಗಳ ಒಕ್ಕಲು ಎಬ್ಬಿಸಲು ಹುನ್ನಾರ ನಡೆದಿದೆ. ತಾನಾಗಿಯೇ ಸ್ಥಳೀಯ ‌ನಿವಾಸಿಗಳು ಜಾಗ ಖಾಲಿ ಮಾಡಬೇಕು ಎಂಬ ಉದ್ದೇಶದಿಂದ ಜಾಮರ್ ಅಳವಡಿಕೆ ಮಾಡಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳ ವಿರುದ್ಧ ಸ್ಥಳೀಯರು ಆರೋಪಿಸಿದರು.

ಪದೇ ಪದೇ ಬಂಧಿಖಾನೆ ಇಲಾಖೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ, ಹಿರಿಯ ಅಧಿಕಾರಿಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಸಿಗುತ್ತಿಲ್ಲ. ಈಗಾಗಲೇ ಹಲವಾರು ಜನ ಮೃತಪಟ್ಟಿದ್ದು, ಜಾಮರ್ ತೆರವು ಮಾಡಬೇಕು ಎಂದು ಲಕ್ಷ್ಮಣ್, ಶೇಖರ್ ರೆಡ್ಡಿ, ಐಟಿಬಿಟಿ ಉದ್ಯೋಗಿ ಶೃತಿ ಸೇರಿದಂತೆ ವಿದ್ಯಾರ್ಥಿಗಳು ಮಹಿಳೆಯರು ಹಾಗೂ ಸ್ಥಳೀಯರು ಒತ್ತಾಯಿಸಿದರು.

ಚಿತ್ರ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜಾಮರ್‌ ಅಳವಡಿಕೆಯಿಂದ ತೊಂದರೆ ಆಗಿದೆ ಎಂದು ಸ್ಥಳೀಯ ನಿವಾಸಿಗಳು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಲಕ್ಷ್ಮಣ್, ಶೇಖರ್ ರೆಡ್ಡಿ, ಐಟಿಬಿಟಿ ಉದ್ಯೋಗಿ ಶೃತಿ ಇದ್ದರು.