ಡ್ರಗ್ಸ್‌ ವಿರುದ್ಧ ರಾಜ್ಯದ ಸಮರ

| Published : Sep 19 2024, 01:48 AM IST

ಸಾರಾಂಶ

ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ನಿರ್ಮೂಲನೆಗೆ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ನಿರ್ಮೂಲನೆಗೆ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗುವುದು. ಡ್ರಗ್ಸ್‌ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು. ವಿದ್ಯಾರ್ಥಿ ಪೊಲೀಸ್‌ ರಚನೆ ಹಾಗೂ ವ್ಯಾಪಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಗೃಹ, ಆರೋಗ್ಯ, ವೈದ್ಯಕೀಯ ಶಿಕ್ಷಣ, ನಗರಾಭಿವೃದ್ಧಿ ಸಚಿವರು ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ್ಯದಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಾಗಿದೆ. ದಾಖಲಾಗುತ್ತಿರುವ ಪ್ರಕರಣಗಳ ಪೈಕಿ ಶೇ.50ರಷ್ಟು ಬೆಂಗಳೂರು ಹಾಗೂ ಶೇ.22ರಷ್ಟು ಮಂಗಳೂರಿನಲ್ಲಿವೆ. ಉಳಿದ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಪ್ರಕರಣಗಳು ನಡೆದಿವೆ. ಹೀಗಾಗಿ ಡ್ರಗ್ಸ್‌ ಹಾವಳಿ ತಡೆಗೆ ಹಲವಾರು ಕ್ರಮಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಡ್ರಗ್ಸ್‌ ಹಾವಳಿ ತಡೆಗೆ ಪರಿಣಾಮಕಾರಿ ಜಾಗೃತಿ ಹಾಗೂ ಕಾನೂನು ಜಾರಿ ಕ್ರಮ ಆಗಬೇಕಾಗಿದೆ ಎಂದರು.

ಪ್ರಮುಖವಾಗಿ ರಾಜ್ಯಮಟ್ಟದಲ್ಲಿ ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು. ಈ ರಾಜ್ಯ ಸಮಿತಿಯಲ್ಲಿ ಪೊಲೀಸ್‌, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಇಲಾಖೆ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಜತೆಗೆ ತಜ್ಞ ಡಾ. ವಿಶಾಲ್‌ರಾವ್‌ ಅವರು ಸಮಿತಿಯಲ್ಲಿ ಇರುತ್ತಾರೆ. ಗೃಹ ಸಚಿವರ ಅಧ್ಯಕ್ಷತೆಯಲ್ಲಿ ರಚಿಸಲಾಗುವ ಟಾಸ್ಕ್‌ ಫೋರ್ಸ್‌ ಆಗಾಗ ಸಭೆ ನಡೆಸಿ ಪೊಲೀಸ್‌, ಆರೋಗ್ಯ ಇಲಾಖೆಗೆ ಸಲಹೆ ಸೂಚನೆ ನೀಡಲಿದೆ ಎಂದು ತಿಳಿಸಿದರು.

ಪೊಲೀಸರಿಗೆ ಹೊಣೆ ನಿಗದಿ:

ಡ್ರಗ್ಸ್‌ ದಂಧೆ ಆಯಾ ಪೊಲೀಸ್‌ ಠಾಣಾಧಿಕಾರಿಗೆ ಗೊತ್ತಿಲ್ಲದೇ ನಡೆಯುವುದಿಲ್ಲ. ಹಾಗಾಗಿ ಇನ್ನು ಮುಂದೆ ಆಯಾ ಠಾಣಾಧಿಕಾರಿ, ಡಿವೈಎಸ್ಪಿ, ಎಸಿಪಿ, ಡಿಸಿಪಿ ಹಾಗೂ ಎಸ್‌ಪಿಗಳಿಗೆ ಜವಾಬ್ದಾರಿ ನಿಗದಿ ಮಾಡಲಾಗುವುದು. ಡ್ರಗ್ಸ್‌ ಹಾವಳಿ ತಡೆಯುವಲ್ಲಿ ತಪ್ಪು ಎಸಗಿದರೆ ಅಂತಹ ಅಧಿಕಾರಿಯ ವಿರುದ್ಧ ಅಮಾನತು ಸೇರಿದಂತೆ ಎಲ್ಲ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಜಾಮೀನು ರಹಿತ ಪ್ರಕರಣ, ಜೀವಾವಧಿ ಶಿಕ್ಷೆ:

ಡ್ರಗ್ಸ್‌ ದಂಧೆಯಲ್ಲಿ ತೊಡಗಿರುವ ಪೆಡ್ಲರ್‌, ಮಾರಾಟಗಾರರ ವಿರುದ್ಧ ಇನ್ನಷ್ಟು ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಗತ್ಯವಿದ್ದಲ್ಲಿ ಕಾನೂನು ತಿದ್ದುಪಡಿ ಅಥವಾ ಹೊಸ ಕಾನೂನು ಜಾರಿ ಮಾಡಲಾಗುವುದು. ಆರೋಪಿಗಳ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲು, ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ನೀಡುವ ಕಾನೂನು ತರಲಾಗುವುದು. ಡ್ರಗ್ಸ್‌ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡಲಾಗುವುದು ಎಂದರು.

ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್‌ ಹಾವಳಿ ತಡೆಗೆ ಎನ್‌ಸಿಸಿ, ಸ್ಕೌಟ್ಸ್‌, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳನ್ನು ‘ಸ್ಟೂಡೆಂಟ್‌ ಪೊಲೀಸ್‌’ ಮಾಡಲಾಗುವುದು, ಅಪಾರ್ಟ್‌ಮೆಂಟ್‌ ನಿವಾಸಿಗಳ ಸಂಘಗಳನ್ನು ಬಲಿಷ್ಠ ಮಾಡಲಾಗುವುದು, ಸರ್ಕಾರೇತರ ಸಂಘಗಳನ್ನು ಭಾಗೀದಾರರನ್ನಾಗಿ ಮಾಡಲಾಗುವುದು. ಡ್ರಗ್ಸ್ ಪುನರ್ವಸತಿ ಕೇಂದ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಿಸಿದರು.

ರಾಜ್ಯಕ್ಕೆ ವಿಶೇಷವಾಗಿ ಒಡಿಶಾ, ಆಂಧ್ರಪ್ರದೇಶ, ಹರಿಯಾಣ, ಉತ್ತರಪ್ರದೇಶದಿಂದ ಮಾದಕವಸ್ತುಗಳು ಬರುತ್ತಿವೆ. ಡ್ರಗ್ಸ್‌ ಸಾಗಾಟ, ಮಾರಾಟದಲ್ಲಿ ವಿದೇಶಿಗರೂ ಇದ್ದಾರೆ. ಆದರೆ ಭಾರತೀಯರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ ಎಂದು ಅಂಕಿ-ಅಂಶಗಳ ಸಹಿತ ವಿವರಿಸಿದ ಮುಖ್ಯಮಂತ್ರಿಗಳು, ಡ್ರಗ್ಸ್‌ ದಂಧೆ ತಡೆಯಲು ಪೊಲೀಸರಿಗೆ ಮುಕ್ತ ಹಸ್ತ ನೀಡಿದ್ದೇವೆ. ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್‌ ಪಾಟೀಲ್‌, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.