ಮಂಗಳೂರು: ಕರ್ಣಾಟಕ ಬ್ಯಾಂಕ್‌ನ ಒಟ್ಟು ವ್ಯವಹಾರ 2025ರ ಡಿಸೆಂಬರ್ 31ಕ್ಕೆ ಅನ್ವಯಸಿದಂತೆ 1,81,394.37 ಕೋಟಿ ರು.ಗೆ ಏರಿಕೆಯಾಗಿದ್ದು, 2025ರ ಸೆಪ್ಟೆಂಬರ್ 30ರ 1,76,461.34 ಕೋಟಿ ರು.ಗೆ ಹೋಲಿಸಿದರೆ ಶೇ.3ರಷ್ಟು ಹೆಚ್ಚಳವಾಗಿದೆ.
ಮಂಗಳೂರಿನಲ್ಲಿರುವ ಬ್ಯಾಂಕ್ ಕಚೇರಿಯಲ್ಲಿ ಮಂಗಳವಾರ ನಡೆದ ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆಯಲ್ಲಿ, 2025ರ ಡಿಸೆಂಬರ್ 31ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅವಧಿಯ ಹಣಕಾಸು ಫಲಿತಾಂಶಗಳನ್ನು ಅನುಮೋದಿಸಲಾಯಿತು.ಬ್ಯಾಂಕ್‌ನ ಒಟ್ಟು ಮುಂಗಡ 77,282.85 ಕೋಟಿ ರು.ಗೆ ತಲುಪಿದ್ದು, ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.4.9ರಷ್ಟು ಬೆಳವಣಿಗೆ ದಾಖಲಾಗಿದೆ. ಒಟ್ಟು ಠೇವಣಿಗಳು 1,04,111.52 ಕೋಟಿ ರು. ತಲುಪಿದ್ದು, ಶೇ.1.3ರಷ್ಟು ಪ್ರಗತಿ ಸಾಧಿಸಿದೆ. ತೃತೀಯ ತ್ರೈಮಾಸಿಕದಲ್ಲಿ ಬ್ಯಾಂಕ್ 290.79 ಕೋಟಿ ರು. ನಿವ್ವಳ ಲಾಭ ಗಳಿಸಿದ್ದು, ಹಿಂದಿನ ವರ್ಷದ ಇದೇ ತ್ರೈಮಾಸಿಕದ 283.60 ಕೋಟಿ ರು.ಗೆ ಹೋಲಿಸಿದರೆ ಹೆಚ್ಚಳವಾಗಿದೆ.
ಆಸ್ತಿ ಗುಣಮಟ್ಟ ಸುಧಾರಣೆ: ಕರ್ಣಾಟಕ ಬ್ಯಾಂಕ್‌ನ ಆಸ್ತಿ ಗುಣಮಟ್ಟದಲ್ಲೂ ಸುಧಾರಣೆ ಕಂಡುಬಂದಿದ್ದು, ಗ್ರಾಸ್ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಡಿಸೆಂಬರ್ 31ಕ್ಕೆ ಅನ್ವಯಿಸಿದಂತೆ ಶೇ.3.32ಕ್ಕೆ ಇಳಿದಿದ್ದು, ಅದರ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ (ಶೇ.3.33) ಕಡಿಮೆಯಾಗಿದೆ. ಅದೇ ರೀತಿ ನೆಟ್ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ ಶೇ.1.31ಕ್ಕೆ ಸುಧಾರಿಸಿದೆ (ಹಿಂದಿನ ತ್ರೈಮಾಸಿಕದಲ್ಲಿ ಶೇ. 1.35 ಇತ್ತು). ಪ್ರೊವಿಷನ್ ಕವರೇಜ್ ರೇಶಿಯೊ (ಪಿಸಿಆರ್) ದ್ವಿತೀಯ ತ್ರೈಮಾಸಿಕಕ್ಕಿಂತ (ಶೇ.60.22) ಶೇ.61.23ಕ್ಕೆ ಏರಿಕೆಯಾಗಿದೆ. ಅದೇ ರೀತಿ, ಕ್ಯಾಪಿಟಲ್ ಅಡಿಕ್ವಸಿ ರೇಶಿಯೊ ಶೇ. 19.94 ಇದ್ದು, ಧನಾತ್ಮಕ ಬೆಳವಣಿಗೆ ಕಂಡಿದೆ.ಆರ್‌ಬಿಐನ ಪರಿಷ್ಕೃತ ಡ್ರಾಫ್ಟ್ ಮಾರ್ಗಸೂಚಿಗಳ ಪ್ರಕಾರ ಲಿಕ್ವಿಡಿಟಿ ಕವರೇಜ್ ರೇಶಿಯೊವನ್ನು 2025ರ ಡಿ.31ಕ್ಕೆ ಲೆಕ್ಕಹಾಕಲಾಗಿದ್ದು, ಅದು ಶೇ. 186.84 ಇದೆ.ಬ್ಯಾಂಕಿನ ಫಲಿತಾಂಶಗಳನ್ನು ಘೋಷಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಘವೇಂದ್ರ ಎಸ್. ಭಟ್, ಈ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ಮುಂಗಡದಲ್ಲಿ ಶೇ. 5 ಬೆಳವಣಿಗೆ ದಾಖಲಿಸಿದ್ದು, ಆಸ್ತಿ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ. ರಿಟೈಲ್, ಕೃಷಿ ಮತ್ತು ಎಂಎಸ್‌ಎಂಇ ವಿಭಾಗಗಳ ಮೇಲೆ ಗಮನ ಕೇಂದ್ರೀಕರಿಸುವುದು ಮತ್ತು ಕಡಿಮೆ ವೆಚ್ಚದ ಠೇವಣಿಗಳ ಆಧಾರವನ್ನು ಬೆಳೆಸುವುದರಿಂದ ಬ್ಯಾಂಕ್‌ಗೆ ಪ್ರಯೋಜನಗಳು ದೊರೆಯಲಾರಂಭಿಸಿವೆ. ಬ್ಯಾಂಕ್ ಈಗಾಗಲೇ ತನ್ನ ವಿತರಣಾ ವ್ಯವಸ್ಥೆಯನ್ನು ಶಕ್ತಿಯುತಗೊಳಿಸಿದೆ ಎಂದು ಹೇಳಿದರು. ನಮ್ಮ ಧ್ಯೇಯ ಮತ್ತು ದೃಷ್ಟಿಕೋನವು ಗ್ರಾಹಕ ಸ್ನೇಹಿಯಾಗಿ ದೃಢವಾಗಿ ನೆಲೆಗೊಂಡಿದ್ದು, ಹೊಸ ಸ್ಪಷ್ಟತೆ ಮತ್ತು ಗತಿಯೊಂದಿಗೆ ನಮ್ಮ ಗುರಿಗಳನ್ನು ಮುಂದುವರಿಸುತ್ತಿದ್ದೇವೆ ಎಂದು ಅವರು ಹೇಳಿದರು.