ಕಾರ್ತಿಕೇಯ ಸಂಡೂರು ಭಾಗದಲ್ಲಿ ಯುವರಾಜರೆಂದೇ ಜನರಿಂದ ಕರೆಯಲ್ಪಡುತ್ತಿದ್ದರು.
ವಿ.ಎಂ. ನಾಗಭೂಷಣ
ಸಂಡೂರು: ಘೋರ್ಪಡೆ ರಾಜವಂಶಸ್ಥರೂ ಬಿಜೆಪಿ ಮುಖಂಡರೂ ಆದ ಕಾರ್ತಿಕೇಯ ಎಂ. ಘೋರ್ಪಡೆ (೬೬) ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಸಂಸ್ಕಾರವನ್ನು ಬುಧವಾರ ಬೆಂಗಳೂರಿನಲ್ಲಿ ನೆರವೇರಿಸಲಾಗುವುದೆಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾರ್ತಿಕೇಯ ಸಂಡೂರು ಭಾಗದಲ್ಲಿ ಯುವರಾಜರೆಂದೇ ಜನರಿಂದ ಕರೆಯಲ್ಪಡುತ್ತಿದ್ದರು. ಮಾಜಿ ಮಂತ್ರಿ ದಿ.ಎಂ.ವೈ. ಘೋರ್ಪಡೆ ಅವರ ಪುತ್ರ ಕಾರ್ತಿಕೇಯ ಎಂ. ಘೋರ್ಪಡೆ ೧೯೯೦ರಲ್ಲಿ ಪಟ್ಟಣದ ವಾರ್ಡ್ ನಂ.೧ರಿಂದ ಪಟ್ಟಣ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ, ವಿಜೇತರಾಗಿ ನಂತರ ಪಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ೧೯೯೫-೯೬ರಲ್ಲಿ ಸಂಡೂರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದರು. ೨೦೦೪ರಲ್ಲಿ ನಡೆದ ಸಂಡೂರು ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ೨೦೧೮ರಿಂದ ಬಿಜೆಪಿಗೆ ಸೇರ್ಪಡೆಗೊಂಡು, ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಲು ಶ್ರಮಿಸಿದರು.ಘೊರ್ಪಡೆ ರಾಜವಂಶಸ್ಥರ ಪ್ರತಿಷ್ಠಿತ ಸ್ಮಯೋರ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿ, ಸಂಸ್ಥೆಯನ್ನು ಮುನ್ನಡೆಸಿದ್ದರು. ನಂತರದಲ್ಲಿ ತಮ್ಮದೇ ಆದ ಕಾರ್ತಿಕೇಯ ಮ್ಯಾಂಗನೀಸ್ ಆ್ಯಂಡ್ ಐರನ್ ಓರ್ ಸಂಸ್ಥೆ ಸ್ಥಾಪಿಸಿ, ಮುನ್ನಡೆಸಿದ್ದರು.
ಕಾರ್ತಿಕೇಯ ಘೋರ್ಪಡೆಯವರ ನಿಧನಕ್ಕೆ ನಾಡೋಜ ಡಾ.ವಿ.ಟಿ. ಕಾಳೆಯವರು ಸೇರಿದಂತೆ ಹಲವು ಗಣ್ಯರು ತಮ್ಮ ಸಂತಾಪ ಸೂಚಿಸಿದ್ದಾರೆ. ಅವರ ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಶಾಲಾ ಕಾಲೇಜುಗಳಲ್ಲಿ ಕಾರ್ತಿಕೇಯ ಎಂ. ಘೋರ್ಪಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿದೆ.