ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಪ್ರಾಚೀನ ಕಾಲದಿಂದಲೂ ಕನ್ನಡ ಭಾಷೆಯಲ್ಲಿ ಕರುಳುಬಳ್ಳಿ ಸಂಬಂಧವಿದೆ ಅದನ್ನು ಕನ್ನಡಿಗರಾದ ನಾವು ಉಳಿಸಿ ಬೆಳೆಸಬೇಕಾಗಿದೆ ಎಂದು ಸಾಹಿತಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.ಬಾಗಲಕೋಟೆ ನವನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಎರಡು ದಿನಗಳ ಕಾಲ ನಡೆದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಮತ್ತು ಕನ್ನಡಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಸಮಾರೋಪ ಭಾಷಣ ಮಾಡಿದರು. ಕನ್ನಡ ಅಂದರೆ ಭಾಷೆ, ಜನಾಂಗ, ಪ್ರದೇಶ, ಸಂಸ್ಕೃತಿ, ಸಂಪ್ರದಾಯ ಹೊಂದಿರುವ ತಾಯಿ ನುಡಿಯನ್ನು ನಾವೆಲ್ಲರೂ ಉಳಿಸಿಕೊಳ್ಳದೆ ಹೋದರೆ ಕನ್ನಡಿಗರ ಬದುಕು ಏನಾಗಬಹುದು ಎಂಬುದನ್ನು ಪ್ರತಿಯೊಬ್ಬ ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಕನ್ನಡದ ಸಮ್ಮೇಳನಗಳಿಗೆ ಹಾಜರಾಗಲು ಸರ್ಕಾರ ರಜೆ ನೀಡಿದರೂ ಎಷ್ಟು ಜನ ನೌಕರರು ಹಾಜರಾಗಿದ್ದೇವೆ ಎಂಬುದು ನೌಕರರು ಅವಲೋಕನ ಮಾಡಿಕೊಳ್ಳಬೇಕು. ಕನ್ನಡ ಉಳಿಯಬೇಕಾದರೆ ನಮ್ಮ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ, ಸಾಧನೆ ಮಾಡಿರುವ ಹಿರಿಯ ಸಾಧಕರು, ಸಾಹಿತಿಗಳು, ಕಲಾವಿದರು ಮತ್ತು ಸಂಘ-ಸಂಸ್ಥೆಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಿರಂತರ ಮಾಡುತ್ತ ಬಂದಿದೆ. ಕನ್ನಡದ ಮನಸ್ಸುಗಳ ಸಹಾಯ ಸಹಕಾರದಿಂದ ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಡಾ.ತಾತಾಸಾಹೇಬ ಬಾಂಗಿ, ಹಿರಿಯ ಖ್ಯಾತ ವೈದ್ಯ ಡಾ.ಬಿ.ಎಚ್. ಕೆರೂಡಿ, ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಗೌರವ ಕೋಶಾಧ್ಯಕ್ಷ ಡಾ.ಸಿ.ಎಂ. ಜೋಶಿ, ತಾಲೂಕ ಕಸಾಪ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ, ಸಾಹಿತಿ ಪ್ರಕಾಶ ಖಾಡೆ, ಕಿರಣ ಬಾಳಗೋಳ, ಶಂಕರ ಹೂಲಿ, ಸಿ.ಎಸ್. ನಾಗನೂರು, ಹುನಗುಂದ ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ, ಯೋಗೇಶ ಲಮಾಣಿ, ಸಂಜಯ ನಡುವಿನಮನಿ, ಡಾ.ಮಾರುತಿ ಪಾಟೋಳಿ ಮುತ್ತು ಬಳ್ಳಾ ಮತ್ತು ಕನ್ನಡಸಿರಿ ಪ್ರಶಸ್ತಿ ಪುರಸ್ಕೃತರು ವೇದಿಕೆಯಲ್ಲಿ ಉಪಸ್ಥಿತರಿದ್ದರು.