ದೇಶದ ಸಾರಸ್ವತ ಲೋಕಕ್ಕೆ ಕರುನಾಡಿನ ಕೊಡುಗೆ ಅಪಾರ: ಡಾ. ಎ.ಸಿ. ವಾಲಿ

| Published : Feb 05 2024, 01:50 AM IST

ದೇಶದ ಸಾರಸ್ವತ ಲೋಕಕ್ಕೆ ಕರುನಾಡಿನ ಕೊಡುಗೆ ಅಪಾರ: ಡಾ. ಎ.ಸಿ. ವಾಲಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಾರಸ್ವತ ಲೋಕಕ್ಕೆ ಕರುನಾಡಿನ ಕೊಡುಗೆ ಅಪಾರವಾಗಿದೆ.

ಕನ್ನಡಪ್ರಭ ವಾರ್ತೆ ಅಕ್ಕಿಆಲೂರು

ವಿಶ್ವಮಾನ್ಯವಾಗಿರುವ ಭಾರತ ದೇಶದಲ್ಲಿಂದು ನಡೆದಿರುವ ಸಾಕಷ್ಟು ಪೂರಕ ಬದಲಾವಣೆಗಳಿಗೆ ನಾವೆಲ್ಲರೂ ಸಾಕ್ಷಿಯಾಗುತ್ತಿರುವುದು ನಮ್ಮ ಹೆಮ್ಮೆಯ ವಿಷಯ. ದೇಶದ ಸಾರಸ್ವತ ಲೋಕಕ್ಕೆ ಕರುನಾಡಿನ ಕೊಡುಗೆ ಅಪಾರವಾಗಿದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿಯ ಮುಖ್ಯಸ್ಥ (ಡೀನ್) ಡಾ. ಎ.ಸಿ. ವಾಲಿ ಹೇಳಿದರು.

ಪಟ್ಟಣದಲ್ಲಿ ಶ್ರೀ ದುಂಡಿಬಸವೇಶ್ವರ ಜನಪದ ಕಲಾಸಂಘದಿಂದ ಆಯೋಜಿಸಲಾಗಿದ್ದ ೩೨ನೇ ಕನ್ನಡ ನುಡಿ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾರನ್ನು ಕೇವಲವಾಗಿ ಕಾಣಬಾರದು. ಎಲ್ಲರಲ್ಲೂ ಅಸಾಮಾನ್ಯ ಸಾಮರ್ಥವಿರುತ್ತದೆ. ಅದನ್ನು ಗುರುತಿಸುವ ಪ್ರಯತ್ನ ನಮ್ಮದಾಗಬೇಕು. ಸಮಾಜದಲ್ಲಿ ಮಾನವೀಯತೆ ಮತ್ತು ಧರ್ಮದ ಗುಣಗಳು ಹೆಚ್ಚಾಗುತ್ತಿವೆ. ಕನ್ನಡ ಕಟ್ಟಲು ಸರ್ಕಾರದ ಮೇಲೆ ನಾವು ಅವಲಂಬಿತರಾಗದೆ, ಸ್ವಯಂ ಪ್ರೇರಣೆಯಿಂದ ನಾಡಾಭಿಮಾನ ರಾಷ್ಟ್ರೀಯ ಮನೋಧರ್ಮ, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಭಾರತೀಯ ಸಂಸ್ಕೃತಿ ಮತ್ತು ಪ್ರಾಚೀನತೆಗೆ ಕನ್ನಡ ಬಹುದೊಡ್ಡ ಕೊಡುಗೆ ನೀಡಿದೆ. ಅದನ್ನು ನಾವೇ ಉಳಿಸಿಕೊಳ್ಳಬೇಕು. ನಮ್ಮ ಮೂಲ ಸನಾತನ ಸಂಸ್ಕೃತಿ, ಆಚರಣೆಗಳಿಗೆ ಹಿನ್ನಡೆಯಾಗದಂತೆ ನಾವು ಜಾಗೃತರಾಗಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬೇಕೆಂದರೂ ಸಿಗದ ನಮ್ಮ ಶ್ರೇಷ್ಠ ಆಚಾರ-ವಿಚಾರಗಳನ್ನು ನಾವೇ ಗೌರವಿಸಬೇಕು ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಸತೀಶ ಕುಲಕರ್ಣಿ ಮಾತನಾಡಿ, ಯುವ ಸಾಹಿತಿಗಳಿಗೆ ವಿನೂತನ ಆಲೋಚನೆಗಳಿರಬೇಕು. ವೈಚಾರಿಕತೆ ಮತ್ತು ನೈತಿಕತೆಯ ಆಧಾರದ ಮೇಲೆ ಸಾಹಿತ್ಯ ರಚನೆಯಾಗಿ ಸಮುದಾಯದ ಬೆಳಕಾಗಿ ಪ್ರಜ್ವಲಿಸುವಂತಾಗಬೇಕು. ಗಡಿಭಾಗಗಳಲ್ಲಿ ಇಂದಿಗೂ ನಡೆದಿರುವ ಭಾಷೆ, ನೆಲ-ಜಲದ ಕುರಿತ ವೈರುಧ್ಯ ಕನ್ನಡಿಗರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದೆ. ಈ ಹಿಂದೆ ಗೋಕಾಕ ಚಳವಳಿ ಪ್ರಕಟಿಸಿದ ವರದಿ ಕನ್ನಡದ ಉಳಿವಿಗೆ ಸ್ಪೋಟಕ ಶಕ್ತಿಯನ್ನು ನೀಡಿದ್ದು ಹೆಮ್ಮೆ ಪಡುವ ಸಂಗತಿಯಾಗಿದೆ. ಜನಪದ ಸಂಸ್ಕೃತಿಗೆ ಘಾಸಿಯಾದಾಗ ನಮ್ಮ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಸುಪ್ರೀಂಕೋರ್ಟ್ ನ್ಯಾಯವಾದಿ ಸಂದೀಪ ಪಾಟೀಲ ಮಾತನಾಡಿ, ಕನ್ನಡ ಭಾಷೆ ಬೆಳೆಯುವುದು ಜೈಕಾರ ಹಾಕುವುದರಿಂದಲ್ಲ, ಬದಲಿಗೆ ಓದುವುದು, ಬರೆಯುವುದು ಮತ್ತು ಮಾತನಾಡುವುದರ ಮೇಲೆ ಕನ್ನಡದ ಅಸ್ತಿತ್ವ ಅಡಗಿದೆ. ರಾಷ್ಟ್ರೀಯ ಮನೋಧರ್ಮ, ನಾಡಾಭಿಮಾನ ಅಳವಡಿಸಿಕೊಂಡರೆ ಶಿಕ್ಷಣವಿಲ್ಲದೆ ಇದ್ದರು. ಜಗತ್ತು ಆಳುವ ನೈತಿಕ ಆತ್ಮವಿಶ್ವಾಸ ನಮ್ಮಲ್ಲಿ ಕರಗತವಾಗುತ್ತದೆ ಎಂದರು.

ವಿರಕ್ತಮಠದ ಶಿವಬಸವ ಶ್ರೀ ಮಾತನಾಡಿ, ಕನ್ನಡ ಭಾಷೆಯು ತಾಯಿಯ ಹೃದಯವಂತಿಕೆ ಹೊಂದಿದ್ದು, ಕನ್ನಡ ಸಂರಕ್ಷಣೆ ಈ ನಾಡಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಕನ್ನಡತನ ಜಾಗೃತಿಯನ್ನು ಸರ್ಕಾರ ಪರಿಣಾಮಕಾರಿಯಾಗಿ ಮಾಡಬಹುದು. ಆದರೆ ಅನುಷ್ಠಾನಗೊಳಿಸಬೇಕಾಗಿರುವ ಜನತೆಯಲ್ಲಿ ಕನ್ನಡ ಪ್ರತಿಪಾದನೆಯ ಭಾವ ಒಡಮೂಡಬೇಕು ಎಂದರು.

ನಂತರ ಪ್ರಶಾಂತ ದೈವಜ್ಞ ವಿರಚಿತ ಬಾಬಣ್ಣನ ಚುಟುಕುಗಳು ಕೃತಿ ಬಿಡುಗಡೆಗೊಂಡಿತು. ಹಾವೇರಿ ಪೃಥ್ವಿ ನೃತ್ಯ ಲೋಕ ತಂಡದಿಂದ, ಕಾಲೇಜು ವಿಭಾಗದಿಂದ ನಡೆದ ನೃತ್ಯ ಸಂಭ್ರಮ ನೋಡುಗರ ಮನಸೂರೆಗೊಂಡವು. ಶಿವಮೊಗ್ಗದ ಅನುಷಾ ಮೇಲೋಡಿಸ್, ಸರಿಗಮಪ ಖ್ಯಾತಿಯ ಮಹನ್ಯಾ ಪಾಟೀಲ ನಡೆಸಿದ ಗೀತ ಸಂಭ್ರಮ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. ತಹಸೀಸಲ್ದಾರ ರವಿ ಕೊರವರ, ವಿ.ವಿ. ಸಾಲಿಮಠ, ಶರತ್ ಸಣ್ಣವೀರಪ್ಪನವರ, ರಾಜಶೇಖರ ಮಳಗಿ, ಷಣ್ಮುಖಪ್ಪ ಮುಚ್ಚಂಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.