ಸಾರಾಂಶ
ಕರವಸೂಲಿ ಬಗ್ಗೆ ಆಸಕ್ತಿ ತೋರದ ಸಿಬ್ಬಂದಿ ಶ್ರೀನಿವಾಸ ಅವರನ್ನು ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸಭೆಗೆ ತಿಳಿಸಿದರು.
ಕಾರವಾರ:
ಇಲ್ಲಿನ ನಗರಸಭೆಯಲ್ಲಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಶನಿವಾರ ನಡೆದ ಅಹವಾಲು ಸಭೆಗೆ ಆಗಮಿಸದ, ಕರವಸೂಲಿ ಬಗ್ಗೆ ಆಸಕ್ತಿ ತೋರದ ಸಿಬ್ಬಂದಿ ಶ್ರೀನಿವಾಸ ಅವರನ್ನು ಅಮಾನತು ಮಾಡುವುದಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಸಭೆಗೆ ತಿಳಿಸಿದರು.ನಿವೃತ್ತ ಪ್ರಾಚಾರ್ಯ ವಿ.ಎಂ. ಹೆಗಡೆ, ಅನಧಿಕೃತ ಮನೆ ನಿರ್ಮಾಣ ಮಾಡಿದ ಬಗ್ಗೆ ಪ್ರಸ್ತಾಪಿಸಿದರು. ಮಾಹಿತಿ ಹಕ್ಕಿನ ಅಡಿ ದಾಖಲೆ ಕೇಳಿದರೂ ಕೆಲವು ತಿಂಗಳು ಕೊಟ್ಟಿರಲಿಲ್ಲ. ಮೇಲ್ಮನವಿ ಸಲ್ಲಿಸಿದಾಗ ಉತ್ತರ ಬಂದಿದ್ದು, ಮನೆ ನಿರ್ಮಾಣಕ್ಕೆ ನಗರಸಭೆಯಿಂದ ಅನುಮತಿ ಪಡೆದಿಲ್ಲ ಎನ್ನುವ ಉತ್ತರ ಬಂದಿದೆ. ಆದರೆ ಇದುವರೆಗೂ ನಗರಸಭೆಯಿಂದ ಯಾವುದೇ ಕ್ರಮವಾಗಿಲ್ಲ ಎಂದರು.
ಡಿಸಿ ಗಂಗೂಬಾಯಿ ಬಿಲ್ ಕಲೆಕ್ಟರ್ ಬಳಿ ಸ್ಪಷ್ಟನೆ ಕೇಳಿದಾಗ ಸಭೆಗೆ ಶ್ರೀನಿವಾಸ ಬಂದಿರಲಿಲ್ಲ. ತಕ್ಷಣವೇ ಸಭೆಗೆ ಬರಲು ತಿಳಿಸುವಂತೆ ಹೇಳಿದರು. ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೆ ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಡಿಸಿ, ಕರ ವಸೂಲಿಗೆ ಆಸಕ್ತಿ ತೋರುತ್ತಿಲ್ಲ. ಸಭೆಗೂ ಬರದೇ ನಿರ್ಲಕ್ಷ್ಯ ಮಾಡಿದ್ದಾರೆ. ತಕ್ಷಣವೇ ಅವರನ್ನು ಸಸ್ಪೆಂಡ್ ಮಾಡುತ್ತೇವೆ ಎಂದ ಅವರು, ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣವಾಗಿದ್ದರೆ ತೆರವು ಮಾಡಲು ಅವಕಾಶವಿದೆ. ಮಾಲ್ಕಿ ಜಾಗವಾಗಿದ್ದರೆ ಬರುವುದಿಲ್ಲ. ಈ ಬಗ್ಗೆ ಪರಿಶೀಲಿಸಿ ಮಾಲ್ಕಿ ಜಾಗವಾಗಿದ್ದರೆ ಅನುಮತಿ ಪಡೆಯದ ಕಾರಣ ದಂಡ ವಿಧಿಸಿ, ಕರ ವಸೂಲಿ ಮಾಡಲು ನಗರಸಭೆ ಆಯುಕ್ತರಿಗೆ ಸೂಚಿಸಿದರು.ಶಿರವಾಡ ಗ್ರಾಪಂ ಸದಸ್ಯ ಜನಾರ್ಧನ ಗಾಂವಕರ, ಕಾರವಾರದಿಂದ ಶಿರವಾಡಕ್ಕೆ ಸಾಗುವ ರಸ್ತೆ ಅರ್ಧ ಭಾಗ ನಗರಸಭೆಗೆ ಸೇರಿದೆ. ಇನ್ನರ್ಧ ಗ್ರಾಪಂಗೆ ಬರುತ್ತದೆ. ಸಂಪೂರ್ಣ ಹೊಂಡಮಯವಾಗಿದೆ. ಬೀದಿದೀಪ ಇಲ್ಲ. ನಗರಸಭೆಯ ತ್ಯಾಜ್ಯ ಹಾಕಲು ಶಿರವಾಡ ಬೇಕು. ಆದರೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ನಗರಸಭೆ ಆಸಕ್ತಿ ತೋರುತ್ತಿಲ್ಲ. ಘನತ್ಯಾಜ್ಯ ಘಟಕದಿಂದ ಸುತ್ತಮುತ್ತಲಿನ ವಾತಾವರಣ ಗಬ್ಬು ನಾರುತ್ತಿದೆ. ಇದೇ ರೀತಿ ಆದರೆ ಎನ್‌ಜಿಟಿ ಹೋಗಬೇಕಾಗುತ್ತದೆ ಎಂದು ತಾಕೀತು ಮಾಡಿದರು.ಇದರಿಂದ ಕೋಪಗೊಂಡ ಶಾಸಕ ಸತೀಶ ಸೈಲ್, ಎಲ್ಲಿಗೆಬೇಕಾದರೂ ಹೋಗಿ. ನಮಗೂ ಕಾಯಿದೆ, ಕಾನೂನು ಗೊತ್ತಿದೆ. ಮಾತನಾಡುವಾಗ ಯೋಚಿಸಿ ಮಾತನಾಡಬೇಕು. ಸಭೆಯಲ್ಲಿ ಈ ರೀತಿ ಮಾತನಾಡಬಾರದು ಎಂದು ಕಿಡಿಕಾರಿದರು. ರಸ್ತೆ, ಬೀದಿದೀಪ, ಘನತ್ಯಾಜ್ಯ ಘಟಕದ ಕುರಿತು ವಾಗ್ವಾದ ನಡೆಯಿತು. ಪೌರಾಯುಕ್ತ ಕೆ. ಚಂದ್ರಮೌಳಿ, ನಗರಸಭೆ ವ್ಯಾಪ್ತಿಯಲ್ಲಿ ಮಾತ್ರ ಅನುದಾನ ಬಳಕೆಗೆ ಅವಕಾಶವಿದೆ ಎಂದು ತಿಳಿಸಿದರು. ಜನಾರ್ಧನ ಜಿಲ್ಲಾಧಿಕಾರಿ ಬಳಿ ರಸ್ತೆ, ಬೀದಿದೀಪದ ಬಗ್ಗೆ ಕ್ರಮವಹಿಸಲು ಕೋರಿದರು.ನೀರಿನ ಸಮಸ್ಯೆ, ರಸ್ತೆ, ಚರಂಡಿ, ಬೀದಿದೀಪ, ಬಹುಮಹಡಿ ಕಟ್ಟಡದಲ್ಲಿ ಪಾರ್ಕಿಂಗ್ ಇಲ್ಲದಿರುವುದು ಮೊದಲಾದವುಗಳ ಬಗ್ಗೆ ಸಭೆಗೆ ಬಂದಿದ್ದ ಜನರು ದೂರಿದರು. ನಗರಸಭೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.