ಪತ್ರಿಕೆಗಳಲ್ಲಿ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಸುದ್ದಿಯನ್ನು ಪ್ರಸ್ತಾಪಿಸಿ ಸಹಕಾರಿಯಾಗಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯನಾಗಿ 12 ವರ್ಷಗಳೇ ಸಂದವು.

ಕನ್ನಡಪ್ರಭ ವಾರ್ತೆ ಹುಣಸೂರು

ಸಹಕಾರಿ ಕ್ಷೇತ್ರದಲ್ಲಿ ನಾನು ಭ್ರಷ್ಟಾಚಾರ ಮಾಡಿದ್ದರೆ ಯಾವುದೇ ತನಿಖೆ ಎದುರಿಸಲೂ ಸಿದ್ಧ. ಆದರೆ ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸುವವರು ಆತ್ಮಸಾಕ್ಷಿಯೊಂದಿಗೆ ಮಾತನಾಡುವುದು ಒಳಿತು ಎಂದು ಶಾಸಕ ಜಿ.ಡಿ. ಹರೀಶ್‌ ಗೌಡ ತಮ್ಮ ವಿರೋಧಿಗಳನ್ನು ಕುಟುಕಿದರು.

ನಗರದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘಕ್ಕೆ 2025-30ನೇ ಸಾಲಿಗಾಗಿ ಆಯ್ಕೆಯಾದ ನಿರ್ದೇಶಕರಿಗೆ ಶುಕ್ರವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಪತ್ರಿಕೆಗಳಲ್ಲಿ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿರುವ ಸುದ್ದಿಯನ್ನು ಪ್ರಸ್ತಾಪಿಸಿ ಸಹಕಾರಿಯಾಗಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯನಾಗಿ 12 ವರ್ಷಗಳೇ ಸಂದವು. ಇಲ್ಲಿಂದ ಅಪೆಕ್ಸ್‌ ಬ್ಯಾಂಕ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ. ನಾನೆಂದೂ ಭ್ರಷ್ಟಾಚಾರ ನಡೆಸಿಲ್ಲ, ಭ್ರಷ್ಟರಿಗೆ ರಕ್ಷಣೆಯನ್ನೂ ನೀಡಿಲ್ಲ. ಅಂತಹ ಅವಶ್ಯಕತೆಯೂ ನನಗಿಲ್ಲ. ನಮ್ಮ ತಾಲೂಕಿನ ಸಹಕಾರಿ ಸಂಘಗಳಿಗೆ ಈ ಸಾಲಿನ ಸಾಲಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿ ಡಿಸಿಸಿ ಬ್ಯಾಂಕ್ ಮುಂದೆ ರೈತರೊಂದಿಗೆ ಪ್ರತಿಭಟನೆ ಮಾಡಿದ್ದೇನೆಯೇ ಹೊರತು ಯಾರನ್ನೂ ರಕ್ಷಿಸಲು ಅಲ್ಲ. ನಾನು ಭ್ರಷ್ಟಾಚಾರ ನಡೆಸಿದ್ದೇನೆ ಎನ್ನುವುದಾದರೆ ಸಿಐಡಿ, ಎಸ್‌ಐಟಿ, ಸಿಬಿಐ ಯಾವುದೆ ತನಿಖಾ ಸಂಸ್ಥೆಗೆ ತನಿಖೆ ವಹಿಸಿದರೂ ನಾನು ಎದುರಿಸಲು ಸಿದ್ಧ. ಆದರೆ ನನ್ನ ವಿರುದ್ಧ ಆರೋಪ ಮಾಡುವವರು ತಮ್ಮ ಆತ್ಮಸಾಕ್ಷಿಯೊಂದಿಗೆ ಮಾತನಾಡಲಿ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದ ವೇಳೆ ಅಂದಿನ ಅಧಿಕಾರಿ ರಾಮಪ್ಪ ಪೂಜಾರಿ 27 ಕೋಟಿ ರೂ.ಗಳ ಹಗರಣ ಡೆಸಿದ್ದನ್ನು ನಾನೇ ಬಯಲಿಗೆಳೆದು ಜೈಲಿಗಟ್ಟಿ ಸಂಘ ಉಳಿಸಿದ್ದೆ. ಇದೀಗ ಅಂತಹ ವ್ಯಕ್ತಿಯ ಖಾತೆಯಿಂದ ಯಾರು ಯಾರ ಖಾತೆಗೆ ಹಣ ಹರಿದಾಟ ನಡೆದಿದೆ ಎನ್ನುವುದನ್ನು ಮುಖಂಡರು ಸ್ಪಷ್ಟಪಡಿಸಬೇಕು. ಭ್ರಷ್ಟರನ್ನು ಗುರುತಿಸಿ ಜೈಲಿಗೆ ಕಳುಹಿಸಿದ್ದೆ. ಅಂತಹವರನ್ನು ಮತ್ತೆ ಆಯಕಟ್ಟಿನ ಸ್ಥಳದಲ್ಲಿ ಕುಳ್ಳಿರಿಸಿದವರು ಯಾರು? ಧರ್ಮಾಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆಸಿದ ಸೆಕ್ರೆಟರಿ ವಿರುದ್ಧ ಪ್ರಕರಣ ದಾಖಲಿಸಲು ವಿಳಂಬ ಯಾಕೆ ಆಯಿತು? ಎಂದು ಅವರು ಪ್ರಶ್ನಿಸಿದರು.

ಧರ್ಮಾಪುರ ಸೊಸೈಟಿ ಆಡಿಟ್ ಆಗಿಲ್ಲವೆಂದು ಆರೋಪಿಸಿದ್ದರು. ನಾನು ಡಿಸಿಸಿ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ನಂತರ ಇದೀಗ 91 ಮಂದಿಗೆ ಸಾಲ ದೊರಕಿದೆ. ಆಡಿಟ್ ಆಗದೇ ಡಿಸಿಸಿ ಬ್ಯಾಂಕ್‌ ಹೇಗೆ ಸಾಲ ನೀಡಿತು ಎನ್ನುವುದನ್ನು ಕಾಂಗ್ರೆಸ್ ಮುಖಂಡರು ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದರು.

ತಾನು ಅಲ್ಪಸಂಖ್ಯಾತರ ಮತ್ತು ಹಿಂದುಳಿದ ಸಮಾಜದ ರಕ್ಷಕ ಎಂದು ಹೇಳಿಕೊಳ್ಳುವ ಈ ಮುಖಂಡರು ವಿಧಾನಸಭೆ ಚುನಾವಣೆ ವೇಳೆ ನಾನು ಗೆದ್ದರೆ ಒಕ್ಕಲಿಗರ ಹಾವಳಿಯಾಗಲಿದೆ ಎಂದು ಅಪಪ್ರಚಾರ ನಡೆಸಿದ್ದರು. ಆದರೆ ಜಿಲ್ಲಾ ಮಟ್ಟದ ಉಪನಿಬಂಧಕ ಅಧಿಕಾರಿ ಕಸಬಾ ಸೊಸೈಟಿ ಚುನಾವಣೆಯನ್ನು ಕಾನೂನು ಬದ್ಧವಾಗಿ ಘೋಷಿಸಿದ್ದರೂ ಆತನಿಗೆ ಏನು ಮಾಡಿದರು? ತಾಲೂಕಿನ ಸಿಬಿಟಿ ಕಾಲನಿ ಸೊಸೈಟಿ ಚುನಾವಣೆ ಕುರಿತಂತೆ ಅಲ್ಲಿನ ಗ್ರಾಮಸ್ಥರು ನಮ್ಮಲ್ಲಿ ಚುನಾವಣೆ ಬೇಡ. ಶಾಂತಿಗೆ ಭಂಗ ಬರುವಂತಹ ಪರಿಸ್ಥಿತಿ ನಮಗೆ ಬೇಡ. ಎಲ್ಲರೂ ಒಂದಾಗಿ ಹೋಗುತ್ತೇವೆ ಎಂದು ನನ್ನಲ್ಲಿ ಅರಿಕೆ ಮಾಡಿಕೊಂಡ ಕಾರಣ ನಾನು ಗ್ರಾಮದಲ್ಲಿ ಶಾಂತಿ ಸಾಮರಸ್ಯ ಇರಬೇಕೆಂದು ಆಶಿಸಿ ಒಪ್ಪಿಗೆ ಸೂಚಿಸಿದ್ದೇನೆಯೇ ಹೊರತು ಇನ್ಯಾರ ಮಾತಿಗೂ ಅಲ್ಲ. ಪೈಪೋಟಿಯ ಕಸಬಾ ಚುನಾವಣೆಯನ್ನೇ ಮಾಡಿರುವ ನನಗೆ ಸಿಬಿಟಿ ಕಾಲನಿ ಚುನಾವಣೆ ಎದುರಿಸಲು ಗೊತ್ತಿಲ್ಲವೇ ಎಂದು ಅವರು ವ್ಯಂಗ್ಯವಾಡಿದರು.

ಸಭೆಯಲ್ಲಿ ಸಂಘದ ವತಿಯಿಂದ ಶಾಸಕ ಹರೀಶ್‌ ಗೌಡರಿಗೆ ಬೆಳ್ಳಿ ಗದೆ ನೀಡಿ ಗೌರವಿಸಲಾಯಿತು. ನಿರ್ದೇಶಕರಾದ ವಾಸೇಗೌಡ, ಎಚ್.ಸಿ. ರವಿಕುಮಾರ್, ಮಹದೇವು, ರುದ್ರಬೋವಿ, ಪುಟ್ಟರಾಜು, ರಮೇಶ್, ಸುನಂದ, ಶಶಿಕಲಾ ಬಾಯಿ, ಗೀತಾ ನಿಂಗರಾಜು, ದಿವಾಕರ್, ಕೆ.ಎಸ್. ಬೀರೇಶ್ ಹಾಗೂ ಸದಸ್ಯರು ಇದ್ದರು.