ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ ನೀಡಿದ ಕೊಡುಗೆ ಅನನ್ಯವಾದದ್ದು.
ಕಸಾಪದ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬರಹಗಾರ್ತಿ
ಕನ್ನಡಪ್ರಭ ವಾರ್ತೆ ಸಿದ್ದಾಪುರಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ಕನ್ನಡ ಸಾಹಿತ್ಯ ಪರಿಷತ್ ನೀಡಿದ ಕೊಡುಗೆ ಅನನ್ಯವಾದದ್ದು ಎಂದು ಬರಹಗಾರ್ತಿ ಮಾಲತಿ ಭಟ್ಟ ಹೇಳಿದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಪಟ್ಟಣದ ಬಾಲಭವನದಲ್ಲಿ ಹಮ್ಮಿಕೊಂಡ ಕಸಾಪದ 112ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಭಾವ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತು ಪ್ರತಿವರ್ಷ ಆಯೋಜಿಸುವ ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರಕಟಣೆ, ಬರಹಗಾರರಿಗೆ ಪ್ರಶಸ್ತಿ ಮುಂತಾದ ಚಟುವಟಿಕೆಗಳ ಮೂಲಕ ಜನಸಾಮಾನ್ಯರಿಂದ ತೊಡಗಿ, ಸಾಹಿತ್ಯಾಸಕ್ತರಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಮಾಡುವುದರ ಜೊತೆಗೆ ಕನ್ನಡಿಗರನ್ನು ಒಗ್ಗೂಡಿಸುವ, ಕನ್ನಡಾಭಿಮಾನ ಬೆಳೆಸುವ ಕಾರ್ಯ ಮಾಡುತ್ತ ಬಂದಿದೆ. ಸಾಹಿತ್ಯ ಸೃಷ್ಟಿ ಸಾಮಾಜಿಕ ಹೊಣೆಗಾರಿಕೆಯೂ ಕೂಡ. ವಿದ್ಯಾವಂತರಾದರೆ ಸಾಲದು. ಬುದ್ದಿಯ ಸಂಸ್ಕಾರವೂ ಅಗತ್ಯ. ಅಂಥ ಕೊಡುಗೆಯನ್ನು ಸದಭಿರುಚಿಯ ಓದು ನೀಡುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳು ಇನ್ನಷ್ಟು ವಿಸ್ತಾರಗೊಳ್ಳಬೇಕು ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಮಾತನಾಡಿ, ಇಂದು ಸಂಕಟ ಮತ್ತು ಸಂಭ್ರಮಗಳ ನಡುವೆ ಕನ್ನಡವಿದೆ. ಕನ್ನಡದ ಉಳಿವಿಗಾಗಿ, ಭಾಷಾ ಸಂಸ್ಕೃತಿಯ ಬೆಳವಣಿಗೆಗಾಗಿ ಜನ್ಮ ತಾಳಿದ ಸಾಹಿತ್ಯ ಪರಿಷತ್ತು ನಿಘಂಟು ಪ್ರಕಟಣೆ ಮುಂತಾದ ಹಲವು ಮಹತ್ತರ ಕಾರ್ಯ ಮಾಡಿದೆ. ಇತ್ತೀಚೆಗೆ ಜನರಿಂದ ದೂರವಾಗಿ, ರಾಜಕಾರಣದ ವೇದಿಕೆಯಾಗುತ್ತಿರುವ ಅಪಾಯ ಕಂಡುಬರುತ್ತಿದೆ. ನಮ್ಮ ಎರಡು ಶಕ್ತಿಗಳಾದ ಅರಿವು ಮತ್ತು ಮರೆವಿನ ಕಾರಣದಿಂದ ಕನ್ನಡ ಯಾವ ಹಂತಕ್ಕೆ ಏರಬೇಕಿತ್ತೋ ಆ ಮಟ್ಟಕ್ಕೆ ಏರಿಲ್ಲ. ಕನ್ನಡ ಸಾಹಿತ್ಯವನ್ನು ಓದುವ ಮೂಲಕ ಎಲ್ಲೆಡೆ ಪಸರಿಸಬೇಕಾದ ಅಗತ್ಯವಿದೆ ಎಂದರು.ನಿಕಟಪೂರ್ವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ತಮ್ಮಣ್ಣ ಬೀಗಾರ, ಪ್ರಾಚಾರ್ಯ ಎಂ.ಕೆ. ನಾಯ್ಕ ಹೊಸಳ್ಳಿ ಮಾತನಾಡಿದರು.ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವೀರಭದ್ರ ನಾಯ್ಕ, ಕನ್ನಡಪರ ಹೋರಾಟಗಾರ ಶಂಕರಮೂರ್ತಿ ಕತ್ತಿ, ನಿಕಟಪೂರ್ವ ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಬಾಶಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸುಮಿತ್ರಾ ಶೇಟ್, ನೀಲಮ್ಮ ಕೊಂಡ್ಲಿ, ಗೋಪಾಲ ಕಾನಳ್ಳಿ, ಅಸ್ಲಾಂ ಶೇಖ್ ಕನ್ನಡ ಗೀತೆಗಳನ್ನು ಹಾಡಿದರು.ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಪ್ರಶಾಂತ ಶೇಟ್ ಸ್ವಾಗತಿಸಿದರು. ಖಜಾಂಚಿ ಪಿ.ಬಿ. ಹೊಸೂರ ಪ್ರಾಸ್ತಾವಿಕ ಮಾತನಾಡಿದರು. ಎಂ.ಎನ್. ನಾಯ್ಕ ನಿರೂಪಿಸಿದರು.