ಕಾಸರಗೋಡು ಭಾಷೆ, ಸಂಸ್ಕೃತಿಗಳ ಸಂಗಮ: ಮಹಮ್ಮದಾಲಿ

| Published : Jul 24 2025, 01:45 AM IST

ಸಾರಾಂಶ

ಕಾಸರಗೋಡು ಈಗ ಕೇರಳದ ಒಂದು ಜಿಲ್ಲೆಯಾಗಿದ್ದು, ಇದು ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವುದರಿಂದ ಕನ್ನಡ, ತುಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಹಾಗೂ ಸಂಸ್ಕೃತಿಗಳ ಸಂಗಮವಾಗಿದೆ.

ಸಾಂಸ್ಕೃತಿಕ ವಿನಿಮಯ, ತರಬೇತಿ ಕಾರ್ಯಾಗಾರ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಕಾಸರಗೋಡು ಈಗ ಕೇರಳದ ಒಂದು ಜಿಲ್ಲೆಯಾಗಿದ್ದು, ಇದು ಕೇರಳ ಮತ್ತು ಕರ್ನಾಟಕದ ಗಡಿಯಲ್ಲಿರುವುದರಿಂದ ಕನ್ನಡ, ತುಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳು ಹಾಗೂ ಸಂಸ್ಕೃತಿಗಳ ಸಂಗಮವಾಗಿದೆ ಎಂದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಪ್ರಾಚಾರ್ಯ ಮಹಮ್ಮದಾಲಿ ಕೆ. ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗ, ನಾಟಕ ವಿಭಾಗ, ಆಂತರಿಕ ಭರವಸೆ ಕೋಶ ಹಾಗೂ ಗೋವಿಂದ ಪೈ ಸ್ಮಾರಕ ಕಾಲೇಜು ಮಂಜೇಶ್ವರ ಇವುಗಳ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ವಿನಿಮಯ ಹಾಗೂ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 1956ರ ಮೊದಲೂ ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಜಿಲ್ಲೆ ನಂತರ ಕೇರಳದ ರಾಜ್ಯಕ್ಕೆ ಸೇರಿತು. ಹೀಗೆ ಭಾಗವಾದ ಪ್ರದೇಶದಲ್ಲಿ ಕಲೆ, ಸಂಸ್ಕೃತಿ ಉಳಿಸಿ ಬೆಳೆಸಿಕೊಂಡು ಸುಮಾರು ಏಳಕ್ಕಿಂತ ಹೆಚ್ಚು ಭಾಷೆಯನ್ನು ದಿನನಿತ್ಯ ಮಾತನಾಡುತ್ತಾರೆ. ಈ ನಿಟ್ಟಿನಲ್ಲಿ ಗೋವಿಂದ ಪೈ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕವು ವಿಭಿನ್ನ ಸಂಸ್ಕೃತಿಗಳನ್ನು ಸಹಬಾಳ್ವೆಯಿಂದ ನಡೆಸಿಕೊಂಡು, ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಹಾಗೂ ವಿವಿಧ ಸಂಸ್ಕೃತಿ ಮತ್ತು ಕಲೆ ಬೆಳೆಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್‌ ಡಾ. ಶಿವಾನಂದ ವಿರಕ್ತಮಠ ಮಾತನಾಡಿ, ಮನುಷ್ಯ ಲೋಕ ಎಂಬುದು ಸಾವಿರ ಆಲೋಚನೆಗಳ ಸಾಗರ, ನಮ್ಮಲ್ಲಿ ಹಲವು ಸಂಸ್ಕೃತಿಯ ವೈವಿಧ್ಯಮಯಗಳನ್ನು ಕಾಣಬಹುದು. ಇಲ್ಲಿ ಒಂದು ಶ್ರೇಷ್ಠ ಇನ್ನೊಂದು ಕನಿಷ್ಠ ಎಂಬುವುದಿಲ್ಲ. ಸಂಸ್ಕೃತಿಗೆ ಅನುಗುಣವಾಗಿ ತಮ್ಮದೇ ಆದ ವಿಶಿಷ್ಟತೆಯಿಂದ ರೂಢಿ, ಸಂಪ್ರದಾಯಗಳನ್ನು ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ತಾರತಮ್ಯವನ್ನು ಹೋಗಲಾಡಿಸಲು ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳುವುದು ಬಹಳ ಮುಖ್ಯ ಎಂದರು.

ವಿವಿ ಕುಲಸಚಿವ ಡಾ. ವಿಜಯ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸಿ, ಕನ್ನಡದ ಕಲೆ, ಸಂಸ್ಕೃತಿ ಹಾಗೂ ಸಂಗೀತವನ್ನು ಜಗತ್ತಿನಾದ್ಯಂತ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇನ್ನೂ ಕಾಸರಗೋಡು ಜಿಲ್ಲೆಯಲ್ಲಿ ಗೋವಿಂದ ಪೈ ಕಾಲೇಜಿನ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕನ್ನಡ ಸರಳವಾಗಿ ಮಾತನಾಡುತ್ತಿದ್ದಾರೆ. ಹೀಗೆ ಕನ್ನಡವನ್ನು ಇನ್ನೂ ಹೆಚ್ಚು ಜನರು ಕಲಿತು ಇದರಲ್ಲಿನ ಸೂಕ್ಷ್ಮತೆಯ ವಿಚಾರಗಳನ್ನು ತಿಳಿಯಬೇಕು ಎಂದರು.

ಸಂಗೀತ ಮತ್ತು ನೃತ್ಯ ವಿಭಾಗ ಮುಖ್ಯಸ್ಥ ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎ. ಶ್ರೀಧರ, ಡಾ. ಡಿ. ಮೀನಾಕ್ಷಿ, ಶಕುಂತಲಾ ಚೌಡನಾಯ್ಕ, ಸಂಗೀತ ವಿಭಾಗದ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ, ಎಲ್ಲಾ ನಿಕಾಯದ ವಿದ್ಯಾರ್ಥಿಗಳು ಇದ್ದರು. ಬಿ. ಸತೀಶ, ಜ್ಯೋತಿ ಎಂ. ನಿರ್ವಹಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.