ಸಾರಾಂಶ
ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿಯನ್ನು ಹೆಸರಾಂತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಸಹಿತ 10 ಮಂದಿ ಸಾಧಕರಿಗೆ ಸೋಮವಾರ ಪ್ರದಾನ ಮಾಡಲಾಯಿತು.
ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಕೊಡಮಾಡುವ 2025ನೇ ಸಾಲಿನ ಪ್ರತಿಷ್ಠಿತ ಸಂದೇಶ ಪ್ರಶಸ್ತಿಯನ್ನು ಹೆಸರಾಂತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಸಹಿತ 10 ಮಂದಿ ಸಾಧಕರಿಗೆ ಸೋಮವಾರ ಪ್ರದಾನ ಮಾಡಲಾಯಿತು.
ಸಂದೇಶ ಪ್ರತಿಷ್ಠಾನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಶಿವಮೊಗ್ಗದ ಬಿಷಪ್ ಫ್ರಾನ್ಸಿಸ್ ಸೆರಾವ್, ಚಿತ್ರ ನಿರ್ದೇಶಕ ನಾಗಾಭರಣ ಸೇರಿದಂತೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು.
ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ಬಿ.ಆರ್. ಲಕ್ಷ್ಮಣ ರಾವ್ (ಕನ್ನಡ), ಐರಿನ್ ಪಿಂಟೊ (ಕೊಂಕಣಿ) ಹಾಗೂ ಗಣೇಶ್ ಅಮೀನ್ ಸಂಕಮಾರ್ (ತುಳು) ಅವರಿಗೆ, ಸಂದೇಶ ಕಲಾ ಪ್ರಶಸ್ತಿಯನ್ನು ಚಿತ್ರ ನಿರ್ದೇಶಕ ಗಿರೀಶ ಕಾಸರವಳ್ಳಿ, ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಡಿ.ವಿ. ರಾಜಶೇಖರ್, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ರೋಶನ್ ಡಿಸೋಜ, ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ಯೆನೆಪೊಯ ಅಬ್ದುಲ್ಲ ಕುಂಞ್ಞಿ ಹಾಗೂ ಸಂದೇಶ ವಿಶೇಷ ಪ್ರಶಸ್ತಿಯನ್ನು ಕೆ.ವಿ. ರಾವ್ ಅವರಿಗೆ ಪ್ರದಾನ ಮಾಡಲಾಯಿತು. ಅದೇ ರೀತಿ, ಸಂದೇಶ ಗೌರವ ಪ್ರಶಸ್ತಿಯನ್ನು ಸಮಾಜ ಸೇವಕ ಮೈಕಲ್ ಡಿಸೋಜ ಅವರಿಗೆ ಹಾಗೂ ಸಂದೇಶ ವಿಶೇಷ ಯುವ ಪ್ರತಿಭಾ ಪ್ರಶಸ್ತಿಯನ್ನು ರೆಮೋನ ಇವೆಟ್ ಪಿರೇರಾ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ 25 ಸಾವಿರ ರು. ನಗದು, ಪ್ರಶಸ್ತಿ ಫಲಕ ಒಳಗೊಂಡಿತ್ತು.
ಇತ್ತೀಚೆಗೆ ಅಗಲಿದ ಹಿರಿಯ ಸಾಹಿತಿ ಡಾ.ನಾ.ಡಿಸೋಜ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಸಂದೇಶ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾಸರವಳ್ಳಿ ಅವರು ಡಾ.ನಾ. ಡಿಸೋಜ ಅವರ ಕೊಡುಗೆಗಳ ಬಗ್ಗೆ ಮಾತನಾಡಿದರು.
ಪ್ರಶಸ್ತಿ ವಿಜೇತರ ಪರವಾಗಿ ಮಾತನಾಡಿದ ಸಾಹಿತಿ ಬಿ.ಆರ್. ಲಕ್ಷ್ಮಣ್ ರಾವ್, ಸಂದೇಶ ಪ್ರತಿಷ್ಠಾನವು ಸಾಮಾಜಿಕ ಸಾಮರಸ್ಯ, ಮೌಲ್ಯಾಧಾರಿತ ಶಿಕ್ಷಣ ಮತ್ತು ಸಾಮಾಜಿಕ ಸೇವೆಯ ಮೌಲ್ಯಗಳನ್ನು ಎತ್ತಿ ಹಿಡಿಯುವುದರಿಂದ ಸಂದೇಶ ಪ್ರಶಸ್ತಿ ನನಗೆ ವಿಶೇಷವಾಗಿದೆ ಎಂದರು.
ಶಿವಮೊಗ್ಗದ ಬಿಷಪ್ ಫ್ರಾನ್ಸಿಸ್ ಸೆರಾವ್, ಚಿತ್ರ ನಿರ್ದೇಶಕ ನಾಗಾಭರಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಝಿ, ಸಂದೇಶ ಪ್ರತಿಷ್ಠಾನದ ಸಂಚಾಲಕ ಫಾ. ಸುದೀಪ್ ಪೌಲ್, ಟ್ರಸ್ಟಿ ರಾಯ್ ಕ್ಯಾಸ್ತಲಿನೋ, ಹಿರಿಯ ಸಾಹಿತಿ- ಸಂದೇಶ ಪ್ರಶಸ್ತಿ ತೀರ್ಪುಗಾರರ ಸಮಿತಿ ಅಧ್ಯಕ್ಷ ನಾ.ದಾಮೋದರ ಶೆಟ್ಟಿ ಇದ್ದರು. ಐರಿನ್ ರೆಬೆಲ್ಲೊ ನಿರೂಪಿಸಿದರು.
ಫಾ. ಐವನ್ ಪಿಂಟೋ, ಕಾನ್ಸೆಪ್ಟಾ ಫರ್ನಾಂಡಿಸ್, ರೂಪಕಲಾ ಆಳ್ವ, ಬಿ.ಎ. ಮಹಮ್ಮದ್ ಹನೀಫ್ ಇದ್ದರು.