ಸಾರಾಂಶ
ಕನ್ನಡಪ್ರಭ ವಾರ್ತೆ ಆನಂದಪುರ
ಜಗತ್ತಿನ ಎಲ್ಲಾ ಜನರಿಗೆ ಚಾರಿತ್ರ್ಯ, ನೀತಿ, ಸೌಜನ್ಯ ಕಲಿಸುವಂತಹ ಯೋಗ್ಯ ಋಷಿ ಮುನಿಗಳು ಇರುವ ದೇಶವೇ ಭಾರತ ಎಂದು ಜಂಗಮವಾಡಿ ಮಠ ಕಾಶಿ ಜ್ಞಾನ ಸಿಂಹಾಸನದೀಶ್ವರ ಶ್ರೀ 1008 ಜಗದ್ಗುರು ಡಾ.ಚಂದ್ರಶೇಖರ್ ಶಿವಾಚಾರ್ಯ ಭಗವತ್ವಾಂಗಳವರು ನುಡಿದರು.ಮುರುಘಾ ಮಠದಲ್ಲಿ ನಡೆದ ಭಾವೈಕ್ಯ ಸಮ್ಮೇಳನ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮುರುಘಾಮಠದ ಲಿಂಗ ಮಹಾಸ್ವಾಮಿ ಕಾಶಿ ವಿಶ್ವರಾಧ್ಯ ಗುರುಪೀಠದಲ್ಲಿ ಸಂಸ್ಕೃತ ಅಧ್ಯಯನ ಮಾಡಿದ ಆಧಾರದ ಮೇಲೆ ಕಾಶಿ ಪೀಠಕ್ಕೂ ಹಾಗೂ ಮುರುಘಾಮಠಕ್ಕೂ ಅವಿನಾಭಾವ ಸಂಬಂಧವಿದೆ. ಒಬ್ಬ ಯೋಗಿ ಮತ್ತು ಯೋಧನ ಸಮಾನತೆ ನೋಡಿದರೆ ಯೋಗಿ ಎಲ್ಲವನ್ನೂ ತ್ಯಾಗ ಮಾಡಿ ಯೋಗಿಯಾಗುತ್ತಾನೋ, ದೇಶದ ರಕ್ಷಣೆಗಾಗಿ ಯುದ್ಧ ಮಾಡುತ್ತಾ ಯುದ್ಧಭೂಮಿಯಲ್ಲಿ ಸಾವನ್ನಪ್ಪುವ ಯೋಧನು ಯೋಗಿಯ ಸ್ಥಾನ ಪಡೆಯಲು ಸಾಧ್ಯ ಎಂದರು.
ಧರ್ಮ, ಭಾಷೆ, ಪರಂಪರೆಯನ್ನು ಸಮಾನತೆಯಿಂದ ಕಾಣುವ ದೇಶವೇ ಭಾರತ. ಹೊರ ರಾಷ್ಟ್ರಗಳಲ್ಲಿ ಭಾರತದ ಭಾವೈಕ್ಯತೆ ನೋಡಿ ಕಲಿಯಬೇಕಾಗಿದೆ ಎಂದು ಹೇಳಿದರು.ಭಾವೈಕ್ಯ ಸಮ್ಮೇಳನ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಭಾವೈಕ್ಯ ಸಮ್ಮೇಳನಗಳು ವಿಜ್ಞಾನ ಮತ್ತು ಆಧ್ಯಾತ್ಮಿಕ ಎರಡು ಒಂದಾಗಿ ಹೆಜ್ಜೆ ಹಾಕುತ್ತವೆ. ಈ ಕಾರ್ತಿಕ ದೀಪೋತ್ಸವ ಜನರಲ್ಲಿರುವ ಅಜ್ಞಾನವನ್ನು ದೂರ ಮಾಡಿ ಜ್ಞಾನದ ಜ್ಯೋತಿಯಾಗಿ ಬೆಳಗಬೇಕಾಗಿದೆ.
ಸನಾತನ ಧರ್ಮ ಮರೆಯದೆ. ಹಿಂದೂ ರಾಷ್ಟ್ರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಭಾರತ ದೇಶದಲ್ಲಿ ಧರ್ಮ ಉಳಿದಿದೆ ಎಂದರೆ ಅದು ಮಠಮಾನ್ಯಗಳಿಂದ ಮಾತ್ರ. ಮಠದ ಪರಂಪರೆ ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಿದೆ. ಭಾರತದಲ್ಲಿ ಹಿಂದೂ ಧರ್ಮ ಬೆಳೆಸುವ ಮಠಗಳನ್ನು ನಾವು ಪ್ರೋತ್ಸಾಹಿಸೋಣ ಎಂದರು. ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿ ಮಾತನಾಡಿ, 12ನೆಯ ಶತಮಾನದಲ್ಲಿ ಬಸವಣ್ಣ ಜಾತಿ ಧರ್ಮವನ್ನು ಮರೆತು ನಾವೆಲ್ಲರೂ ಒಂದೇ ಎಂಬ ಮನೋಭಾವನ್ನು ಕಂಡವರು. ಜಾತಿ, ಭಾಷೆ, ಗಡಿ ಸೇರಿದಂತೆ ಹಲವು ವಿಚಾರವಾಗಿ ಅನೇಕ ದೇಶಗಳು ನೆಮ್ಮದಿ ಕಳೆದುಕೊಳ್ಳುತ್ತಿವೆ. ಇಡೀ ಜಗತ್ತಿನಲ್ಲಿ ಎಲ್ಲಾ ರಾಷ್ಟ್ರಗಳು ಅನುಮಾನದಿಂದ ಸಾಯುತ್ತಿವೆ ಆದರೆ ಸಮಾನತೆಯನ್ನು ಸಾರುವಂಥ ಏಕೈಕ ದೇಶ ಭಾರತವಾಗಿದೆ ಎಂದರು.
ಡಾ.ಶುಭ ಮರುವಂತೆ ವಿಶೇಷ ಉಪನ್ಯಾಸ ನೀಡಿದರು. ಸಮಾರಂಭದಲ್ಲಿ ಶಿವಮೊಗ್ಗ ಶಾಸಕ ಎಸ್. ಎನ್ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ, ಮಾಜಿ ಡಿಸಿಎಂ ಕೆ. ಎಸ್ ಈಶ್ವರಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಮ್.ಮಂಜುನಾಥ್ ಗೌಡ್ರು, ಕೆ.ಎಂ.ಎಫ್ ಅಧ್ಯಕ್ಷ ವಿದ್ಯಾಧರ್, ಕೆ.ಆರ್. ಪ್ರಕಾಶ್. ಸುಧೀಂದ್ರ, ಮಾಲಿಂಗ ಶಾಸ್ತ್ರಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿ, ಕೋಣಂದೂರು ಮಠಾಧಿಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ, ಹಾಗೂ ಕಾರ್ತಿಕ ದೀಪೋತ್ಸವ ಸಮಿತಿ ಅಧ್ಯಕ್ಷ ಕೆ.ಎಚ್ ಜ್ಞಾನೇಶ್ವರಪ್ಪ, ಕಾರ್ಯದರ್ಶಿ ಗಿರೀಶ್ ಬೇಸೂರು, ಕೋಶಾಧ್ಯಕ್ಷ ಈ. ನಾಗರಾಜ್ ನಾಯಕ್ ಉಪಸ್ಥಿತರಿದ್ದರು.ಸಾಧಕರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪರಸ್ಕೃತ ಹಸೆ ಚಿತ್ತಾರ ಕಲೆಯ ಲಕ್ಷ್ಮಿ ರಾಮಪ್ಪಅವರಿಗೆ ಮುರುಘಾ ಮಠದಲ್ಲಿ ಕೆಳದಿ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಸೇವೆ ಸಲ್ಲಿಸಿದ ಜನರಲ್ ಬಿ.ಎಸ್ ರಾಜು, ಪ್ರಕಾಶ್ ರುಕ್ಮಯ್ಯ, ಅರುಣ್ ಕುಮಾರ್, ದಿನೇಶ್ ಬರದವಳ್ಳಿ ಅವರಿಗೆ ಸಮಾಜ ಸೇವ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಸುಶೀಲಮ್ಮ ಶಿವಪ್ಪಗೌಡ, ಟೀಕಪ್ಪ, ಎಸ್. ಆರ್. ಜಿ.ಗೌರಿಶಂಕರ್, ಜಿ.ವಿ ರಾಜಯ್ಯ, ಶಿವಲಿಂಗಪ್ಪ, ಗಣೇಶ್ ಕಾಮತ್, ಮಹೇಶ್ ಮೂರ್ತಿ, ವಾಸುದೇವ್ ಅವರಿಗೆ ಗುರು ರಕ್ಷೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.