ದೇವರಬೆಳಕೆರೆಯಲ್ಲಿ ಕಾಶಿ ವಿಶ್ವಾರಾಧ್ಯರ ಮಠ ಸ್ಥಾಪಿಸಿ

| Published : May 10 2025, 01:21 AM IST

ಸಾರಾಂಶ

ದೇವರಬೆಳಕೆರೆಯ ಜಂಗಮರ ನಿವೇಶನದಲ್ಲಿಯೇ ಕಾಶಿ ವಿಶ್ವಾರಾಧ್ಯರ ಶಾಖಾ ಮಠ ಸ್ಥಾಪನೆಯಾಗಲಿ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದ್ದಾರೆ.

- ಓಂಕಾರ ಶಿವಾಚಾರ್ಯ ಶ್ರೀ ಸಲಹೆ । ಲಿಂಗೋದ್ಭವ ಮೂರ್ತಿ ಸ್ಥಾಪನೆ, ಶಿವದೀಕ್ಷೆ ಸಮಾರಂಭ

- - -

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು ದೇವರಬೆಳಕೆರೆಯ ಜಂಗಮರ ನಿವೇಶನದಲ್ಲಿಯೇ ಕಾಶಿ ವಿಶ್ವಾರಾಧ್ಯರ ಶಾಖಾ ಮಠ ಸ್ಥಾಪನೆಯಾಗಲಿ ಎಂದು ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಇಲ್ಲಿಗೆ ಸಮೀಪದ ದೇವರಬೆಳಕೆರೆಯಲ್ಲಿ ಗುರುವಾರ ರಾತ್ರಿ ನಡೆದ ಲಿಂಗೋದ್ಭವ ಮೂರ್ತಿ ಸ್ಥಾಪನೆ, ಶಿವದೀಕ್ಷಾ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು. ೧೫ ವರ್ಷಗಳ ಹಿಂದೆ ಇಲ್ಲಿ ನಿರ್ಮಿಸಿದ ಚಿಕ್ಕ ಮಠದಲ್ಲಿ ಲಿಂಗ ಉದ್ಭವವಾಗಿದೆ. ಪಕ್ಕದಲ್ಲಿನ ಜಂಗಮರ ಖಾಲಿ ನಿವೇಶನಗಳು ಇವೆ. ಇದೇ ಸ್ಥಳದಲ್ಲಿ ವಿಶ್ವಾರಾಧ್ಯರ ಶಾಖಾ ಮಠವನ್ನು ಸ್ಥಾಪನೆ ಮಾಡುವಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

ಜಂಗಮರಿಗೆ ಒಡವೆ, ವಸ್ತ್ರಗಳು ಶೋಭೆ ತರಲ್ಲ. ಪ್ರಥಮ ಧರ್ಮಾಧಿಕಾರಿಯಾಗಲು ಮತ್ತು ಸುಂದರವಾಗಿ ಕಾಣಲು ಪರೋಪಕಾರ ಮಾಡಬೇಕು. ಜಮೀನಿನಲ್ಲಿ ದುಡಿಯುವ ರೈತರು ಮತ್ತು ಗಡಿಯಲ್ಲಿನ ಯೋಧರಂತೆ ಶ್ರದ್ಧೆಯಿಂದ ಸೇವೆ ಮಾಡಿ. ಆಗ ಭಗವಂತನ ಸುಭಿಕ್ಷ ಪ್ರಾಪ್ತಿಯಾಗುತ್ತದೆ. ಸನಾತನ ಜ್ಯೋತಿಯು ಪಾಪಗಳನ್ನು ಹರಣ ಮಾಡುತ್ತದೆ. ಜತೆಗೆ ಅಂಧಕಾರ ದೂರ ಮಾಡುತ್ತದೆ. ಪರಿಪೂರ್ಣ ಸಂಸ್ಕಾರ ದೊರಕಿದಾಗ ಗುರು ಸಾನ್ನಿಧ್ಯ ಸಾಧ್ಯ ಎಂದರು.

ಗ್ರಾಮದ ಮುಖಂಡ ಕರಿಬಸಪ್ಪ ಮಾತನಾಡಿ, ಪ್ರಥಮ ಬಾರಿಗೆ ಗ್ರಾಮದಲ್ಲಿ ವಟುಗಳಿಗೆ ಶಿವದೀಕ್ಷೆ ನಡೆದಿರುವುದು ಸಂತಸ ತಂದಿದೆ. ಗ್ರಾಮದ ಅಭಿವೃದ್ಧಿಗೆ ಕ್ರಿಯಾಶೀಲವಾಗಿ ತೊಡಗಿಕೊಳ್ಳದ ಯುವಜನರಲ್ಲಿನ ದುಶ್ಚಟಗಳು ಬೇಸರ ಸಂಗತಿ ಎಂದರು.

ಬುಕ್ಕಸಾಗರ ಸಂಸ್ಥಾನದ ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಂಗಮ ಮುಖಂಡರಾದ ಗುರುಸ್ವಾಮಿ, ಕರಿಸಿದ್ದಯ್ಯ ಮಾತನಾಡಿದರು. ಸುಭಾಸ್ ಚಂದ್ರಯ್ಯ ಶಾಸ್ತ್ರಿ, ರೇವಣಸಿದ್ದಯ್ಯ ಹಾಗೂ ಅನೇಕ ಜಂಗಮರು 2 ದಿನಗಳ ಪೂಜಾ ವಿಧಿಗಳನ್ನು ನೆರವೇರಿಸಿದರು.

೩೫ ಜಂಗಮ ವಟುಗಳು ಶಿವದೀಕ್ಷೆಗೆ ಹೆಸರು ನೋಂದಾಯಿಸಿದರು. ಭವಾನಿ, ಇಂಚರ ಪ್ರಾರ್ಥಿಸಿದರು. ಆರಂಭದಲ್ಲಿ ವಿಶ್ವಾರಾಧ್ಯರ ಮೂರ್ತಿಯನ್ನು ಭಕ್ತರು ಪ್ರಮುಖ ಬೀದಿಗಳಲ್ಲಿ ಸಾರೋಟಿನಲ್ಲಿ ಮೆರವಣಿಗೆ ಮಾಡಿ, ಸಂಭ್ರಮಿಸಿದರು. ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

- - - -೯ಎಂಬಿಆರ್೧:

ಓಂಕಾರ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕರಿಬಸಪ್ಪ ಇತರರು ಇದ್ದರು.