ಕಟ್ಟೆಮಾಡು ಪ್ರಕರಣ: ಸಂಘಟನೆಗಳ ಪ್ರಮುಖರ ಸಭೆ

| Published : Dec 30 2024, 01:02 AM IST

ಸಾರಾಂಶ

ಗೌಡ ಸಂಘಟನೆಗಳ ಪ್ರಮುಖರು ನಗರದಲ್ಲಿ ಸಭೆ ನಡೆಸಿದರು. ಸುಮಾರು 500ಕ್ಕೂ ಅಧಿಕ ಮಂದಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಟ್ಟೆಮಾಡು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಗೌಡ ಸಮಾಜಗಳ ಹಾಗೂ ಗೌಡ ಸಂಘಟನೆಗಳ ಪ್ರಮುಖರು ಕೊಡಗು ಗೌಡ ಸಮಾಜ ಭಾನುವಾರ ನಗರದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಪಾಲ್ಗೊಂಡು ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಮಡಿಕೇರಿ ತಾಲೂಕು ಕಟ್ಟೆಮಾಡು ಗ್ರಾಮದಲ್ಲಿ ಒಂದು ವರ್ಷದ ಹಿಂದೆ ನೂತನವಾಗಿ ನಿರ್ಮಾಣಗೊಂಡ ಮಹಾ ಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಪ್ರಥಮ ವಾರ್ಷಿಕ ಉತ್ಸವ ನಡೆದು ಪೂಜಾ ಕಾರ್ಯ ಅಂತಿಮ ಹಂತದಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ದೇವಸ್ಥಾನದ ಕಟ್ಟುಪಾಡುಗಳನ್ನು ಹಾಗೂ ಶ್ರೀ ಕ್ಷೇತ್ರ ನಿರ್ಮಾಣ ಸಂದರ್ಭ ಸರ್ವ ಭಕ್ತಾದಿಗಳ ಸಮ್ಮತಿ ಮೇಲೆ ಅಳವಡಿಸಿ ಆಚರಣೆಯಲ್ಲಿದ್ದ ಬೈಲಾದ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಕಾಲ ದೇವರ ಮೂರ್ತಿಯನ್ನು ಜಳಕಕ್ಕೆ ಕೊಂಡೊಯ್ಯುವುದನ್ನು ಅಡ್ಡಿಪಡಿಸಿ, ದೇವಸ್ಥಾನದ ಒಳಗೆ ಜಾತಿ ವೈಷಮ್ಯ ಹುಟ್ಟುಹಾಕುವ ಈ ಕೃತ್ಯವನ್ನು ಕೊಡಗಿನ ಸಮಸ್ತ ಗೌಡ ಜನಾಂಗದವರು ಖಂಡಿಸಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು.

ಸೋಮವಾರ ಸುಮಾರು ಒಂದು ಸಾವಿರಕ್ಕಿಂತ ಮೇಲ್ಪಟ್ಟ ಭಕ್ತಾದಿಗಳು ಜಾತಿ ಭೇದವಿಲ್ಲದೆ ಶ್ರೀ ಮಹಾ ಮೃತ್ಯುಂಜಯ ಮಹಾದೇಶ್ವರ ಕ್ಷೇತ್ರದಲ್ಲಿ ಪ್ರತಿ ಸೋಮವಾರ ಕ್ಷೇತ್ರದ ವತಿಯಿಂದ ಜರುಗುವ ಮೃತ್ಯುಂಜಯ ಹೋಮ ಹಾಗೂ ಪೂಜಾ ಕಾರ್ಯಕ್ಕೆ ಖುದ್ದು ಭಾಗವಹಿಸುವಂತೆ ಈ ದಿವಸ ನಿರ್ಣಯ ಕೈಗೊಳ್ಳಲಾಯಿತು.

ಈ ಘಟನೆಯ ನಂತರ ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೀಳು ಶಬ್ದಗಳಿಂದ ಬರೆದಿರುವುದನ್ನು ಹಾಗೆಯೇ ದೇವಸ್ಥಾನದ ಆವರಣದಲ್ಲಿ ಕೊಡವ ಸಾಂಪ್ರದಾಯಿಕ ದಿರಿಸಿನಲ್ಲಿ ಬಂದ ವ್ಯಕ್ತಿಯೊಬ್ಬ ಭಕ್ತಾದಿಗಳಿಗೆ ಮಾರಕಾಸ್ತ್ರ ತೋರಿಸಿ ಕ್ಷೇತ್ರವನ್ನು ಅವಮಾನ ಮಾಡಿದ ಅಮಾನುಷ ಘಟನೆಯನ್ನು ಖಂಡಿಸಿ ಈ ಬಗ್ಗೆ ಸೂಕ್ತ ಕಾನೂನು ಕ್ರಮವನ್ನು ಜಿಲ್ಲಾಡಳಿತ ಕೈಗೊಳ್ಳುವಂತೆ ಸಭೆ ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಯಿತು.

ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಕೆಟ್ಟದಾಗಿ ಗೌಡರನ್ನು ಮತ್ತು ಕನ್ನಡವನ್ನು ನಿಂದಿಸಿದ ಎಲ್ಲ ದುಷ್ಕರ್ಮಿಗಳ ದೂರು ದಾಖಲು ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಲಾಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಗೌಡ ಜನಾಂಗವನ್ನು ಅಶ್ಲೀಲ ಶಬ್ದಗಳಿಂದ ಜರಿಯುವ ಹವ್ಯಾಸವನ್ನು ಮುಂದುವರಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಗೌಡ ಜನಾಂಗದ ವ್ಯಕ್ತಿಗಳು ಹಾಗೂ ಸಂಘಟನೆಗಳು ತಕ್ಕ ಉತ್ತರ ನೀಡಲು ನಿರ್ಣಯ ಕೈಗೊಳ್ಳಲಾಯಿತು.

ಮುಂದಿನ ದಿನಗಳಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡ ಮತ್ತು ಜನಾಂಗದ ಇತರ ಪ್ರಮುಖರ ಬಗ್ಗೆ ಕೆಟ್ಟದಾಗಿ ಮಾತನಾಡಿದಲ್ಲಿ ಸೂಕ್ತ ಪ್ರತ್ಯುತ್ತರ ಮತ್ತು ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಗೌಡ ಜನಾಂಗದ ಎಲ್ಲ ಪ್ರಮುಖರು ಸಭೆಯಲ್ಲಿ ಹಾಜರಿದ್ದರು.