ಕಾವೇರಿ ನೀರು ಬಿಡುಗಡೆಗೊಳಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಕರ್ನಾಟಕ, ತಮಿಳುನಾಡು ಅರ್ಜಿಯನ್ನು ತಿರಸ್ಕರಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.
ನವದೆಹಲಿ : ಕಾವೇರಿ ನೀರು ಬಿಡುಗಡೆಗೊಳಿಸಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿರುವ ಕರ್ನಾಟಕ, ತಮಿಳುನಾಡು ಅರ್ಜಿಯನ್ನು ತಿರಸ್ಕರಿಸುವಂತೆ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.
ಜು. 30ರ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ (ಸಿಡ್ಲ್ಯುಎಂಎ) ಆದೇಶಕ್ಕಿಂತ ಹೆಚ್ಚು ನೀರನ್ನು ಈಗಾಗಲೇ ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. 15 ದಿನಗಳ ಅವಧಿಯಲ್ಲಿ 45,500 ಕ್ಯುಸೆಕ್ ನೀರು ಬಿಡುಗಡೆಗೆ ಪ್ರಾಧಿಕಾರ ಸೂಚಿಸಿತ್ತು. ಆದರೆ, ಕರ್ನಾಟಕ 13 ದಿನಗಳ ಅವಧಿಯಲ್ಲಿ 86,797 ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಿದೆ. ಅಲ್ಲದೆ, ಆ.11ರಂದು ಪ್ರಾಧಿಕಾರ ನೀಡಿರುವ ಆದೇಶ ಪ್ರಶ್ನಿಸಿ, ಸುಪ್ರೀಂಕೋರ್ಟ್ ಮುಂದೆ ಪ್ರತ್ಯೇಕ ಅರ್ಜಿ ಹಾಕಲಾಗುವುದು. ತಮಿಳುನಾಡಿನ ಮನವಿ ಕಲ್ಪಿತವಾಗಿದ್ದು, ಅರ್ಜಿಯನ್ನು ವಜಾ ಮಾಡಿ ಎಂದು ಕರ್ನಾಟಕ ಮನವಿ ಮಾಡಿದೆ.
ಅಲ್ಲದೆ, ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಬಿಳಿಗುಂಡ್ಲು ಬಳಿ ಈಗಾಗಲೇ ಗಂಟೆಗೊಮ್ಮೆ ನೀರು ಹರಿಯುವಿಕೆಯ ಮಾಪನ ಮಾಡುತ್ತಿದೆ. ಹೀಗಾಗಿ, ಈ ಬಗ್ಗೆ ಪ್ರತ್ಯೇಕ ನಿರ್ವಹಣೆ ಮಾಡುವುದು ಅನಗತ್ಯ ಎಂದು ಕರ್ನಾಟಕ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಕಾವೇರಿ ವಿವಾದ: ತ.ನಾಡು ಅರ್ಜಿ ವಿಚಾರಣೆ ಆ.17ಕ್ಕೆ ಮುಂದೂಡಿಕೆ:
ತಮಿಳುನಾಡಿಗೆ ತಕ್ಷಣವೇ ಕಾವೇರಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರ್ಕಾರ, ಡಿಎಂಕೆ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಆ.17ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಬುಧವಾರ ತಿಳಿಸಿದೆ. ಈ ಹಿಂದೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಯಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠವು ಈ ಅರ್ಜಿಯ ವಿಚಾರಣೆಯನ್ನು ಆ.13ರಂದು ನಡೆಸುವುದಾಗಿ ಹೇಳಿತ್ತು.
ಆದರೆ ಬುಧವಾರ ಕೆಲವು ರೈತರ ಪರವಾಗಿ ಹಿರಿಯ ವಕೀಲ ಪಿ. ವಿಲ್ಸನ್ ಅವರು ಪ್ರತ್ಯೇಕ ಅರ್ಜಿಯೊಂದನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡುವಂತೆ ಕೋರಿದರು. ಈ ವೇಳೆ ಪ್ರತಿಕ್ರಿಯಿಸಿದ ಮು. ನ್ಯಾ. ಸೂರ್ಯಕಾಂತ್, ‘ಈ ವಿಷಯವು ನ್ಯಾ. ವಿಕ್ರಮ್ ನಾಥ್ ಅವರ ಪೀಠದ ಮುಂದೆ ಬರಬೇಕಿತ್ತು. ಆದರೆ ಅವರ ಆರೋಗ್ಯ ಸರಿ ಇಲ್ಲದ ಕಾರಣ ಮುಂದೂಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.ಸುಪ್ರೀಂ ತೀರ್ಪು ಆಧರಿಸಿ ಕಾವೇರಿ ಮುಂದಿನ ನಡೆ:
ಕಾವೇರಿ ನೀರು ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಆ. 17ರಂದು ನಡೆಯಲಿದೆ. ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಆಧರಿಸಿ ಮುಂದೆ ಕೈಗೊಳ್ಳಬಹುದಾದ ಕ್ರಮಗಳನ್ನು ನಿರ್ಧರಿಸುತ್ತೇವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯುಸೆಕ್ ಕಾವೇರಿ ನೀರು ಹರಿಸುವಂತೆ ಸಿಡಬ್ಲ್ಯುಎಂಎ ಮತ್ತು ಸಿಡಬ್ಲ್ಯುಆರ್‌ಸಿ ಆದೇಶಿಸಿವೆ. ಆದರೆ, ಮಳೆ ಕೊರತೆಯಿಂದ ಕಾವೇರಿ ನೀರಿನ ಕೊರತೆಯಿದೆ. ಹೀಗಾಗಿ ಮುಂದಿನ ಕ್ರಮಗಳ ಕುರಿತಂತೆ ಸಿಎಂ ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಲಾಗಿದೆ. ನೀರು ಹರಿಸುವ ವಿಚಾರವಾಗಿ ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ನಮ್ಮ ಪರವಾಗಿ ತೀರ್ಪು ಬರದಿದ್ದರೆ ಮೇಲ್ಮನವಿ ಸಲ್ಲಿಸಲು ನಮಗೆ ಅವಕಾಶವಿದೆ. ಮುಂದೆ ಏನು ಮಾಡಬೇಕು ಎಂಬುದನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ 16 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವುದು ಕಷ್ಟ. ಮಲೆನಾಡು ಹೊರತುಪಡಿಸಿದರೆ ಬೇರೆಡೆ ಸರಿಯಾಗಿ ಮಳೆಯಾಗಿಲ್ಲ. ಮುಂಗಾರು ಕೈ ಕೊಟ್ಟಿದೆ. ಈ ಹಿಂದೆ ಪ್ರತಿದಿನ 3 ಸಾವಿರ ಕ್ಯುಸೆಕ್ ನೀರು ಬಿಡಬೇಕು ಎಂದು ಆದೇಶಿಸಲಾಗಿತ್ತು. ಅದರಿಂದ ಯಾವುದೇ ಸಮಸ್ಯೆ ಇರಲಿಲ್ಲ. ನಮ್ಮ ಅಧಿಕಾರಿಗಳು ಮತ್ತು ವಕೀಲರು ಸಮರ್ಥವಾಗಿ ವಾದ ಮಾಡಿದ್ದರೂ ನಮಗೆ ಅನ್ಯಾಯವಾಗಿದೆ ಎಂದು ತಿಳಿಸಿದರು.ಜಲಸಂಪನ್ಮೂಲ ಸಚಿವರಿಗೆ ಇಲಾಖೆ ಬಗ್ಗೆ ಮಾಹಿತಿಯಿಲ್ಲ ಎಂಬ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ತಮಗೆ ನೀರಾವರಿ ವಿಚಾರವಾಗಿ ಎಷ್ಟು ಜ್ಞಾನವಿದೆ ಎಂಬ ಬಗ್ಗೆ ಕುಮಾರಸ್ವಾಮಿ ಅವರು ಚರ್ಚೆಗೆ ಬರಲಿ. ಅವರು ರಾಜಕಾರಣಕ್ಕಾಗಿ ಮಾತನಾಡುತ್ತಾರೆ ಅಷ್ಟೇ ಎಂದು ಹೇಳಿದರು.
ತ.ನಾಡಿಗೆ ನೀರು ಬಿಡುಗಡೆ ಆದೇಶ ಖಂಡಿಸಿ ರೈತರಿಂದ ಪ್ರತಿಭಟನೆ
ಬೆಂಗಳೂರು : ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್‌ನಂತೆ 15 ದಿನಗಳವರೆಗೆ ನೀರು ಹರಿಸುವಂತೆ ಸಿಡಬ್ಲ್ಯೂಆರ್‌ಸಿ ನೀಡಿರುವ ಆದೇಶ ಖಂಡಿಸಿ ಹಾಗೂ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ಒತ್ತಾಯಿಸಿ ರೈತರು ಹಾಗೂ ವಿವಿಧ ಸಂಘಟನೆಗಳು ಕಾವೇರಿ ಕೊಳ್ಳದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು.
ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸಿದ ರೈತ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸಬಾರದು ಎಂದು ಒತ್ತಾಯಿಸಿದರು. ರೈತ ಸಂಘ, ಕನ್ನಡ ಸಂಘಟನೆಗಳ ಕಾರ್‍ಯಕರ್ತರು ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಅರೆಬೆತ್ತಲೆ ಪ್ರತಿಭಟನೆ, ರಸ್ತೆ ತಡೆ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ, ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಪ್ರಾಧಿಕಾರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಮೈಸೂರಿನ ಅಶೋಕ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಕಾವೇರಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ತಮಿಳುನಾಡು ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಕಾಡಾ ಕಚೇರಿ ಎದುರು ರೈತ ಸಂಘದ ಪದಾಧಿಕಾರಿಗಳಿಂದ ಪ್ರತಿಭಟನೆ ನಡೆಯಿತು. ಇದೇ ವೇಳೆ, ಚಾಮರಾಜನಗರ, ರಾಮನಗರ ಸೇರಿ ಇತರೆಡೆಯೂ ಪ್ರತಿಭಟನೆಗಳು ನಡೆದವು.
ಬಿಜೆಪಿ ಕಾರ್ಯಕರ್ತರು ನಗರದ ಕಾವೇರಿ ಭವನದ ಬಳಿ ಇರುವ ಕಾವೇರಿ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಅಪ್ಪಿಕೋ ಚಳವಳಿ ನಡೆಸಿದರು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡದಂತೆ ರಾಜ್ಯದ ಮುಖ್ಯಮಂತ್ರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಕಾಳಿಕಾಂಬ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಂದ ನಿಂಬೆ ಹಣ್ಣಿನಿಂದ ಡಿಕೆಶಿ ಭಾವಚಿತ್ರಕ್ಕೆ ಇಳಿ ತೆಗೆದು, ಆದೇಶ ಪಾಲನೆ ಮಾಡದಂತೆ ಒತ್ತಾಯಿಸಿದರು.
