ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ವಿಕ್ರಾಂತ್ ಕಾರ್ಖಾನೆಯ ನಿವೃತ್ತ ಕಾರ್ಮಿಕರಾದ ಆರ್. ರಂಗಸ್ವಾಮಿ ಶಾಂತಾ ಅವರ ''''''''ಕಾವ್ಯ ಸುರಭಿ'''''''' ಕವನ ಸಂಕಲನವನ್ನು ಭಾರತಿ ಪ್ರಕಾಶನ ಪ್ರಕಟಿಸಿದೆ. ಇದು ಅವರ ಕಾವ್ಯ ಪ್ರೀತಿಯ ಪ್ರತೀಕವಾಗಿದೆ.ಪ್ರೌಢಶಾಲೆಯಲ್ಲಿ ಓದುವಾಗಲೇ ಕನ್ನಡ ಮಾಸ್ತರರಾದ ಶ್ರೀಕಂಠಯ್ಯ ಪಿಯುಸಿ ಓದುವಾಗ ಪೊನ್ನಪ್ಪ, ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಓದುವಾಗ ಪ್ರೊ.ಸುಜನಾ, ಡಾ.ಪಿ.ಕೆ.ರಾಜಶೇಖರ್ ಅವರಲ್ಲದೇ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅವರ ಮಾತುಗಳಿಂದ ಪ್ರಭಾವಿತರಾಗಿ ಕಾವ್ಯಕೃಷಿಗೆ ಇಳಿದ ರಂಗಸ್ವಾಮಿ ಅವರು ವೃತ್ತಿಯ ಜೊತೆಗೆ ಪ್ರವೃತ್ತಿಯನ್ನು ಮುಂದುವರಿಸಿಕೊಂಡು ಬಂದವರು. ನಿವೃತ್ತಿಯ ನಂತರ ಮೊದಲ ಸಂಕಲನ ಹೊರತಂದಿದ್ದಾರೆ.
ಬೆನಕನಿಗೆ ವಂದಿಸುವೆವು, ಓ ದೇವ ನಿನ್ನ ರೂಪಾ ನಾನಾತರ, ಭಗವಂತನು ಯಾರು?. ತೀರ್ಥಯಾತ್ರೆ- ಹೀಗೆ ಸಾಕಷ್ಟು ಕವನಗಳನ್ನು ರಚಿಸಿರುವ ಅವರು, ನನ್ನೂರು ಕವನದಲ್ಲಿ ಸವದತ್ತಿ ಎಲ್ಲಮ್ಮ, ಕೊಲ್ಲಾಪುರದ ಮಹಾಲಕ್ಷ್ಮೀ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಮುಡುಕುತೊರೆ ಶ್ರೀ ಮಲ್ಲಿಕಾರ್ಜುನ, ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಬಲ್ಲೇನಹಳ್ಳಿ, ಗೊರವನಹಳ್ಳಿ, ಬಲಮುರಿ, ಮೈಸೂರು, ಚಿತ್ರದುರ್ಗ ಸ್ಥಳಗಳನ್ನು, ರಾಜರು ಹಾಗೂ ಪಾಳೇಗಾರರನ್ನು ಸ್ಮರಿಸಿದ್ದಾರೆ.ತಾಯಿ ನಿಂಗಮ್ಮ ರಂಗಯ್ಯ, ಪತ್ನಿ ಎಂ. ಮಾದಮ್ಮ ಶಾಂತಾ ಅವರ ನೆನಪಿನಲ್ಲಿಯೇ ನಾವು ಮಾನವರು, ಅನಾಥರಲ್ಲ ನಾವು, ಪರೋಪಕಾರಿಗಳು ನಾವು, ಯಾರೂ ನೆನೆಯರು, ವಿಶ್ರಾಂತಿಧಾಮ, ತಾಯಿ- ತಂದೆ- ಗುರು, ನನ್ನಮ್ಮನ ಅರಿವು, ನನ್ನವ್ವ, ಕಾಮಧೇನು, ನಾನೆಂತು ತೀರಿಸಲಿ ಈ ಋಣಭಾರ?, ಗರ್ಭದ ಶಿಶು ಮೊದಲಾದ ಕವನಗಳನ್ನು ರಚಿಸಿದ್ದಾರೆ.
ಕನ್ನಡಪ್ರೇಮ, ಕನ್ನಡಾಂಬೆ, ಇದೇ ಇದೇ ಕನ್ನಡ, ಪ್ರಕೃತಿ ಪರಿಸರ, ಕಾಡುಮಲ್ಲಿಗೆ, ನಿರ್ಜನವಾಗಿ ಉಳಿಯುವುದೇ ಭೂಮಿ, ಪ್ರಕೃತಿ- ಜೀವಪಥ, ಪ್ರಾಣಿಗಳೇ ಮೇಲು, ಪ್ರೀತಿ- ಪ್ರೇಮ- ಪ್ರಣಯ... ಹೀಗೆ ಸಮಾಜದ ಎಲ್ಲಾ ಆಗುಹೋಗುಗಳನ್ನು ಗಮನಿಸಿ, 92 ಕವನಗಳನ್ನು ರಚಿಸಿದ್ದಾರೆ. ಕವನಗಳಲ್ಲಿ ಅವರ ದೃಷ್ಟಿಕೋನ, ವಾಸ್ತವತೆ, ಕಲ್ಪನಾಲಹರಿ ಎದ್ದು ಕಾಣಿಸುತ್ತದೆ.ಡಾ.ಎಚ್.ಎ. ಪಾಶ್ವನಾಥ್ ಅವರ ಸುದೀರ್ಘ ಮುನ್ನುಡಿ ಇದೆ. ಡಿ. ಈರೇಶ್ ನಗರ್ಲೆ ಅವರು ಕವಿಪರಿಚಯ ಬರೆದಿದ್ದಾರೆ. ಆಸಕ್ತರು ಆರ್. ರಂಗಸ್ವಾಮಿ ಶಾಂತಾ, ಮೊ. 82172 44134, ಬಿ.ಎನ್. ಶ್ರೀನಿವಾಸ್, ಭಾರತೀ ಪ್ರಕಾಶನ, ಮೊ. 94484 13188 ಸಂಪರ್ಕಿಸಬಹುದು.