ಸಾರಾಂಶ
ಶ್ರೀನಿವಾಸ ಬಬಲಾದಿ
ಕನ್ನಡಪ್ರಭ ವಾರ್ತೆ ಲೋಕಾಪುರಜನತೆ ತಾವು ಅನುಭವಿಸುತ್ತಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ತಮ್ಮ ಜನಪ್ರತಿನಿಧಿಗಳಿಗೆ ಹೇಳಲಾಗದಂತ ಪರಸ್ಥಿತಿ ಲೋಕಾಪುರದಲ್ಲಿ ನಿರ್ಮಾಣವಾಗಿದೆ. ಕಾರಣ ಜನಪ್ರತಿನಿಧಿಗಳ ಆಯ್ಕೆಯೇ ಇದುವರೆಗೆ ಆಗಿಲ್ಲ. ಹೀಗಾಗಿ ಲೋಕಾಪುರ ಪಟ್ಟಣ ಪಂಚಾಯಿತಿ ಈಗ ಅಧಿಕಾರಿಗಳದ್ದೇ ಸಾಮ್ರಾಜ್ಯವಾಗಿದೆ.
ಕ್ಷೇತ್ರದ ವ್ಯಾಪ್ತಿ, ಜನಸಂಖ್ಯೆ, ಅಭಿವೃದ್ಧಿಯ ವೇಗ, ವ್ಯಾಪಾರ ವಹಿವಾಟು ಸೇರಿದಂತೆ ಹಲವಾರು ಮಾನದಂಡಗಳ ಆಧಾರದ ಮೇಲಿಂದ ಲೋಕಾಪುರವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯತಿಗೆ ಮೇಲ್ದರ್ಜೆಗೇರಿಸಿ ಮೂರುವರೇ ವರ್ಷಗಳು ಕಳೆದಿವೆ. ಆದರೂ ಪಪಂ ಚುನಾವಣೆ ನಡೆದಿಲ್ಲ. ಇದರಿಂದಾಗಿ ಪಟ್ಟಣದಲ್ಲಿರುವ ರಸ್ತೆ, ಚರಂಡಿ ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಕುಡಿಯುವ ನೀರು, ಉರಿಯದ ಬೀದಿ ದೀಪಗಳು ಮೂಲಭೂತ ಸೌರ್ಕಯಗಳ ಸಮಸ್ಯೆಗಳನ್ನು ಜನರು ಯಾರ ಮುಂದೆ ಹೇಳಿಕೊಳ್ಳಬೇಕು. ಅಗತ್ಯ ದಾಖಲೆಗಳು ಕೂಡ ಬೇಕಾದರೆ ಯಾರ ಮುಂದೆ ಹೋಗಿ ಕೇಳಬೇಕು ಎಂಬ ಚಿಂತೆ ಜನರನ್ನು ಬಾಧಿಸುತ್ತಿದೆ.ಇಷ್ಟೊತ್ತಿಗೆ ರಾಜ್ಯ ಸರ್ಕಾರವು ಪಪಂ ಚುನಾವಣೆಯನ್ನು ನಡೆಸಿ ಸ್ಥಳೀಯ ಆಡಳಿತ ರಚನೆಯನ್ನು ಮಾಡಬೇಕಿತ್ತು. ಆದರೆ, ಇನ್ನೂ ಸರ್ಕಾರ ಇಚ್ಚಾಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಇದರಿಂದಾಗಿಯೇ ಇನ್ನೂ ಪಪಂಗೆ ಚುನಾವಣೆ ನಡೆದಿಲ್ಲ. ಇದರಿಂದ ಸಹಜವಾಗಿ ಚುನಾಯಿತ ಪ್ರತಿನಿಧಿಗಳನ್ನು ಒಳಗೊಂಡ ಪಟ್ಟಣ ಪಂಚಾಯಿತಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಅಭಿವೃದ್ಧಿಗೂ ಪರೋಕ್ಷವಾಗಿ ಹಿನ್ನಡೆಯಾಗುತ್ತಿದೆ. ಸಹಜವಾಗಿ ಪಟ್ಟಣದಲ್ಲಿ ವಿವಿಧ ಸಮಸ್ಯೆಗಳು ತಲೆದೊರಿವೆ. ಮಾತ್ರವಲ್ಲ, ವಿವಿಧ ಕೆಲಸಗಳಾಗದೇ ಜನರು ಕೂಡ ಕಷ್ಟ ಅನುಭವಿಸುವಂತಾಗಿದೆ. ಗ್ರಾಪಂ ಇದ್ದರೆ ಚನ್ನಾಗಿತ್ತು ಎಂಬ ಭಾವ ಕೂಡ ಜನರಲ್ಲಿ ಮೂಡುತ್ತಿದೆ.
ಖಾಲಿ ಬಿದ್ದ ಮಳಿಗೆಗಳು:ಪಟ್ಟಣದಲ್ಲಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ವಾಣಿಜ್ಯ ಮಳಿಗೆಗಳು ನಿರ್ಮಿಸಲಾಗಿದೆ. ಆದರೆ ಏನೂ ಪ್ರಯೋಜನಕ್ಕೆ ಬರುತ್ತಿಲ್ಲ. ಕಾರಣ ಅವುಗಳು ನಿರ್ಮಾಣಗೊಂಡರೂ ಅವುಗಳನ್ನು ಇದುವರೆಗೆ ಬಾಡಿಗೆಗೆ ನೀಡಲು ಟೆಂಡರ್ ಕೂಡ ಕರೆದಿಲ್ಲ. ಹೀಗಾಗಿ ಅವು ಹಾಗೆ ಉಳಿದಿವೆ. ಇನ್ನು ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ ಕುಂಟುತ್ತಾ ಸಾಗಿದೆ. ಜೊತೆಗೆ ನಿರಂತರ ಕುಡಿಯುವ ನೀರು ಬಾರದೇ ಜನರು ಕಂಗಾಲಾಗುವಂತಾಗಿದೆ.
ಹೆದ್ದಾರಿ ಪಕ್ಕದ ಚರಂಡಿ ಇಲ್ಲದೇ ನೀರು ಮುಂದೆ ಹೋಗದೆ ಗಬ್ಬೆದ್ದು ನಾರುವ ಪರಿಸ್ಥಿತಿ ಉದ್ಭವವಾಗಿದೆ. ಕಳೆದ ಮೂರು ವರ್ಷಗಳಿಂದ ಅಧಿಕಾರಿಗಳ ಆಡಳಿತವೇ ಇದೆ. ಜನಪ್ರತಿನಿಧಿಗಳ ಆಡಳಿತವಾಗಿದ್ದರೆ ಬಹುತೇಕ ಹೋರಾಟ, ಆರೋಪ ಪ್ರತ್ಯಾರೋಪದ ನಡುವೆಯೂ ಆಡಳಿತಕ್ಕೆ ಚುರುಕು ನೀಡಬಹುದಾಗಿತ್ತು. ಆದರೆ, ಅದ್ಯಾವುದೂ ಆಗಿಲ್ಲ. ಹೀಗಾಗಿ ಲೋಕಾಪುರ ಪಪಂನಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಇದರ ನಡುವೆ ಪಪಂ ಕಚೇರಿಯಲ್ಲಿ ಕೆಲಸ ಮಾಡಲು ಪೂರ್ಣ ಪ್ರಮಾಣದ ಸಿಬ್ಬಂದಿ ಸಮಸ್ಯೆ ಕೂಡ ಇದೆ. ಇತ್ತ ಪಟ್ಟಣ ಪಂಚಾಯತ ಸದಸ್ಯರೂ ಇಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಉಂಟಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಸರ್ಕಾರ ಬೇರೆ ಬೇರೆ ಪಪಂ ಚುನಾವಣೆಯನ್ನು ಘೋಷಣೆ ಮಾಡಿವೆ. ಆದರೆ ಲೋಕಾಪುರ ಪಟ್ಟಣ ಪಂಚಾಯತಿಗೆ ಮಾತ್ರ ಸಕಾಲಕ್ಕೆ ಚುನಾವಣೆ ನಡೆದಿಲ್ಲ. ಹೀಗಾಗಿ ಸದಸ್ಯರಿಲ್ಲದೆ ಸಕಾಲಕ್ಕೆ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ನಾಲ್ಕು ವರ್ಷಗಳ ಹಿಂದೆ, ೩೧ ಡಿಸೆಂಬರ್ ೨೦೨೦ ರಂದು ಲೋಕಾಪುರ ಅಭಿವೃದ್ಧಿ ಹಿತದೃಷ್ಟಿಯಿಂದ ಗ್ರಾಪಂ ಅನ್ನು ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ವಾರ್ಡ್‌ಗಳ ನಿಗದಿ ಆಗಿದ್ದು ಬಿಟ್ಟು, ವಿಂಗಡನೆ, ಮೀಸಲಾತಿ, ಮತದಾರರ ಪಟ್ಟಿ ಸಿದ್ದತೆ ಸೇರಿದಂತೆ ಹಲವಾರು ಕಾರಣಗಳಿಂದಾಗಿ ಚುನಾವಣೆ ಘೋಷಣೆಯಾಗಿಲ್ಲ.
--------------ಕೋಟ್....
ಹಿಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳರ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗೆ ಮೇಲ್ದರ್ಜೆಗೆ ಏರಿಸಲಾಗಿತ್ತು. ಹೊಸ ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾದರೂ ಇದರ ಬಗ್ಗೆ ಗಮನ ಹರಿಸಿಲ್ಲ. ಪಟ್ಟಣ ಪಂಚಾಯಿತಿ ಚುನಾವಣೆಯನ್ನು ಘೋಷಣೆ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಬಗೆಹರಿಸಬೇಕು.- ಲೋಕಣ್ಣ ಭೀ ಕತ್ತಿ, ಗ್ರಾಪಂ ಮಾಜಿ ಅಧ್ಯಕ್ಷ, ಲೋಕಾಪುರ.
ಕೋಟ್...ಸರ್ಕಾರಕ್ಕೆ ಈ ಬಗ್ಗೆ ವರದಿಯನ್ನು ಕಳಿಸಿದ್ದೇವೆ. ಸರ್ಕಾರದ ಆದೇಶ ಬಂದ ನಂತರ ಚುನಾವಣೆಯ ಪ್ರಕ್ರಿಯೆಗೆ ಕ್ರಮ ವಹಿಸಲಾಗುವುದು.
- ಬಿ.ವೈ. ಸುರಕೋಡ, ಯೋಜನಾ ನಿರ್ದೇಶಕರು,ಜಿಲ್ಲಾ ನಗರಾಭಿವೃದ್ಧಿ ಕೋಶ, ಬಾಗಲಕೋಟೆ
-----------೪-ಎಲ್.ಕೆ.ಪಿ-೧ : ಲೋಕಾಪುರ ಪಟ್ಟಣ ಪಂಚಾಯಿತಿ