ಕನ್ನಡಪ್ರಭ ವಾರ್ತೆ ಶಿರಸಿ

ಜಿಲ್ಲೆಯ ಪ್ರತಿಷ್ಠಿತ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಬ್ಯಾಂಕ್ 2025-26ನೇ ಸಾಲಿನಲ್ಲಿ ₹27.35 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಶುಕ್ರವಾರ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಬ್ಯಾಂಕಿನ ಶೇರು ಬಂಡವಾಳವು ₹145.11 ಕೋಟಿಗಳಿಂದ ₹156.85 ಕೋಟಿಗಳಿಗೆ ಏರಿಕೆ ಕಂಡಿದೆ. ನಿಧಿಗಳು ₹351.44 ಕೋಟಿ ಗಳಿಂದ ₹382.37ಕೋಟಿಗಳಾಗಿವೆ. ಟೀವುಗಳು ₹3569.45ಕೋಟಿಗಳಿಂದ 4191.41 ಕೋಟಿಗೆ ಏರಿಕೆಯಿಗಿದೆ.

ಒಟ್ಟೂ ಆದಾಯ ₹ 411.27 ಕೋಟಿಗಳಿಗಿದೆ. ಸಾಲ ಬಾಕಿ ₹3384.85 ಕೋಟಿಗಳಿದ್ದು, ದುಡಿಯುವ ಬಂಡವಾಳ ₹5269.46 ಕೋಟಿ ತಲುಪಿದೆ ಎಂದರು.

ಪ್ರಸಕ್ತ ವರ್ಷಕ್ಕೆ ಸಂಬಂಧಿಸಿದಂತೆ ಕೆಡಿಸಿಸಿ ಬ್ಯಾಂಕ್ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲಗಳನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೀಡಿ ತನ್ಮೂಲಕ ಅಲ್ಪಾವಧಿ ಕೃಷಿ ಸಾಲಗಳ ಬಗ್ಗೆ ರೈತರಿಗೆ ₹3 ಲಕ್ಷ ವರೆಗಿನ ಸಾಲವನ್ನು ಶೂನ್ಯ ಬಡ್ಡಿದರದಲ್ಲಿ, ಮಧ್ಯಮಾವಧಿ ಕೃಷಿ ಸಾಲಗಳನ್ನು ಶೇ.3ರ ಬಡ್ಡಿದರದಲ್ಲಿ 10 ಲಕ್ಷದ ವರೆಗೆ ಒದಗಿಸಲಾಗಿರುತ್ತದೆ. ನಮ್ಮ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಸಹ ಸಾಲ ನೀಡಲಾಗುತ್ತಿದೆ. 31.3.2026ಕ್ಕೆ ಇದ್ದಂತೆ ವ್ಯವಸಾಯ ಸಾಲ ವಸೂಲಿ ಪ್ರಮಾಣ ಶೇಕಡಾ 99.18 ಆಗಿದೆ ಎಂದರು.2025-26ನೇ ಸಾಲಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಯಶಸ್ವಿನಿ ಯೋಜನೆಯಡಿ ನಮ್ಮ ಜಿಲ್ಲೆಯಿಂದ ₹201.81ಲಕ್ಷ ಪ್ರೀಮಿಯಂ ಯಶಸ್ವಿನಿ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ.

2024-25ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಿಂದ ₹1,400 ಕೋಟಿ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾಯೋಜನೆ ₹71.72 ಕೋಟಿ ಬಿಡುಗಡೆ ಗೊಂಡಿದೆ ಎಂದರು.


ಜಿಲ್ಲೆಯಲ್ಲಿ ಕೃಷಿಯನ್ನು ಉತ್ತೇಜಿಸುವ ಕಾರಣಕ್ಕೆ ಅರ್ಹ ಗ್ರಾಹಕರಿಗೆ ಕೃಷಿ ಭೂಮಿ ಖರೀದಿ ಬಗ್ಗೆ ₹30ಲಕ್ಷ ಗಳವರೆಗೆ ಬ್ಯಾಂಕ್ ನಿಂದ ನೇರ ಸಾಲ ವಿತರಣೆ ಮಾಡಲಾಗುತ್ತಿದೆ. 31.3.2026ಕ್ಕೆ ಇದ್ದಂತೆ 133 ಗ್ರಾಹಕರಿಗೆ ₹3303.22ಲಕ್ಷ ಸಾಲ ಮಂಜೂರಾಗಿದೆ ಎಂದರು.

ಕಳೆದ ಬಾರಿಗಿಂತ ಎನ್ ಪಿಎ ಪ್ರಮಾಣದಲ್ಲಿ ಕೊಂಚ ಏರಿಕೆ ವಿಷಯಕ್ಕೆ ಸ್ಪಷ್ಟಿಕರಣ ನೀಡಿದ ಹೆಬ್ಬಾರ್, ಸಾಲ ವಸೂಲಾತಿ ಸಮಯದ ವೇಳೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಚುನಾವಣೆ ನಡೆದು ಕೆಲ ವಿಷಯಕ್ಕೆ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದವು ಆಡಳಿತ ಮಂಡಳಿ ರಚನೆ ಆಗದೇ ಇರುವ ಹಿನ್ನೆಲೆಯಲ್ಲಿ ಕೊಂಚ ಏರಿಕೆ ಆಗಿರಬಹುದು. ಆದರೆ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ, ಕೆಡಿಸಿಸಿ ಬ್ಯಾಂಕ್ ತೀರಾ ಕಡಿಮೆ ಇದೆ. ಅಲ್ಲದೇ ಶುಗರ್ ಫ್ಯಾಕ್ಟರಿ ಗಳ ಸಾಲ ವಸೂಲಿ ಆಗಿದೆ.ಅಲ್ಲದೇ ಫಾರಂ ಹೌಸ್ ನಿರ್ಮಿಸಲು ಬ್ಯಾಂಕಿನಿಂದ ಸಾಲ ನೀಡಲಾಗಿತ್ತು. ಅದರಲ್ಲಿ ಶೇ. 55ರಷ್ಟು ವಸೂಲಾತಿಯಲ್ಲಿ ವ್ಯತ್ಯಯ ಆಗಿದೆ. ಇದೂ ಒಂದು ಕಾರಣ ಆಗಿರಬಹುದು. ನಾವು ಯಾವ ಉದ್ದೇಶಕ್ಕೆ ಸಾಲ ನೀಡಿದ್ದೆವೋ ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಯಾವುದೇ ತೊಂದರೆ ಇಲ್ಲ. ಇಲ್ಲದಿದ್ದರೆ ಜನಪರ ಯೋಜನೆಗಳನ್ನು ಬಂದ್ ಮಾಡುವ ಸಾಧ್ಯತೆಗಳೂ ಇರುತ್ತದೆ. ಜನರು ಸಕಾಲದಲ್ಲಿ ಸಾಲ ಪಾವತಿ ಮಾಡಬೇಕು ಎಂದರು.

ಈ ಸಂದರ್ಭ ಉಪಾಧ್ಯಕ್ಷ ಕೃಷ್ಣದೇಸಾಯಿ ನಿರ್ದೇಶಕರಾದ ಶ್ರೀಕಾಂತ ಘೋಟ್ರೇಕರ್, ಪ್ರಕಾಶ ಗುನಗಿ, ಭೀರಣ್ಣ ನಾಯಕ್, ವಿಶ್ವನಾಥ ಭಟ್, ಸುರೇಶ್ಚಂದ್ರ ಹೆಗಡೆ, ಹೆಮ್ಮಣ್ಣ ನಾಯ್ಕ, ಮಾಹಾಬಲೇಶ್ವರ ವಿಲೇಶ್ವರ ಹೆಗಡೆ, ವಿ.ಕೆ.ವಿಕಾಲ್, ರವಿ ಹೆಗಡೆ, ನಿರಂಜನ ಭಟ್ ಹಾಗೂ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಭಟ್ ಇದ್ದರು.