ಕೈಲಿ ಮೊಬೈಲ್ ಹಿಡಿದ ಮಕ್ಕಳ ಮೇಲೆ ನಿಗಾ ಇರಲಿ

| Published : Mar 14 2025, 01:32 AM IST

ಸಾರಾಂಶ

ಚಿತ್ರದುರ್ಗದ ಡಯಟ್‌ನಲ್ಲಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ರೋಣವಾಸುದೇವ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಕ್ಕಳು ಸಾಮಾಜಿಕ ಜಾಲತಾಣ ಬಳಸುತ್ತಿರುವುದರ ಕಡೆ ಗಮನ ಹರಿಸಬೇಕು. ಮಕ್ಕಳು ಮುಖ್ಯವಾಹಿನಿಯಿಂದ ಆಚೆ-ಈಚೆ ಹೋಗದಂತೆ ಕಾನೂನು ಸುವ್ಯವಸ್ಥೆಯ ಜೊತೆಗೆ ಗಮನಹರಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ರೋಣ ವಾಸುದೇವ್ ಹೇಳಿದರು.

ನಗರದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ (ಡಯಟ್) ಗುರುವಾರ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬಾಲ ನ್ಯಾಯ ಕಾಯ್ದೆ, ಪೋಕ್ಸೊ ಕಾಯ್ದೆ ಹಾಗೂ ಮಕ್ಕಳ ಸ್ನೇಹಿ ಕಾನೂನು ಸೇವೆಗಳ ಯೋಜನೆ ಕುರಿತು ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮಗುವಿಗೂ ಮೊಬೈಲ್, ಇಂಟರ್‌ನೆಟ್ ದೊರೆಯುತ್ತಿದ್ದು, ಮಕ್ಕಳು ಸಾಮಾಜಿಕ ತಾಣಗಳನ್ನು ಬಳಸುತ್ತಿದ್ದಾರೆ. ಇದರಿಂದ ಮಕ್ಕಳು ಮಾನಸಿಕವಾಗಿ ಯಾವ ರೀತಿಯಾಗಿ ಇರಬೇಕಿತ್ತೋ ಆ ರೀತಿ ಬೆಳೆಯದೇ ಇನ್ನೊಂದು ದಿಕ್ಕಿನಲ್ಲಿ ಬೆಳೆಯುತ್ತಿದ್ದಾರೆ. ಇದರಿಂದ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಸಾಮಾಜಿಕ ಜಾಲತಾಣ ಬಳಸುವ ಮಕ್ಕಳ ಬೆಳವಣಿಗೆ, ನಡತೆ, ನುಡಿಯಲ್ಲಿ ಬಹಳಷ್ಟು ವ್ಯತ್ಯಾಸ ಕಾಣುತ್ತಿದ್ದೇವೆ. ಮಕ್ಕಳು ಅಪರಾಧ ಕಡೆಗೆ ಅವರ ಮನಸ್ಸು ಹೋಗುತ್ತಿದೆ. ಮಕ್ಕಳನ್ನು ಬಳಸಿಕೊಂಡು ಅಪರಾಧವೆಸಗುವ ಚಟುವಟಿಕೆಗಳನ್ನು ಕಾಣುತ್ತಿದ್ದು, ಹಾಗಾಗಿ ಸರಿಪಡಿಸುವ ಜವಾಬ್ದಾರಿ ನಮ್ಮ ಮೇಲೆ ಹೆಚ್ಚಿದೆ. ಕಾನೂನು ಸುವ್ಯವಸ್ಥೆ ಜೊತೆಗೆ ಇದನ್ನು ಗಮನಹರಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಹೊಸ ಕಾನೂನುಗಳನ್ನು ಜಾರಿಗೆ ತಂದಾಗ ಅಥವಾ ಹಿಂದೆ ಇದ್ದಂತಹ ಕಾನೂನುಗಳನ್ನು ಮಾರ್ಪಾಡು ಮಾಡಿದ ಸಂದರ್ಭದಲ್ಲಿ ಹೊಸ ವಿಚಾರ, ಕಾನೂನು ತಿಳಿದುಕೊಂಡು ಅತ್ಯಂತ ನಿಖರವಾಗಿ ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಹೊಸ ಕಾನೂನು, ವಿಷಯಗಳನ್ನು ತಿಳಿದುಕೊಳ್ಳಲು ನಾವು ಮಾಡುತ್ತಿರುವ ಕರ್ತವ್ಯಗಳನ್ನು ಮತ್ತಷ್ಟು ಜಾಗರೂಕತೆ ಹಾಗೂ ಹೆಚ್ಚಿನ ಮುತುವರ್ಜಿಯಿಂದ ಮಾಡುವ ಉದ್ದೇಶದಿಂದ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

1996ರ ಬಾಲ ನ್ಯಾಯ ಕಾಯ್ದೆಯಲ್ಲಿ 7 ಅಧ್ಯಾಯಗಳು ಹಾಗೂ 63 ಸೆಕ್ಷನ್‍ಗಳು ಇದ್ದವು. 2000ನೇ ಇಸವಿಯಲ್ಲಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಲ್ಲಿ 5 ಅಧ್ಯಾಯಗಳು ಹಾಗೂ 70 ಸೆಕ್ಷನ್‍ಗಳನ್ನು ಅಳವಡಿಸಲಾಯಿತು. ತದನಂತರ ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2015ರಲ್ಲಿ ಹಿಂದೆ ಇದ್ದ ಎರಡು ಕಾನೂನುಗಳಿಗಿಂತ ವಿಭಿನ್ನವಾಗಿ 10 ಅಧ್ಯಾಯಗಳು ಹಾಗೂ 112 ಸೆಕ್ಷನ್‍ಗಳನ್ನು ಅಳವಡಿಸಲಾಯಿತು ಎಂದು ನ್ಯಾಯಾಧೀಶ ರೋಣ ವಾಸುದೇವ್ ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಬಾಲ ನ್ಯಾಯ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಸ್ನೇಹಿ ಕಾನೂನು ಸೇವೆಗಳು ಸೇರಿದಂತೆ ಈ ಎಲ್ಲ ಕಾನೂನುಗಳು ಮಕ್ಕಳನ್ನು ಶಿಕ್ಷಿಸುವ, ದಂಡಿಸುವ ಉದ್ದೇಶದಿಂದ ಮಾಡಿದ ಕಾನೂನುಗಳಲ್ಲ. ಮಕ್ಕಳ ಹಕ್ಕುಗಳ ರಕ್ಷಿಸುವ ನಿಟ್ಟಿನಲ್ಲಿ ಮಾಡಿರುವಂತಹ ಕಾನೂನುಗಳಾಗಿವೆ. ಬಾಲ ನ್ಯಾಯ ಕಾಯ್ದೆಯಲ್ಲಿ ಮಕ್ಕಳನ್ನು ಅಪರಾಧಿ ಎಂತಲೂ ಕರೆಯಲಾಗುವುದಿಲ್ಲ. ಇದು ಕಾನೂನಿನ ಸಂವೇದನಾಶೀಲತೆಯನ್ನು ತಿಳಿಸುತ್ತದೆ. ಇವು ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ದೊಡ್ಡ ಕರ್ತವ್ಯ ಎಂಬ ಉದ್ದೇಶದಿಂದ ಮಾಡಿರುವ ಕಾನೂನುಗಳಾಗಿವೆ ಎಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್, 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಬಾಲನ್ಯಾಯ ಮಂಡಳಿ ಅಧ್ಯಕ್ಷ ಉಜ್ವಲ ವೀರಣ್ಣ ಸಿದ್ದಣ್ಣವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಶೀಲಾ, ಡಯಟ್ ಪ್ರಾಂಶುಪಾಲ ನಾಸಿರುದ್ದೀನ್, ಬೆಂಗಳೂರಿನ ಎಸ್‍ಜೆಪಿಯು-ಸಿಐಡಿ ಪೊಲೀಸ್ ತರಬೇತುದಾರ ಸಿ.ಜಿ.ರೋಹಿತ, ಪೊಲೀಸ್ ಉಪಾಧೀಕ್ಷಕ ಹಾಗೂ ಹಿರಿಯ ಮಕ್ಕಳ ಪೊಲೀಸ್ ಕಲ್ಯಾಣಾಧಿಕಾರಿ ಪಿ.ಕೆ.ದಿನಕರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಇದ್ದರು.