ದೇಹವನ್ನೂ ದೇವಾಲಯದಂತೆ ಪರಿಶುದ್ಧವಾಗಿ ಇಟ್ಟುಕೊಳ್ಳಿ

| Published : May 08 2025, 12:31 AM IST

ದೇಹವನ್ನೂ ದೇವಾಲಯದಂತೆ ಪರಿಶುದ್ಧವಾಗಿ ಇಟ್ಟುಕೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಗತ್ತನ್ನು ವ್ಯಾಪಿಸುವ ಭಗವಂತ, ಮನುಷ್ಯನ ದೇಹದಲ್ಲಿಯೂ ಇದ್ದು, ದೇವಾಲಯ ಎಷ್ಟು ಪವಿತ್ರವೋ ಅಷ್ಟೇ ಪವಿತ್ರವಾದುದು ಮನುಷ್ಯನ ದೇಹ. ದೇಹವನ್ನು ಪರಿಶುದ್ಧವಾಗಿ, ರೋಗರಹಿತವಾಗಿ ಇಟ್ಟುಕೊಂಡು, ದ್ವೇಷ, ಅಸೂಯೇ ತ್ಯಜಿಸಿ, ಪ್ರೀತಿ ವಾತ್ಸಲ್ಯದಿಂದ ಬದುಕಬೇಕಾದ್ದು ಮನುಷ್ಯ ಧರ್ಮವಾಗಿದೆ ಎಂದು ಮೈಸೂರು ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮನುಷ್ಯ ಭಗವಂತನನ್ನು ಪವಿತ್ರವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿ ನಡೆ ಒಳಗೆ ನುಡಿ ತುಂಬಿ, ನುಡಿ ಒಳಗೆ ನಡೆ ತುಂಬಿ, ನಡೆನುಡಿಯಲ್ಲಿ ಪರಿಪೂರ್ಣತೆ ತುಂಬಿ ಸಾಮರಸ್ಯ ಕಾಣುತ್ತಾ, ಇವ ನಮ್ಮವ ಇವ ನಮ್ಮವ ಎಂದು ಪ್ರೀತಿಯಿಂದ ಕಾಣುವ ಭಾವನೆ ಬೆಳೆಸಿಕೊಂಡಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಜಗತ್ತನ್ನು ವ್ಯಾಪಿಸುವ ಭಗವಂತ, ಮನುಷ್ಯನ ದೇಹದಲ್ಲಿಯೂ ಇದ್ದು, ದೇವಾಲಯ ಎಷ್ಟು ಪವಿತ್ರವೋ ಅಷ್ಟೇ ಪವಿತ್ರವಾದುದು ಮನುಷ್ಯನ ದೇಹ. ದೇಹವನ್ನು ಪರಿಶುದ್ಧವಾಗಿ, ರೋಗರಹಿತವಾಗಿ ಇಟ್ಟುಕೊಂಡು, ದ್ವೇಷ, ಅಸೂಯೇ ತ್ಯಜಿಸಿ, ಪ್ರೀತಿ ವಾತ್ಸಲ್ಯದಿಂದ ಬದುಕಬೇಕಾದ್ದು ಮನುಷ್ಯ ಧರ್ಮವಾಗಿದೆ ಎಂದು ಮೈಸೂರು ಶ್ರೀ ಸುತ್ತೂರು ವೀರಸಿಂಹಾಸನ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ತಾಲೂಕಿನ ದಾಳಗೌಡನಹಳ್ಳಿ ಗ್ರಾಮದಲ್ಲಿ ಶ್ರೀ ಭೈರವ ದಾಳೇಶ್ವರಸ್ವಾಮಿ ವಿಗ್ರಹ, ನಂದೀಶ್ವರ ವಿಗ್ರಹ ಹಾಗೂ ನಾಗದೇವತೆ ವಿಗ್ರಹಗಳ ಮತ್ತು ಕೃತ್ತಿಕಾದೀಪಸ್ಥಂಭ ಹಾಗೂ ವಿಮಾನ ಗೋಪುರ ಕಳಶ ಪ್ರತಿಷ್ಠಾಪನಾ ಮಹಾಕುಂಭೋತ್ಸವ ಹಾಗೂ ಶ್ರೀ ಬೈರವ ದಾಳೇಶ್ವರಸ್ವಾಮಿ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಅಂತರಂಗದಲ್ಲಿದ್ದಾಗ ಆತನ ಪಂಚೇಂದ್ರಿಯಗಳು ಕ್ರಿಯಾಶೀಲವಾಗಿರುತ್ತದೆ, ಆದರೆ ಭಗವಂತ ಕ್ಷಣ ಮರೆಯಾದಲ್ಲಿ ಜೀವ ಹೋಯಿತು, ಪ್ರಾಣ ಹೋಯಿತು ಎಂದು ಹೇಳುವ ಜತೆಗೆ ಭಗವಂತ ಇದ್ದಾಗ ಹೆಸರಿಂದ ಕರೆಯುವಾಗ ಪ್ರಾಣ ಹೋದ ಕೂಡಲೇ, ಹೆಸರು, ಕುಲವೆಲ್ಲ ಮರೆಯಾಗಿ ಕೇವಲ ದೇಹವಾಗಿರುತ್ತೆ. ಆದ್ದರಿಂದ ಮನುಷ್ಯ ಭಗವಂತನನ್ನು ಪವಿತ್ರವಾಗಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿ ನಡೆ ಒಳಗೆ ನುಡಿ ತುಂಬಿ, ನುಡಿ ಒಳಗೆ ನಡೆ ತುಂಬಿ, ನಡೆನುಡಿಯಲ್ಲಿ ಪರಿಪೂರ್ಣತೆ ತುಂಬಿ ಸಾಮರಸ್ಯ ಕಾಣುತ್ತಾ, ಇವ ನಮ್ಮವ ಇವ ನಮ್ಮವ ಎಂದು ಪ್ರೀತಿಯಿಂದ ಕಾಣುವ ಭಾವನೆ ಬೆಳೆಸಿಕೊಂಡಾಗ ಮನುಷ್ಯ ಜೀವನ ಸಾರ್ಥಕವಾಗುತ್ತದೆ.

ದೇವಸ್ಥಾನಗಳು ಶ್ರದ್ಧೆ, ಭಕ್ತಿಯನ್ನು ಉಂಟು ಮಾಡುತ್ತಾ ಭಯಭಕ್ತಿಯಿಂದ ಕೂಡಿದ ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು. ನಮ್ಮ ದೇಶದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಹಲವಾರು ದೇವಾಲಯಗಳು ಇದ್ದು, ದೇವಸ್ಥಾನದ ಶಿಲ್ಪ ಸೌಂದರ್ಯ, ಅದರ ನಿರ್ಮಾಣ, ಆಚರಣೆಯ ವಿಧಿವಿಧಾನಗಳು ಎಲ್ಲವೂ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರತ್ಯೇಕವಾಗಿರುತ್ತೆ. ಭಗವಂತನಿಗೆ ಹೀಗೇ ಪೂಜೆ ಮಾಡಬೇಕು ಎಂಬುದು ಮುಖ್ಯವಲ್ಲ, ಆದರೇ ಯಾವ ಮನಸ್ಸಿನಿಂದ ಪ್ರಾರ್ಥನೆ ಸಲ್ಲಿಸುತ್ತಾನೆ ಎಂಬುದು ಮುಖ್ಯವಾಗುತ್ತದೆ. ಭಗವಂತನ ಅನುಗ್ರಹಕ್ಕಾಗಿ ಭಕ್ತಿಯಿಂದ ಪ್ರಾರ್ಥನೆ ಮಾಡಿದರೇ ನಾವು ಕೇಳಿದನ್ನೆಲ್ಲ ಕೊಡುತ್ತಾನೆ ಎಂಬುದು ಭಾರತೀಯರ ನಂಬಿಕೆ, ಆದರೆ ಸಕಲವನ್ನು ಅರಿತ ಭಗವಂತನಿಗೆ ಪ್ರಾರ್ಥನೆ ಎಷ್ಟು ಸರಿ ಎಂದು ಪ್ರಶ್ನಿಸಿ, ಮಾತು ಬಾರದ ಒಂದು ಮಗುವಿನ ತಾಯಿ ಮಗುವಿನ ಅಳುವಿನಿಂದ ಅದರ ಹಸಿವು, ನೋವು, ನಿದ್ದೆ ಅಥವಾ ಇನ್ನೊಂದನ್ನು ತಾಯಿ ತಿಳಿಯುವಂತೆ, ಭಗವಂತನಿಗೆ ಭಕ್ತಿಯನ್ನು ಸಮರ್ಪಣೆ ಮಾಡಿದರೇ ನಮ್ಮ ಬೇಡಿಕೆ ಈಡೇರಿಸುತ್ತಾರೆ ಎಂದು ತಿಳಿಸಿ, ಬಸವಣ್ಣನವರ ವಚನಗಳನ್ನು ತಿಳಿಸುತ್ತಾ, ಅದರ ಸಾರವನ್ನು ವಿವರಿಸಿ, ಭಗವಂತ, ಭಕ್ತಿ ಹಾಗೂ ಭಕ್ತನ ಪ್ರಾರ್ಥನೆಯ ಬಗ್ಗೆ ತಿಳಿಸಿಕೊಟ್ಟರು.

ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಮಾತನಾಡಿ, ಮನೆ ಕಟ್ಟಿ ನೋಡು ಮದುವೆ ನೋಡು ಎಂಬ ಮಾತಿದೆ, ಆದರೆ ಈಗ ದೇವಸ್ಥಾನ ಕಟ್ಟಿ ನೋಡೊದೂ ಸಹ ಬಹಳ ಕಷ್ಟವಾಗಿದೆ. ಇಂತಹ ಸನ್ನಿವೇಶದಲ್ಲಿ ದೇವಸ್ಥಾನವನ್ನು ಕಟ್ಟಿದ್ದರೂ ಸಹ ಇಂದಿನ ಯುವ ಜನತೆಯಲ್ಲಿ ದೇವಸ್ಥಾನ, ಧರ್ಮ ಕಾರ್ಯಗಳು, ದೇವರ ಬಗ್ಗೆ ಆಸಕ್ತಿ ಕಡಿಮೆಯಾಗಿದೆ. ಆದರೆ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ, ಹೆಚ್ಚಿನ ಆಕರ್ಷಿತರಾಗಿ, ಜೀವನದ ಮುಖ್ಯವಾದ ದ್ಯೇಯವನ್ನು ಮರೆಯುತ್ತಾ, ಹಿರಿಯರು ರೂಡಿಸಿದ ಸಂಪ್ರದಾಯಗಳು, ಗ್ರಾಮ, ಮನೆ ಹಾಗೂ ಮನ ಬೆಳಗುವಂತಹ ದೇವಾಲಯಗಳನ್ನು ಏಕೆ ಕಟ್ಟಿಸಿದ್ದಾರೆ ಎಂದು ಯೋಚಿಸಿದಾಗ, ವಿಷಯವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸ್ವಾಮೀಜಿಗಳು ತಿಳಿಸಿಕೊಂಟ್ಟಂತಹ ಧರ್ಮ ಪಾಲನೆಯಲ್ಲಿ ಎಲ್ಲರೂ ತೊಡಗಿಸಿಕೊಂಡು, ಸಂಸ್ಕೃತಿಯನ್ನು ಪಾಲನೆ ಮಾಡಬೇಕಿದೆ ಎಂದು ಕರೆಕೊಟ್ಟರು.

ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಸಿದ್ಧಲಿಂಗ ಮಹಾಸ್ವಾಮಿ, ಮಲೆಮಹದೇಶ್ವರಬೆಟ್ಟ ಸಾಲೂರು ಬೃಹನ್ಮಠದ ಡಾ. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕನಕಪುರದ ಶ್ರೀದೇಗುಲ ಮಠ ಡಾ. ಚನ್ನಬಸವ ಸ್ವಾಮೀಜಿ, ಮೈಸೂರಿನ ಕುಂದೂರು ಮಠದ ಶ್ರೀ ಡಾ.ಶರತ್‌ಚಂದ್ರ ಸ್ವಾಮೀಜಿ ಹಾಗೂ ಅರಕಲಗೂಡು ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಲೂಕು ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷೆ ಪುಷ್ಪಲತಾ ಹಾಗೂ ತಂಡದವರು ಪ್ರಾರ್ಥಿಸಿದರು, ಮಹೇಶಪ್ಪ ಡಿ.ಸಿ. ಸ್ವಾಗತಿಸಿದರು, ಜಯಸ್ವಾಮಿ ವಂದಿಸಿದರು ಹಾಗೂ ಉಪನ್ಯಾಸಕ ಹೇಮಚಂದ್ರ ನಿರೂಪಿಸಿದರು. ಬೆಂಗಳೂರಿನ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಡಿ.ಬಿ.ನಟೇಶ್, ತಹಸೀಲ್ದಾರ್‌ ವೈ.ಎಂ.ರೇಣುಕುಮಾರ್, ದೊಡ್ಡಕಾಡನೂರು ಗ್ರಾ.ಪಂ. ಅಧ್ಯಕ್ಷ ಶಿವಣ್ಣ, ಇತರರು ಇದ್ದರು.