ಕೆಂಪೇಗೌಡ ನಾಡಿನ ಸರ್ವಶ್ರೇಷ್ಠ ದಾರ್ಶನಿಕ-ಪೂಜಾರ

| Published : Jun 29 2025, 01:32 AM IST

ಸಾರಾಂಶ

ಅಪ್ರತಿಮ ಆಡಳಿತಗಾರ, ಸರ್ವಶ್ರೇಷ್ಠ ದಾರ್ಶನಿಕ, ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರ ದೂರ ದೃಷ್ಟಿಯುಳ್ಳ ಕ್ರಾಂತಿಕಾರಕ ಆಡಳಿತ ವೈಖರಿಯಿಂದ ಇಂದು ಬೆಂಗಳೂರು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಶಿರಸ್ತೇದಾರ ಜೆ.ಪಿ. ಪೂಜಾರ ಹೇಳಿದರು.

ಶಿರಹಟ್ಟಿ: ಅಪ್ರತಿಮ ಆಡಳಿತಗಾರ, ಸರ್ವಶ್ರೇಷ್ಠ ದಾರ್ಶನಿಕ, ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡ ಅವರ ದೂರ ದೃಷ್ಟಿಯುಳ್ಳ ಕ್ರಾಂತಿಕಾರಕ ಆಡಳಿತ ವೈಖರಿಯಿಂದ ಇಂದು ಬೆಂಗಳೂರು ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ ಎಂದು ಶಿರಸ್ತೇದಾರ ಜೆ.ಪಿ. ಪೂಜಾರ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಪ್ರತಿಯೊಬ್ಬರೂ ನಾಡಪ್ರಭು ಕೆಂಪೇಗೌಡರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರ ಜೀವನದಿಂದ ಸ್ಫೂರ್ತಿ ಪಡೆದು ಸಾಮಾಜಿಕ ಸಮಾನತೆ ಮತ್ತು ಸಾಮರಸ್ಯಕ್ಕೆ ಕೊಡುಗೆ ನೀಡಬೇಕು ಎಂದರು.

ಜೀವನದಲ್ಲಿ ಯಾರಾದರೂ ಸಾಧನೆ ಮಾಡಬೇಕಾದರೆ ಇತಿಹಾಸದ ಅರಿವು ಅಗತ್ಯ. ಇಂದಿನ ಯುವ ಪೀಳಿಗೆ ಕೆಂಪೇಗೌಡರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಇವರ ಜನಪರ ಆಡಳಿತ ಸ್ಮರಣೀಯ. ನಾಡಿನ ಪ್ರತಿಯೊಬ್ಬ ಪ್ರಜೆ ಸ್ಮರಿಸುವ ಅಪ್ರತಿಮ ಗುಣವುಳ್ಳ ಮೌಲ್ಯಾಧಾರಿತ ವ್ಯಕ್ತಿತ್ವವುಳ್ಳ ಕೆಂಪೇಗೌಡರು ಎಂದಿಗೂ ಚಿರಸ್ಥಾಯಿ ಎಂದರು. ಕೆಂಪೇಗೌಡರು ತಮ್ಮ ಆಡಳಿತದ ಅವಧಿಯಲ್ಲಿ ಜನಪರ ಹಿತವನ್ನು ಅರಿತುಕೊಂಡು ಸಾಮಾಜಿಕವಾಗಿ ಶ್ರೇಷ್ಠ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳು ಇಂದಿಗೂ ಅಜರಾಮರವಾಗಿವೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆಳ್ವಿಕೆ ನಡೆಸಿದ್ದು, ತಮ್ಮ ಪ್ರತಿಭೆ ಮತ್ತು ಜಾಣ್ಮೆಯಿಂದ ಅಮರರಾಗಿದ್ದಾರೆ ಎಂದರು. ಎಲ್ಲ ಮತ, ಧರ್ಮಗಳನ್ನು ಸಮಭಾವದಿಂದ ಕಂಡ ನಾಡಪ್ರಭು ಕೆಂಪೇಗೌಡ ಅವರು ತಮ್ಮ ದೂರದೃಷ್ಟಿಯಿಂದ ಬೆಂಗಳೂರಿನ ನಿರ್ಮಾತೃ ಎನಿಸಿದ್ದಾರೆ. ನಮ್ಮ ಕರ್ನಾಟಕ ಇತಿಹಾಸದಲ್ಲಿ ರಾಜ, ಮಹಾರಾಜರು ಪಡೆದಿರುವಷ್ಟು ಜನಪ್ರಿಯತೆ ಗಳಿಸಿರುವ ವ್ಯಕ್ತಿ ಕೆಂಪೇಗೌಡ ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ವಿನೋದ ಪಾಟೀಲ, ಮಂಜುಳಾ ಆಕಳದ ಸೇರಿದಂತೆ ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿ ಹಾಜರಿದ್ದರು.