ಸಾರಾಂಶ
ನಾಡಪ್ರಭು ಕೆಂಪೇಗೌಡರ ತತ್ವಾದರ್ಶಗಳನ್ನು ಎಲ್ಲ ಶಾಲಾ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ನಾಡಪ್ರಭು ಕೆಂಪೇಗೌಡರ ತತ್ವಾದರ್ಶಗಳನ್ನು ಎಲ್ಲ ಶಾಲಾ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೆಂಪೇಗೌಡರು ಒಬ್ಬ ದಕ್ಷ ಹಾಗೂ ಪ್ರಾಮಾಣಿಕ ಜನಾನುರಾಗಿ ಆಡಳಿತಗಾರಾಗಿದ್ದರು. ಬೆಂಗಳೂರಿನ ಅಭಿವೃದ್ಧಿಗೆ ಸುಭದ್ರ ಅಡಿಪಾಯ ಹಾಕಿಕೊಡುವ ಮೂಲಕ ಅಂದಿನ ಕಾಲದಲ್ಲಿಯೇ ವಿವಿಧ ಕಾಯಕ ಜನಾಂಗಗಳ ವೃತ್ತಿ ಆಧಾರಿತ ಮಾರುಕಟ್ಟೆಗಳನ್ನು ಕಲ್ಪಸಿದ್ದರು. ಈ ಕಾರಣದಿಂದಲೇ ಇಂದು ನಾಡಪ್ರಭು ಕೆಂಪೇಗೌಡರ ತತ್ವಾದರ್ಶಗಳನ್ನು ಎಲ್ಲರಿಗೂ ಮಾದರಿ ಎಂದರು.ಈ ವೇಳೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಅವರು ಮಾತನಾಡಿ, ಯಾರು ಇತಿಹಾಸವನ್ನು ತಿಳಿದವರಿರುತ್ತಾರೋ ಅಂತಹವರು ಇತಿಹಾಸ ಸೃಷ್ಟಿಸುತ್ತಾರೆ ಎನ್ನುವುದಕ್ಕೆ ನಾಡಪ್ರಭು ಕೆಂಪೇಗೌಡರು ಸಾಕ್ಷಿಯಾಗಿದ್ದಾರೆ. ಅವರ ಆಡಳಿತದಲ್ಲಿ ಎಲ್ಲ ಧರ್ಮದವರೂ, ಪಂಥದವರೂ ಒಂದೇ ಸ್ಥಾನಮಾನ ನೀಡಿ ಗೌರವಿಸಲಾಗುತ್ತಿತ್ತು. ಮಹಾತ್ಮರ, ಶರಣರ ಸಂತರ ಜಯಂತಿಗಳು ಕೇವಲ ಆಯಾ ಜಾತಿಗಳಿಗೆ ಸೀಮಿತಗೊಳ್ಳುವಂತೆ ಮಾಡದೇ ಎಲ್ಲ ಸಮುದಾಯದವರು ಭಾವಹಿಸಿ ಗೌರವಿಸುವಂತಾಗಬೇಕು ಎಂದರು.
ಸಿಡಿಪಿಒ ಶಿವಮೂರ್ತಿ ಕುಂಬಾರ, ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಶಿವಾನಂದ ಮೇಟಿ, ಬಿ.ಸಿ.ಎಮ್. ಅಧಿಕಾರಿಗಳು, ದೈಹಿಕ ಶಿಕ್ಷಣಾಧಿಕಾರಿ ಬಿ.ವೈ.ಕವಡಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಸ್.ಲಮಾಣಿ, ಟಿ.ಡಿ.ಲಮಾಣಿ ನಿರೂಪಿಸಿದರು.