ರಾಮನಗರ: ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆಯ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2026ರ ಜನವರಿ 12ರಿಂದ 22ರವರೆಗೆ ಕೆಂಗಲ್ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾನುವಾರುಗಳ ಜಾತ್ರೆ ನಡೆಯಲಿದೆ.
ರಾಮನಗರ: ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆಯ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ 2026ರ ಜನವರಿ 12ರಿಂದ 22ರವರೆಗೆ ಕೆಂಗಲ್ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ, ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಹಾಗೂ ಜಾನುವಾರುಗಳ ಜಾತ್ರೆ ನಡೆಯಲಿದ್ದು, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಈ ಜಾತ್ರಾ ಮಹೋತ್ಸವದ ಯಶಸ್ವಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಸೂಚನೆ ನೀಡಿದರು.
ನಗರದ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಹ್ಮರಥೋತ್ಸವ ಹಾಗೂ ಜಾನುವಾರು ಜಾತ್ರೆ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ಸಾರ್ವಜನಿಕರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ವ್ಯವಸ್ಥಿತವಾಗಿ ಬಂದೋಬಸ್ತ್ ನಿರ್ವಹಿಸಬೇಕು ಎಂದು ಹೇಳಿದರು.ರಥೋತ್ಸವ ಹಾಗೂ ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡುವ ವೇಳೆ ಪೊಲೀಸರು ಸ್ಥಳದಲ್ಲಿದ್ದು ಕಾರ್ಯನಿರ್ವಹಿಸಬೇಕು. ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡಲು ಸೂಕ್ತ ಸ್ಥಳ ಪರಿಶೀಲಿಸುವಂತೆ ಪೊಲೀಸ್ ಇಲಾಖೆ ಹಾಗೂ ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿಗೆ ತಿಳಿಸಿದರು.
ಆರೋಗ್ಯ ಇಲಾಖೆಯಿಂದ ಸ್ಥಳದಲ್ಲಿ ತಾತ್ಕಾಲಿಕವಾಗಿ ಚಿಕಿತ್ಸಾ ಕೇಂದ್ರವನ್ನು ತೆರೆಯಬೇಕು. ಅದರಲ್ಲಿ ವ್ಶೆದ್ಯರು, ಸಿಬ್ಬಂದಿ, ಅಗತ್ಯ ಪರಿಕರಗಳು, ಔಷಧಿ-ಮಾತ್ರೆಗಳು ಇರಬೇಕು, ತುರ್ತು ಸಮಯಕ್ಕೆ ಅನುಕೂಲವಾಗುವಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಅದೇ ರೀತಿ ರಾಸುಗಳಿಗೆ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಪಶುಪಾಲನಾ ಇಲಾಖೆ ವತಿಯಿಂದ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆದು ರಾಸುಗಳಿಗೆ ಅಗತ್ಯವಿರುವ ಔಷಧವನ್ನು ಸಂಗ್ರಹಿಸಬೇಕು, ಮುಖ್ಯವಾಗಿ ಸ್ಥಳದಲ್ಲಿ ಸ್ವಚ್ಛತೆ ಕಾಪಾಡಲು ರಾಮನಗರ ನಗರಸಭೆ ವತಿಯಿಂದ ಪೌರಕಾರ್ಮಿಕರನ್ನು ನಿಯೋಜಿಸುವಂತೆ ಅವರು ಸೂಚಿಸಿದರು.ಸ್ಥಳದಲ್ಲಿ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳು, ದನಗಳ ಗೊಬ್ಬರವನ್ನು ಸ್ವಚ್ಛ ಮಾಡಲು, ಅಗ್ನಿ ಅವಘಡಗಳು ಸಂಬಂಧಿಸಿದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು, ಬೆಸ್ಕಾಂನಿಂದ ನಿರಂತರ ಹಾಗೂ ರಾತ್ರಿಯ ವೇಳೆ ಅನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡಬೇಕು. ಜಾತ್ರೆಯ ದಿನದಂದು ಪ್ರಸಾದ ತಯಾರಿಕಾ ವೇಳೆ ಪ್ರಸಾದಕ್ಕೆ ಬಳಸುವ ಪದಾರ್ಥಗಳನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪರಿಶೀಲಿಸಬೇಕು. ರಥ ಸಂಚರಿಸುವ ಸ್ಥಳಗಳಲ್ಲಿ ಅರಣ್ಯ ಇಲಾಖೆಯಿಂದ ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಬೇಕು. ಲೋಕೋಪಯೋಗಿ ಇಲಾಖೆಯಿಂದ ರಥವನ್ನು ಪರಿಶೀಲಿಸಿ ದೃಢೀಕರಣ ವರದಿ ನೀಡುವಂತೆ ತಿಳಿಸಿದರು.
ಒಟ್ಟಾರಿಯಾಗಿ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ಅಚ್ಚುಕಟ್ಟಾಗಿ ನೆರವ್ಭೆರಬೇಕು, ಬರುವ ಭಕ್ತಾದಿಗಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ಸಂಬಂಧಿಸಿದ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಚಂದ್ರಯ್ಯ ಸಲಹೆ ನೀಡಿದರು.ಸಭೆಯಲ್ಲಿ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಕೆ. ರಘು ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಕುಮಾರ್, ಅರ್ಚಕ ರಾಜು, ಧಾರ್ಮಿಕ ದತ್ತಿ ಇಲಾಖೆಯ ತಹಶೀಲ್ದಾರ್ ಎಂ. ಜಿಶಾನ್ ಖಾನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಅಗ್ನಿಶಾಮಕ ದಳದ ಅಧಿಕಾರಿಗಳಿದ್ದರು.
31ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾಧಿಕಾರಿಯವರ ಕಚೇರಿ ಸಂಕೀರ್ಣದಲ್ಲಿರುವ ಅಪರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಚಂದ್ರಯ್ಯರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.