ರಾಮನಗರ: ಭಾರತದ ಏಕತೆ ಕಾಪಾಡುವಲ್ಲಿ ಹಾಗೂ ಕರ್ನಾಟಕ ಏಕೀಕರಣದಲ್ಲಿ ಕೆಂಗಲ್ ಹನುಮಂತಯ್ಯ ನಿರ್ಣಾಯಕ ಪಾತ್ರ ವಹಿಸಿದವರು. ಅವರಿಗೆ ಸಿಗಬೇಕಾದ ಗೌರವ ಸರಿಯಾಗಿ ಸಿಕ್ಕಿಲ್ಲ ಎಂದು ಇತಿಹಾಸ ತಜ್ಞ ಡಾ.ತಲಕಾಡು ಚಿಕ್ಕರಂಗೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗ ಹಮ್ಮಿಕೊಂಡಿದ್ದ ‘ಕೆಂಗಲ್ ಹನುಮಂಗಯ್ಯ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಏಕೀಕರಣಕ್ಕೆ ಕೈ ಹಾಕಿದರೆ ಅಧಿಕಾರ ಹೋಗುತ್ತದೆ ಎಂದು ಗೊತ್ತಿದ್ದರೂ, ಕೆಂಗಲ್ ಹನುಮಂತಯ್ಯರವರು ಅಖಂಡ ಕರ್ನಾಟಕದ ದೃಷ್ಟಿಯಿಂದ ಏಕೀಕರಣಕ್ಕೆ ಮುಂದಾಗಿ ಅಧಿಕಾರ ಕಳೆದುಕೊಂಡರು. ತಮಗೋಸ್ಕರ ದುಡಿದವರಿಗೆ ಈ ಮಣ್ಣು ಏನನ್ನೂ ಕೊಟ್ಟಿಲ್ಲ ಎಂಬುದಕ್ಕೆ ಕೆಂಗಲ್ ರವರು ಸಾಕ್ಷಿ ಎಂದರು.ವಿಧಾನಸೌಧ ನಿರ್ಮಾತೃವಾದ ಕೆಂಗಲ್ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಇಡಬೇಕು ಎಂದು ನಾವು ಹೋರಾಟ ಮಾಡಿದೆವು. ಆಗಲೂ ಪಿತೂರಿ ಮಾಡಿ ಅವರ ಪ್ರತಿಮೆಯನ್ನು ವಿಧಾನಸೌಧದ ಹಿಂದೆ ಇಟ್ಟು ಅವಮಾನ ಮಾಡುತ್ತಾರೆ. ಈಗಲಾದರೂ ಅದು ಮುಂದೆ ಬರಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ಶುರುವಾಗಬೇಕಿದೆ ಎಂದು ಹೇಳಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಕೆಂಗಲ್ ಅವರ ಕಾಲದ್ದು ಕಟ್ಟುವ ಕಾಲದ ರಾಜಕಾರಣವಾದರೆ, ಈಗಿನದ್ದು ತಿನ್ನುವ ಮತ್ತು ಕೆಡಗುವ ರಾಜಕಾರಣ. ದೇಶ ಸ್ವಾತಂತ್ರ್ಯ ಪಡೆದಾಗ ಉಸ್ತುವಾರಿ ಮುಖ್ಯಮಂತ್ರಿಯಾಗಿ ಕೆ.ಸಿ. ರೆಡ್ಡಿ ಇದ್ದರು. ಆದರೆ, ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೆಂಗಲ್ ಅವರು ರಾಜ್ಯದಲ್ಲಿ ಪ್ರಜಾಪ್ರಭುತ್ವದ ಕಲ್ಲನ್ನು ಭದ್ರವಾಗಿ ನೆಟ್ಟರು ಎಂದು ಹೇಳಿದರು.ಕೆಂಗಲ್ ರವರು ಜನರ ಕೆಲಸವನ್ನು ದೇವರ ಕೆಲಸ ಎಂದು ಪರಿಭಾವಿಸಿ, ವಿಧಾನಸೌಧದಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಬರೆಯಿಸಿದರು. ಏಕೀಕರಣ ಎಂಬುದು ಕನ್ನಡಿಗರ ಅಸ್ಮಿತೆಯ ಪ್ರಶ್ನೆ ಎಂದು ಪರಿಗಣಿಸಿ, ಅಧಿಕಾರ ಲೆಕ್ಕಿಸದೆ ಏಕೀಕರಣಕ್ಕೆ ಕೊಡುಗೆ ನೀಡಿದರು ಎಂದು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ, ಕರ್ನಾಟಕದ ನಿಜವಾದ ಶಿಲ್ಪಿಯಾಗಿದ್ದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯರವರು ಮಾದರಿ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಿದ ಮುತ್ಸದ್ದಿ ರಾಜಕಾರಣಿ. ಅಧಿಕಾರಕ್ಕೆ ಅಂಜದ ಕೆಂಗಲ್ ಅವರು, ಕರ್ನಾಟಕ ಏಕೀಕರಣಕ್ಕೆ ಮುಂದಡಿ ಇಟ್ಟು ಅದರ ರೂವಾರಿಯಾದರು. ಅದೇ ಕಾರಣಕ್ಕೆ ಅಧಿಕಾರ ಕಳೆದುಕೊಂಡರು ಎಂದು ತಿಳಿಸಿದರು.
ಬಮೂಲ್ ನಿರ್ದೇಶಕ ಪಿ.ನಾಗರಾಜು ಮಾತನಾಡಿ, ನನೆಗುದಿಗೆ ಬಿದ್ದಿರುವ ಕೆಂಗಲ್ ಹನುಮಂತಯ್ಯ ಅವರ ಸಮಾಧಿ ಹಾಗೂ ಅತಿಥಿ ಗೃಹದ ಅಭಿವೃದ್ಧಿ ಜೊತೆಗೆ ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕಿದೆ. ಅದಕ್ಕಾಗಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸೋಣ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ (ಶಶಿ), ಕಡು ಸ್ವಾಭಿಮಾನಿಯಾಗಿದ್ದ ಕೆಂಗಲ್ ಹನುಮಂತಯ್ಯರವರ ಕೊಡುಗೆ ನೆನೆಯದಿದ್ದರೆ ಆತ್ಮವಂಚನೆ ಮಾಡಿಕೊಂಡಂತೆ. ಅವರ ಸ್ಮಾರಕ ಜೀರ್ಣೋದ್ಧಾರ ಮಾಡುವಂತೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಕೆಂಗಲ್ ರವರ ಹಾದಿಯಲ್ಲೇ ರಾಜಕಾರಣ ಮಾಡಿದ ಸಿ.ಎಂ.ಲಿಂಗಪ್ಪರವರು ಆದರ್ಶದ ಹಾದಿ ತೋರಿದವರು ಎಂದರು.ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಹಳೆ ಬಸ್ ನಿಲ್ದಾಣದ ಬಳಿ ಸೌಂದರ್ಯೀಕರಣಗೊಂಡಿರುವ ಕೆಂಗಲ್ ಪ್ರತಿಮೆಯನ್ನು ಸಿ.ಎಂ.ಲಿಂಗಪ್ಪ ಸೇರಿದಂತೆ ಗಣ್ಯರು ಅನಾವರಣಗೊಳಿಸಿ, ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಪ್ರತಿಮೆ ನಿರ್ಮಾಣಕ್ಕೆ ಶ್ರಮಿಸಿದ ಬಮೂಲ್ ನಿರ್ದೇಶಕ ಪಿ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಸಾಹಿತಿ ಡಾ. ರವಿಕುಮಾರ್ ಬಾಗಿ, ಲೇಖಕರಾದ ಜಿ. ಶಿವಣ್ಣ ಕೊತ್ತಿಪುರ, ಡಾ. ದೊಡ್ಡಬೋರಯ್ಯ, ರೈತ ಹೋರಾಟಗಾರ್ತಿ ಅನುಸೂಯಮ್ಮ, ಜಯ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ, ನಗರಸಭೆ ಸದಸ್ಯರು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರು, ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.-------------------------
16ಕೆಆರ್ ಎಂಎನ್ 3.ಜೆಪಿಜಿರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜನ ಜಾಗೃತಿ ವೇದಿಕೆ ಮತ್ತು ನಮ್ಮವರು ಬಳಗ ಹಮ್ಮಿಕೊಂಡಿದ್ದ ‘ಕೆಂಗಲ್ ಹನುಮಂಗಯ್ಯ ನೆನಪು’ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.
----------------------------