ಹನುಮಧ್ವಜ ವಿವಾದಕ್ಕೆ ಕೆರಗೋಡು ಗ್ರಾಪಂ ಕಾರಣ: ಸಿ.ಡಿ.ಗಂಗಾಧರ್

| Published : Feb 01 2024, 02:01 AM IST

ಸಾರಾಂಶ

ಸಭಾ ನಡಾವಳಿಯಲ್ಲಿ ಪರ, ವಿರೋಧ, ತಟಸ್ಥ ನಿಲುವಿನ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಕ್ಕೂ ಮುನ್ನ ಸಂಬಂಧಿಸಿದ ಸಂಘ ಸಂಸ್ಥೆಗಳು ಧ್ವಜ ಹಾರಿಸುವ ಕುರಿತಂತೆ ಅರ್ಜಿ ಸಲ್ಲಿಸಿ ಆ ವಿಚಾರ ಸಭೆ ಗಮನಕ್ಕೆ ಬಂದ ತಕ್ಷಣವೇ ಕಾನೂನು ರೀತ್ಯ ಅಧಿಕಾರ ವ್ಯಾಪ್ತಿ ಕುರಿತು ಚರ್ಚೆ ನಡೆಸಿ ಅಂತಿಮವಾಗಿ ಅರ್ಜಿದಾರರಿಗೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಷರಾ ನೀಡಬೇಕಿತ್ತು. ಆದರೆ, ಈ ಬಗ್ಗೆ ಚರ್ಚೆ ನಡೆಸಿರುವುದೇ ಅಕ್ಷಮ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಗ್ರಾಮದಲ್ಲಿ ನಡೆದ ಹನುಮಧ್ವಜ ವಿವಾದಕ್ಕೆ ಗ್ರಾಪಂ ಕಾನೂನು ಬಾಹಿರವಾಗಿ ನಿರ್ಣಯ ತೆಗೆದುಕೊಂಡಿದ್ದೇ ಮೂಲಕ ಕಾರಣ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ಗ್ರಾಪಂಗೆ ಧ್ವಜ ಸ್ತಂಭ ಅಥವಾ ಧ್ವಜ ಹಾರಿಸಲು ಅನುಮತಿ ನೀಡಲು ಅಧಿಕಾರವಿದೆಯೇ ಇಲ್ಲವೇ ಎಂಬುದರ ಬಗ್ಗೆ ಮೊದಲು ಚರ್ಚೆ ನಡೆಯಬೇಕಿತ್ತು. ಈ ಬಗ್ಗೆ ಪಿಡಿಒ ಕೂಡ ಮಾಹಿತಿ ನೀಡಬೇಕಿತ್ತು. ಆದರೆ, ಸಭೆಯಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಸಭಾ ನಡಾವಳಿಯಲ್ಲಿ ಪರ, ವಿರೋಧ, ತಟಸ್ಥ ನಿಲುವಿನ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಇದಕ್ಕೂ ಮುನ್ನ ಸಂಬಂಧಿಸಿದ ಸಂಘ ಸಂಸ್ಥೆಗಳು ಧ್ವಜ ಹಾರಿಸುವ ಕುರಿತಂತೆ ಅರ್ಜಿ ಸಲ್ಲಿಸಿ ಆ ವಿಚಾರ ಸಭೆ ಗಮನಕ್ಕೆ ಬಂದ ತಕ್ಷಣವೇ ಕಾನೂನು ರೀತ್ಯ ಅಧಿಕಾರ ವ್ಯಾಪ್ತಿ ಕುರಿತು ಚರ್ಚೆ ನಡೆಸಿ ಅಂತಿಮವಾಗಿ ಅರ್ಜಿದಾರರಿಗೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಷರಾ ನೀಡಬೇಕಿತ್ತು. ಆದರೆ, ಈ ಬಗ್ಗೆ ಚರ್ಚೆ ನಡೆಸಿರುವುದೇ ಅಕ್ಷಮ್ಯ ಎಂದರು.

ಗ್ರಾಪಂ ಸದಸ್ಯರಿರಬಹುದು ಅಥವಾ ಜನಪ್ರತಿನಿಗಳು ಚುನಾವಣೆಗೆ ಸ್ಪರ್ಧೆ ಮಾಡಲು ಕನಿಷ್ಠ ವಿದ್ಯಾರ್ಹತೆ ಸೇರಿದಂತೆ ಯಾವುದೇ ನಿರ್ಬಂಧ ಇಲ್ಲ. ಆದರೆ, ಮತ ಹಾಕಲು ಮಾತ್ರ ನಿರ್ಬಂಧಗಳಿವೆ. ಈ ರೀತಿಯ ಪ್ರಕ್ರಿಯೆಗಳಿಂದಲೇ ಇಂತಹ ಘಟನೆಗಳು ನಡೆಯಲು ಕಾರಣ ಎಂದರು.

ನಡಾವಳಿ ಪುಸ್ತಕ ಕೊಂಡೊಯ್ಯಲು ಅಧಿಕಾರವಿದೆ:

ಗ್ರಾಪಂಗಳಲ್ಲಿ ನಡೆಯುವ ನಡಾವಳಿ ಪುಸ್ತಕವನ್ನು ತಾಪಂ ಇಒ ಕೊಂಡೊಯ್ಯಲು ಅಧಿಕಾರ ಇದೆ. ಆದರೆ, ಸಂಬಂಧಿಸಿದ ಗ್ರಾಪಂ ಪಿಡಿಒಗೆ ತಿಳಿಸಿ ರಿಜಿಸ್ಟರ್‌ನಲ್ಲಿ ನಮೂದಿಸಿ ಸಹಿ ಮತ್ತು ದಿನಾಂಕವನ್ನು ನಮೂದಿಸಿ ಕೊಂಡೊಯ್ಯಬೇಕು. ನಾನು ಜಿಪಂ ಸದಸ್ಯ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಈ ವಿಚಾರವನ್ನು ತಿಳಿದುಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.