ಕೆರಗೋಡು ಗ್ರಾಮಸ್ಥರು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ..!

| Published : Feb 05 2024, 01:49 AM IST

ಕೆರಗೋಡು ಗ್ರಾಮಸ್ಥರು ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ..!
Share this Article
  • FB
  • TW
  • Linkdin
  • Email

ಸಾರಾಂಶ

‘ಕೆರಗೋಡಿನಲ್ಲಿ ಸುಮಾರು ೩೦ರಿಂದ ೪೦ ಜಾತಿಯ ಜನರು ವಾಸವಿದ್ದಾರೆ. ಎಲ್ಲರೂ ಸಾಮರಸ್ಯ-ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಧ್ವಜಸ್ತಂಭ ಸ್ಥಾಪನೆ ಎಲ್ಲಾ ಜಾತಿಯ ಜನರಷ್ಟೇ ಅಲ್ಲದೇ, ಕೆರಗೋಡು ಸುತ್ತಮುತ್ತಲಿನ ಹನ್ನೆರಡು ದೊಡ್ಡಿಯ ಜನರು ಹಣ ಕೊಟ್ಟಿದ್ದಾರೆ. ಪಕ್ಷಾತೀತವಾಗಿಯೂ ಹಣ ಕೊಟ್ಟಿದ್ದಾರೆ. ಊರಿನ ಜನರೆಲ್ಲರೂ ಜಾತ್ಯತೀತವಾಗಿ ಮತ್ತು ಭಾವನಾತ್ಮಕವಾಗಿಯೂ ಒಂದಾಗಿದ್ದೇವೆ. ನಮ್ಮ ಒಗ್ಗಟ್ಟನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಇದು ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಮಕ್ಕೆ ತೆರಳಿ ಅಲ್ಲಿನ ಜನರನ್ನು ಮಾತನಾಡಿಸಿದ ವೇಳೆ ಕೇಳಿಬಂದ ಮಾತುಗಳು.

ಮಂಡ್ಯ ಮಂಜುನಾಥಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿದ್ದೇವೆ. ಈ ಒಗ್ಗಟ್ಟು ಇಂದು-ನಿನ್ನೆಯದಲ್ಲ. ತಲೆತಲಾಂತರದಿಂದಲೂ ಒಂದೇ ಒಂದು ಘರ್ಷಣೆ, ಗಲಭೆ ಊರಿನಲ್ಲಿ ನಡೆದಿಲ್ಲ. ಇದು ಊರಿನ ಜನರಲ್ಲಿರುವ ಒಗ್ಗಟ್ಟಿಗೆ ಸಾಕ್ಷಿ. ನಾವು ರಾಜಕೀಯ ಪ್ರಚೋದನೆಗೂ ಒಳಗಾಗುವವರಲ್ಲ. ಆದರೆ, ಶ್ರೀಆಂಜನೇಯ ಧ್ವಜ ಹಾರಿಸುವುದಕ್ಕಾಗಿಯೇ ಧ್ವಜಸ್ತಂಭ ಸ್ಥಾಪಿಸಿದ್ದು ಅಕ್ಷರಶಃ ಸತ್ಯ.

ಹನುಮ ಧ್ವಜ ವಿವಾದದಿಂದ ಬಿಗುವಿನ ವಾತಾವರಣ ನೆಲೆಸಿರುವ ತಾಲೂಕಿನ ಕೆರಗೋಡು ಗ್ರಾಮಕ್ಕೆ ತೆರಳಿ ಅಲ್ಲಿನ ಜನರನ್ನು ಮಾತನಾಡಿಸಿದ ವೇಳೆ ಕೇಳಿಬಂದ ಮಾತುಗಳಿವು.

ಕೆರಗೋಡಿನಲ್ಲಿ ಸುಮಾರು ೩೦ರಿಂದ ೪೦ ಜಾತಿಯ ಜನರು ವಾಸವಿದ್ದಾರೆ. ಎಲ್ಲರೂ ಸಾಮರಸ್ಯ-ಸೌಹಾರ್ದತೆಯಿಂದ ಬದುಕುತ್ತಿದ್ದೇವೆ. ಧ್ವಜಸ್ತಂಭ ಸ್ಥಾಪನೆ ಎಲ್ಲಾ ಜಾತಿಯ ಜನರಷ್ಟೇ ಅಲ್ಲದೇ, ಕೆರಗೋಡು ಸುತ್ತಮುತ್ತಲಿನ ಹನ್ನೆರಡು ದೊಡ್ಡಿಯ ಜನರು ಹಣ ಕೊಟ್ಟಿದ್ದಾರೆ. ಪಕ್ಷಾತೀತವಾಗಿಯೂ ಹಣ ಕೊಟ್ಟಿದ್ದಾರೆ. ಊರಿನ ಜನರೆಲ್ಲರೂ ಜಾತ್ಯತೀತವಾಗಿ ಮತ್ತು ಭಾವನಾತ್ಮಕವಾಗಿಯೂ ಒಂದಾಗಿದ್ದೇವೆ. ನಮ್ಮ ಒಗ್ಗಟ್ಟನ್ನು ಒಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

೪೦ ವರ್ಷದ ಸ್ತಂಭ ಶಿಥಿಲ:

ಸುಮಾರು ೪೦ ವರ್ಷಗಳಿಂದಲೂ ಈ ಜಾಗದಲ್ಲಿದ್ದ ಧ್ವಜಸ್ತಂಭದಲ್ಲಿ ಆಂಜನೇಯ ಧ್ವಜವೇ ಹಾರಾಡುತ್ತಿತ್ತು. ಸುಮಾರು ೨೫ ಅಡಿ ಎತ್ತರದ ಆ ಕಂಬ ಶಿಥಿಲವಾಗಿತ್ತು. ಈಗಲೂ ಆ ಕಂಬ ಸ್ಥಳದಲ್ಲೇ ಬಿದ್ದಿದೆ ಎಂದು ತೋರಿಸಿದರು. ಆ ಕಂಬವನ್ನು ತೆರವುಗೊಳಿಸಿ ಶಾಶ್ವತವಾದ ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾಮದ ಜನರೆಲ್ಲರೂ ಒಮ್ಮತದಿಂದ ತೀರ್ಮಾನ ಮಾಡಿದ್ದೆವು.

೧೦೮ ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಬೇಕು ಎಂದಾಗ ೩.೫೦ ಲಕ್ಷ ರು. ಖರ್ಚಾಗುತ್ತದೆ ಎಂಬ ವಿಷಯ ತಿಳಿದು ಕೆರಗೋಡು ಗ್ರಾಮದ ಜನರಷ್ಟೇ ಅಲ್ಲದೇ, ಸುತ್ತಮುತ್ತಲ ಮರಿಲಿಂಗನದೊಡ್ಡಿ, ಪಂಚೇಗೌಡನದೊಡ್ಡಿ, ಕಲ್ಮಂಟಿ ದೊಡ್ಡಿ, ಅಂಕಣ್ಣನ ದೊಡ್ಡಿ, ತಾಳೆಮೆಳೆದೊಡ್ಡಿ, ಅಗಸರದೊಡ್ಡಿ, ಕುಂಬಾರದೊಡ್ಡಿ, ಕೋಡಿದೊಡ್ಡಿ, ಹೊಸೂರು ಮುದ್ದನದೊಡ್ಡಿ, ಕೆರಗೋಡು ದೊಡ್ಡಿ, ಕುಳ್ಳಂಗಿನ ದೊಡ್ಡಿ (ಚಿಕ್ಕಬಾಣಸವಾಡಿ), ಸಿದ್ದೇಗೌಡನದೊಡ್ಡಿ ಸೇರಿದಂತೆ ೧೨ ದೊಡ್ಡಿಯ ಜನರು ಕೈಲಾದಷ್ಟು ಹಣವನ್ನು ಧ್ವಜಸ್ತಂಭಕ್ಕೆ ಕೊಟ್ಟಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಕೂಡ ಪಕ್ಷಬೇಧ ಮರೆತು ಹಣ ಕೊಟ್ಟಿದ್ದಾರೆ ಎಂದು ಕೆರಗೋಡು ಗ್ರಾಮದ ಜಗದೀಶ್ ಹೇಳುವ ಮಾತಾಗಿದೆ.

ನಿಷೇಧಾಜ್ಞೆ ನಡುವೆ ಊರು ಶಾಂತ:

ನಿಷೇಧಾಜ್ಞೆ ನಡುವೆಯೂ ಊರು ಇಷ್ಟು ಶಾಂತವಾಗಿದೆ ಎಂದರೆ ಅದಕ್ಕೆ ಗ್ರಾಮದ ಜನರಲ್ಲಿರುವ ಒಗ್ಗಟ್ಟೇ ಮುಖ್ಯ ಕಾರಣ. ಈಗಲೂ ನಾವು ಅಣ್ಣ-ತಮ್ಮಂದಿರಂತೆಯೇ ಇದ್ದೇವೆ. ಚುನಾವಣೆ ಬಂದಾಗ ಅವರಿಷ್ಟ ಬಂದವರಿಗೆ ಓಟು ಹಾಕಿಕೊಳ್ಳುತ್ತಾರೆ. ಮರುದಿನಕ್ಕೆ ಎಲ್ಲರೂ ಒಂದಾಗಿರುತ್ತಾರೆ. ಗಲಾಟೆ, ಗಲಭೆ, ರಕ್ತಪಾತವಾದ ನಿದರ್ಶನಗಳೇ ನಮ್ಮೂರಿಗಿಲ್ಲ ಎನ್ನುವ ಮಾತನ್ನು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಎಲ್.ಕೃಷ್ಣ ಹೇಳುತ್ತಾರೆ.

ಮೊದಲು ಧ್ವಜಸ್ತಂಭವನ್ನು ಕೆರಗೋಡು ಗ್ರಾಮದ ಬಳಿ ಇರುವ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಎದುರಿನಲ್ಲೇ ನಿರ್ಮಿಸಬೇಕು ಎಂದು ನಿರ್ಧರಿಸಿದ್ದೆವು. ಆದರೆ, ಇಲ್ಲಿ ಬಸ್ ನಿಲ್ದಾಣ ಬರುವುದರಿಂದ ಮೇಲಕ್ಕೆ ಆದಂತೆ ನಿರ್ಮಿಸಿಕೊಳ್ಳಿ ಎಂದು ಶಾಸಕರು ಸೂಚಿಸಿದ್ದ ಮೇರೆಗೆ ನಾವು ಅದಕ್ಕೆ ಸಹಮತ ವ್ಯಕ್ತಪಡಿಸಿದ್ದೆವು.

ಹನುಮಧ್ವಜಕ್ಕಾಗಿಯೇ ಧ್ವಜಸ್ತಂಭ ನಿರ್ಮಾಣ:

ಶ್ರೀಆಂಜನೇಯಸ್ವಾಮಿ ಧ್ವಜ ಹಾರಾಟಕ್ಕಾಗಿಯೆ ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾಮ ಪಂಚಾಯ್ತಿಯ ಅನುಮತಿಯನ್ನು ಕೇಳಿದ್ದೆವು. ಇದಕ್ಕಾಗಿ ಒಂದಲ್ಲ, ಎರಡಲ್ಲ, ಮೂರು ಸಾವಿರ ಅರ್ಜಿಗಳನ್ನು ಪಂಚಾಯ್ತಿಗೆ ಕೊಟ್ಟಿದ್ದೇವೆ. ಧ್ವಜಸ್ತಂಭ ಬೇಡಿಕೆ ಹನುಮಧ್ವಜ ಹಾರಾಟಕ್ಕಾಗಿಯೇ ಎನ್ನುವುದು ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ ಸೇರಿದಂತೆ ಎಲ್ಲರಿಗೂ ಗೊತ್ತಿರುವ ವಿಚಾರವಾಗಿತ್ತು. ಗ್ರಾಮ ಪಂಚಾಯ್ತಿ ಸಾಮಾನ್ಯ ಸಭೆಗಳಲ್ಲೂ ಈ ವಿಚಾರ ಸಾಕಷ್ಟು ಬಾರಿ ಚರ್ಚೆಗೆ ಬಂದಿದೆ. ಅಲ್ಲಿ ಕೆಲ ಸದಸ್ಯರನ್ನು ಹೊರತುಪಡಿಸಿ ಉಳಿದವರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದರು ಎಂದು ಗ್ರಾಪಂ ಸದಸ್ಯ ರಾಜೇಶ್ ತಿಳಿಸಿದರು.

ಧ್ವಜಸ್ತಂಭ ಸ್ಥಾಪನೆಗೆ ಮತ್ತು ಶ್ರೀಆಂಜನೇಯಸ್ವಾಮಿ ಧ್ವಜ ಹಾರಾಟಕ್ಕೆ ಪಂಚಾಯ್ತಿಯ ೧೮ ಸದಸ್ಯರು ಜ.೨೫ರಂದು ಬೆಂಬಲ ಸೂಚಿಸಿ ನಿರ್ಣಯ ಮಾಡಿದ್ದಾರೆ. ಒಂದಿಬ್ಬರು ಸದಸ್ಯರು ಬಿಟ್ಟರೆ ಎಲ್ಲಾ ಸದಸ್ಯರೂ ಧ್ವಜದ ಪರವಾಗಿದ್ದಾರೆ. ಇಡೀ ಊರಿನ ಜನರೆಲ್ಲರೂ ಹನುಮ ಧ್ವಜದ ಪರವಾಗಿ ನಿಂತಿದ್ದಾರೆ. ಧ್ವಜಸ್ತಂಭ ಸ್ಥಾಪನೆಯಿಂದ ಆರಂಭವಾಗಿ ಹನುಮಧ್ವಜ ಹಾರಾಡುವ ತನಕ ಒಬ್ಬರೇ ಒಬ್ಬರೂ ಕೂಡ ಕಾನೂನಿನ ಕೊಂಕನ್ನು ಎತ್ತಿರಲಿಲ್ಲ. ಈಗ ಎಲ್ಲರೂ ಧ್ವಜಸ್ತಂಭವನ್ನು ಕಾನೂನಿನ ಕುಣಿಕೆಗೆ ಹಾಕಿ ತೂಗಿ ನೋಡುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.

ಕಾನೂನಿನ ಸಮಸ್ಯೆಯಾಗುವುದನ್ನು ಮೊದಲೇ ಹೇಳಬೇಕಿತ್ತು:

ಸಾರ್ವಜನಿಕ ಸ್ಥಳದಲ್ಲಿ ನಿರ್ಮಾಣ ಮಾಡಲಾಗುವ ಧ್ವಜ ಸ್ತಂಭದಲ್ಲಿ ರಾಷ್ಟ್ರಧ್ವಜ, ನಾಡಧ್ವಜವೇ ಹಾರಾಡಬೇಕು. ಅಲ್ಲಿ ಬೇರೆ ಧ್ವಜಗಳಿಗೆ ಅವಕಾಶವಿಲ್ಲ ಎಂದು ಮೊದಲೇ ಹೇಳಬೇಕಿತ್ತು. ಸ್ಥಳ ಮಹಜರು ನಡೆಸಿದ ಪಂಚಾಯ್ತಿ ಅಧ್ಯಕ್ಷರು ಅಥವಾ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಯಾರೊಬ್ಬರೂ ಸರ್ಕಾರಿ ಜಾಗದಲ್ಲಿ ಶ್ರೀಆಂಜನೇಯಸ್ವಾಮಿ ಧ್ವಜ ಹಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲವೆಂದು ತಿಳಿಸಿಕೊಡಲಿಲ್ಲ. ಧ್ವಜಸ್ತಂಭ ಸ್ಥಾಪನೆಯಿಂದ ಈ ರೀತಿಯ ಕಾನೂನು ಸಮಸ್ಯೆ ಎದುರಾಗುತ್ತದೆ ಎಂದಿದ್ದರೆ ನಾವ್ಯಾರೂ ಧ್ವಜಸ್ತಂಭ ನಿರ್ಮಾಣ ಮಾಡುತ್ತಿರಲಿಲ್ಲ. ಅದಕ್ಕೆ ಬೇರೆ ಜಾಗವನ್ನು ಹುಡುಕಿಕೊಳ್ಳುತ್ತಿದ್ದೆವು ಎಂದು ಗ್ರಾಮದ ಬಸಂತ್ ತಿಳಿಸಿದರು.

ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯೇ ಏನೂ ಆಗುವುದಿಲ್ಲ, ಅನುಮತಿ ಪಡೆದುಕೊಳ್ಳಬಹುದೆಂದು ಹುರಿದುಂಬಿಸಿದರು. ಧ್ವಜಸ್ತಂಭ ಸ್ಥಾಪನೆಗೆ ಅಡಿಪಾಯ ಹಾಕಿ, ಕಾಂಕ್ರೀಟ್ ನಿರ್ಮಿಸಿ ಧ್ವಜಕಂಬ ತಂದಿರುವ ಸಮಯದಲ್ಲೂ ಅಧಿಕಾರಿಗಳಾಗಲೀ, ಪಂಚಾಯ್ತಿಯವರಾಗಲೀ ಒಬ್ಬರೂ ಚಕಾರ ಎತ್ತದೆ ಮೌನವಾಗಿದ್ದರು. ಆಗಲಾದರೂ ಕಾನೂನಾತ್ಮಕ ಸಮಸ್ಯೆ ಎದುರಾಗಲಿದೆ ಎನ್ನುವುದನ್ನು ಯಾರಾದರೂ ಹೇಳಬೇಕಿತ್ತಲ್ಲವೇ. ಊರಿನ ಜನರೆಲ್ಲರೂ ಒಟ್ಟುಗೂಡಿ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ಶ್ರೀಆಂಜನೇಯನ ಧ್ವಜವನ್ನು ಹಾರಾಟ ಮಾಡಿದ ನಂತರ ಕಾನೂನಾತ್ಮಕ ಸಮಸ್ಯೆಯನ್ನು ಮುಂದಿಡುತ್ತಿರುವುದು ನ್ಯಾಯವೇ?, ಈಗ ಇಂತಹ ಸ್ಥಳದಲ್ಲಿ ಇಂತಹುದೇ ಧ್ವಜ ಹಾರಿಸಬೇಕು ಎಂದು ವಾದ ಮುಂದಿಡುತ್ತಿರುವವರು ಆಗ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.