ಸಾರಾಂಶ
ರಾಜ್ಯದಲ್ಲಿ ಸೆರೆ ಹಿಡಿದ ಕಾಡಾನೆ ಕೇರಳದ ವಯನಾಡಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಕಾರಣಕ್ಕಾಗಿ ರಾಜ್ಯ ಸರ್ಕಾರ 15 ಲಕ್ಷ ರು. ಪರಿಹಾರ ನೀಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಸೆರೆ ಹಿಡಿದ ಕಾಡಾನೆ ಕೇರಳದ ವಯನಾಡಿನಲ್ಲಿ ವ್ಯಕ್ತಿಯೊಬ್ಬನನ್ನು ಕೊಂದ ಕಾರಣಕ್ಕಾಗಿ ರಾಜ್ಯ ಸರ್ಕಾರ 15 ಲಕ್ಷ ರು. ಪರಿಹಾರ ನೀಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.
ಅಲ್ಲದೆ, ಕೇರಳ ಸರ್ಕಾರಕ್ಕಿಂತ 5 ಲಕ್ಷ ರು. ಹೆಚ್ಚಿನ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ. ಈ ಮಧ್ಯೆ ಪರಿಹಾರ ಘೋಷಣೆ ವೇಳೆ ನಿಯಮ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
2023ರ ನವೆಂಬರ್ ತಿಂಗಳಲ್ಲಿ ಹಾಸನದ ಬೇಲೂರಿನ ಅರಣ್ಯ ಪ್ರದೇಶದಲ್ಲಿ ದಂತ ರಹಿತ ಗಂಡಾನೆ (ಮಕನಾ) ಸೆರೆ ಹಿಡಿಯಲಾಗಿತ್ತು. ನಂತರ ಆ ಆನೆಗೆ ಕಾಲರ್ ಐಡಿ ಅಳವಡಿಸಿ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗಿತ್ತು.
ಆ ಆನೆ ಎರಡು ತಿಂಗಳ ನಂತರ ಕೇರಳ ರಾಜ್ಯದ ವಯನಾಡು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತಲ್ಲದೆ, ಫೆ. 10ರಂದು ವಯನಾಡು ಜಿಲ್ಲೆಯ ಬೇಗೂರಿನ ಚತಿಗಡದಲ್ಲಿ ಅಜೀಶ್ ಎಂಬಾತ ಮೇಲೆ ದಾಳಿ ಮಾಡಿ ಕೊಂದಿತ್ತು.
ದಾಳಿ ಮಾಡಿದ ಆನೆಯು ಕರ್ನಾಟಕ ರಾಜ್ಯದಲ್ಲಿ ಸೆರೆ ಸಿಕ್ಕಿದ್ದ ಕಾರಣಕ್ಕಾಗಿ ಮೃತ ಅಜೀಶ್ ಕುಟುಂಬಕ್ಕೆ ಪರಿಹಾರ ನೀಡುವಂತೆ ವಯನಾಡು ಸಂಸದ ರಾಹುಲ್ ಗಾಂಧಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.
ಅಲ್ಲದೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು.
ಕಾಂಗ್ರೆಸ್ ನಾಯಕರ ಮನವಿಯನ್ನು ಪುರಸ್ಕರಿಸಿದ್ದ ಈಶ್ವರ್ ಖಂಡ್ರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಪ್ಪಿಗೆ ಪಡೆದು ಅಜೀಶ್ ಕುಟುಂಬದವರಿಗೆ 15 ಲಕ್ಷ ರು. ಪರಿಹಾರ ಘೋಷಿಸಿದ್ದಾರೆ.
ಕರ್ನಾಟಕದಲ್ಲಿ ಸೆರೆ ಸಿಕ್ಕಿದ್ದ ಒಂದೇ ಕಾರಣಕ್ಕಾಗಿ ಆನೆ ದಾಳಿಯಿಂದ ಮೃತಪಟ್ಟ ಕೇರಳದ ವ್ಯಕ್ತಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿ ವಿವಾದಕ್ಕೆ ಗುರಿಯಾಗಿದೆ.
ಕೇರಳದ ಜನಪ್ರತಿನಿಧಿಗಳ ಮನವಿ ಮೇರೆಗೆ ರಾಜ್ಯ ಸರ್ಕಾರ 15 ಲಕ್ಷ ರು. ಪರಿಹಾರ ಘೋಷಿಸಿದೆ. ಆದರೆ, ಕೇರಳ ಸರ್ಕಾರವೇ ಮೃತ ಅಜೀಶ್ ಕುಟುಂಬದವರಿಗೆ 10 ಲಕ್ಷ ರು. ಪರಿಹಾರ ನೀಡುವುದಾಗಿ ಘೋಷಿಸಿದೆ. ಅಂದರೆ ಕೇರಳ ಸರ್ಕಾರಕ್ಕಿಂತ ಕರ್ನಾಟಕ ಸರ್ಕಾರ 5 ಲಕ್ಷ ರು. ಹೆಚ್ಚುವರಿ ಪರಿಹಾರ ನೀಡುತ್ತಿದೆ.
ಅಲ್ಲದೆ, ನಿಯಮದಂತೆ ಆನೆ ದಾಳಿಗೆ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡುವುದಕ್ಕೂ ಮುನ್ನ ವೈದ್ಯರಿಂದ ಯಾವ ಕಾರಣದಿಂದ ಮರಣ ಹೊಂದಿದ್ದಾರೆ ಎಂಬ ಬಗ್ಗೆ ಮರಣ ಪ್ರಮಾಣಪತ್ರ ಪಡೆಯಲಾಗುತ್ತದೆ.
ಆದರೆ, ಕೇರಳದ ವ್ಯಕ್ತಿಗೆ ಪರಿಹಾರ ಘೋಷಣೆಗೂ ಮುನ್ನ ಅದ್ಯಾವುದನ್ನೂ ಪರಿಗಣಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆನೆ ಗಣತಿಯ ಪ್ರಕಾರ ರಾಜ್ಯದಲ್ಲಿ 6,395 ಆನೆಗಳಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.
ಅಲ್ಲದೆ, ರಾಜ್ಯದಲ್ಲಿ 9 ಆನೆ ಕಾರಿಡಾರ್‌ಗಳಿವೆ. ಅದರಲ್ಲಿ ಕರ್ನಾಟಕ-ತಮಿಳುನಾಡು, ಕೇರಳ ರಾಜ್ಯವನ್ನು ವ್ಯಾಪಿಸಿರುವ ಐದಕ್ಕೂ ಹೆಚ್ಚಿನ ಕಾರಿಡಾರ್‌ಗಳಿವೆ.
ಸದ್ಯ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದ್ದನ್ನು ಗಮನಿಸಿದರೆ, ಆ ಕಾರಿಡಾರ್‌ಗಳಲ್ಲಿ ಆನೆಗಳು ಸಂಚರಿಸುವಾಗ ತಮಿಳುನಾಡು, ಕೇರಳದಲ್ಲಿ ಏನೇ ಅಹಿತಕರ ಘಟನೆಗಳು ನಡೆದರೂ ಕರ್ನಾಟಕವೇ ಹೊಣೆ ಎಂಬಂತಾಗಿದೆ.